Friday, 4 March 2022

Qatar Mail: 'ಐ ಡೋಂಟ್ ರೇಪ್ ಮೈ ಲೆನ್ಸ್!' ಇದು ಭ್ರಮೆಯಲ್ಲವೆಂದು ಖಚಿತಪಡಿಸಿಕೊಂಡೆ

 ಕತಾರ್ ಮೇಲ್ | Qatar Mail :  ಅಷ್ಟಕ್ಕೂ ತಾವು ಮಾತನಾಡಿದ್ದರಲ್ಲಿ ತಪ್ಪೇನಿತ್ತು, ಗುಂಪಿನಲ್ಲಿ ಬೇರೆ ಯಾರಿಗೂ ಬರದೇ ಇದ್ದ ಕೋಪ ನನಗೇಕೆ ಬರಬೇಕಿತ್ತು, ನಾನು ಫೋಟೋಗ್ರಫಿಯಲ್ಲಿ ಕಣ್ಣು ಬಿಡುತ್ತಿರುವ ಕೂಸು, ಚರ್ಚೆ ಮಾಡುತ್ತಿದ್ದವರು ಹಿರಿಯ ಫೋಟೋಗ್ರಾಫರ್ ಗಳು, ಅದರಲ್ಲೂ ಎಲ್ಲಾ ಗಂಡಸರು ಅನ್ನುವುದೂ ತಿಳಿದಿರಲಿಲ್ಲವೇ ಎಂದು ಆತ ನನ್ನನ್ನೇ ಮರುಪ್ರಶ್ನೆ ಮಾಡಿದಾಗ ಮೈ ಪರಚಿಕೊಳ್ಳುವ ಹಾಗಾಯಿತು. "ಇಟ್ ವಾಸ್ ಲೈಕ್ ಎ ಸ್ಮಾಲ್ ಪನಿಷಮೆಂಟ್ ಫಾರ್ ಯು. ನಿನ್ನನ್ನು ಆಗ ತಡೆಯದಿದ್ದರೆ ನಮ್ಮನ್ನು ಮತ್ತಷ್ಟು ಮುಜುಗರಕ್ಕೊಳಪಡಿಸುತ್ತಿದ್ದೆ," ಆತ ದೃಢವಾಗಿ ಹೇಳಿದಾಗ ನಾನು ಮೂಕಳಾದೆ. ಆ ಸಣ್ಣ ವಾಟ್ಸಾಪ್ ರಚಿಸಿ ನನ್ನ ವರ್ತನೆಯನ್ನು ಎಷ್ಟು ಮಾನಿಟರ್ ಮಾಡಿದರು, ನನ್ನನ್ನು ಎಷ್ಟು ಬದಲಾಯಿಸಿದರು, ಅದನ್ನು ರಚಿಸಿದ ಮೂರೇ ತಿಂಗಳಿಗೆ ಅಂಗಡಿ ಯಾಕೆ ಮುಚ್ಚಿದರು ಎಂದು ಕೇಳಿದಾಗ ನಾನು ಅದರಲ್ಲಿ ಸರಿಯಾಗಿ ಭಾಗವಹಿಸುತ್ತಿರಲಿಲ್ಲ, ಅದಕ್ಕೇ ಅದನ್ನು ನಿಲ್ಲಿಸಿದರು ಎಂದು ಆತ ಹೇಳಿದಾಗ ನಗು ಬಂತು.


ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ಛಾಯಾಗ್ರಾಹಕಿ (Chaithra Arjunpuri) 


*


(ಪತ್ರ 5, ಭಾಗ 3)


ನಾನು ಬೇರೊಂದು ಫೋಟೋವಾಕ್ ಗುಂಪಿನ ಸದಸ್ಯತ್ವ ಪಡೆದುಕೊಂಡಿದ್ದರೆ ಬಗ್ಗೆ ತಕರಾರೆತ್ತಿದಾಗ, ಹೆಣ್ಣನ್ನು ವಸ್ತುವಿನ ಹಾಗೆ ಕಾಣುವವರು, ಅತ್ಯಾಚಾರವನ್ನು ಮೆನ್ಸ್ ಟಾಕ್ ಎಂದು ಹಗುರವಾಗಿ ಮಾತನಾಡುವವರ ನಡುವೆ ಒಬ್ಬ ಸ್ವಾಭಿಮಾನವಿರುವ ಹೆಣ್ಣು ಮಗಳಾಗಿ ಹೇಗೆ ಮುಂದುವರೆಯಲು ಸಾಧ್ಯ ಎಂದು ಆತನನ್ನೇ ಕೇಳಿದೆ. ಆತ ಮತ್ತೆ ತಾವಾಡಿದ ಮಾತುಕತೆಯನ್ನು ಸಮರ್ಥಿಸಿಕೊಂಡಾಗ, ಹೆಣ್ಣು ಮಕ್ಕಳ ಬಗ್ಗೆಯಾಗಲಿ, ರೇಪ್ ಬಗ್ಗೆಯಾಗಲಿ ಹಗುರವಾಗಿ ಮಾತನಾಡುವವರ ನಡುವಿನಲ್ಲಿ ನಾನು ಸುರಕ್ಷಿತವಲ್ಲವೆಂದು ನನಗೆ ಆಗಲೂ ಅನ್ನಿಸಿತ್ತು, ಈಗಲೂ ಅನಿಸುತ್ತಿದೆ ಎಂದು ತಿಳಿಸಿದೆ. ಅವರ ಗುಂಪನ್ನು ತೊರೆದುದ್ದರ ಬಗ್ಗೆ ಯಾವುದೇ ವಿಷಾದವಿಲ್ಲವೆನ್ನುವುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿ, ಸತ್ಯವನ್ನು ಅವರ ಬಾಯಿಂದಲೇ ಕೇಳಿ ಮನಸ್ಸು ಮತ್ತಷ್ಟು ಹಗುರವಾಯಿತೆಂದು ಹೇಳಿ ಕರೆಯನ್ನು ಮುಗಿಸಿದೆ. 

 

ಉಡಾಫೆ ಮಾತು: ಆ ಒಂದು ಕರೆ ಮತ್ತೊಮ್ಮೆ ಎರಡು ವರ್ಷಗಳ ಹಿಂದಕ್ಕೆ ನನ್ನನ್ನು ದಬ್ಬಿತು. ಅದೊಂದು ದಿನ ಬೆಳಗ್ಗೆ ಯಾವುದೊ ಫೋಟೋ ಎಡಿಟ್ ಮಾಡುತ್ತಾ ಕೂತಿದ್ದ ನಾನು ನಡುವಲ್ಲಿ ವಾಟ್ಸಾಪ್ ನತ್ತ ಕಣ್ಣಾಡಿಸಿದೆ. ವರ್ಷದ ಹಿಂದೆ ನಾನು ಸೇರಿದ್ದ ಫೋಟೋವಾಕ್ ಗುಂಪಿನಲ್ಲಿ ಹತ್ತನ್ನೆರಡು ನಗುವ ಎಮೋಜಿಗಳು, ಮೇಲಕ್ಕೆ ಸ್ಕ್ರೋಲ್ ಮಾಡಿದರೆ ನಾನು ಕರೆ ಮಾಡಿದ ವ್ಯಕ್ತಿಯ ಹೇಳಿಕೆ ರಪ್ಪನೆ ಕಣ್ಣಿಗೆ ರಾಚಿದಂತಾಗಿ ಬೆಚ್ಚಿಬಿದ್ದೆ. "ಐ ಡೋಂಟ್ ರೇಪ್ ಮೈ ಲೆನ್ಸ್"! ಅದಕ್ಕೆ ಉತ್ತರವಾಗಿ ಉಳಿದವರ ನಗುವ, ಕಣ್ಣಲ್ಲಿ ಹೃದಯವನ್ನು ತೋರುವ ಎಮೋಜಿಗಳು, ವಾವ್ ಏನು ಹೇಳಿದಿರಿ ಅಣ್ಣ ಎನ್ನುವ ಮೆಚ್ಚುಗೆಯ ಸಾಲುಗಳನ್ನು ಕಂಡು ನಂಬಲು ಸಾಧ್ಯವಾಗದೆ, ನನ್ನ ಭ್ರಮೆಯೇನೋ ಎಂದುಕೊಂಡು ಮತ್ತೆ ಮತ್ತೆ ಮೇಲೆ ಕೆಳಗೆ ಸ್ಕ್ರೋಲ್ ಮಾಡಿ ಎರಡೆರಡು ಬಾರಿ ನೋಡಿದೆ. ಭ್ರಮೆಯಲ್ಲ, ಅದೇ ಸಾಲು, ಲೌಡ್ ಅಂಡ್ ಕ್ಲಿಯರ್. 

 

ಆ ಮಾತನ್ನು ಹೇಳಿದ ವ್ಯಕ್ತಿ, ಆತನ ಮಾತಿಗೆ ಮೆಚ್ಚುಗೆ ಸೂಚಿಸಿದ ವ್ಯಕ್ತಿಗಳೆಲ್ಲರೂ ಎರಡೆರಡು ಹೆಣ್ಣು ಮಕ್ಕಳ ತಂದೆ ಎನ್ನುವುದನ್ನು ನೋಡಿ ಮತ್ತಷ್ಟು ವಿಷಾದವೆನಿಸಿತು. ಆ ವ್ಯಕ್ತಿ ಅತ್ಯಾಚಾರ ಎನ್ನುವ ಪದವನ್ನು ಅಷ್ಟು ಹಗುರವಾಗಿ ಬಳಸಿರುವುದರ ಬಗ್ಗೆ ಅಲ್ಲೇ ನನ್ನ ವಿರೋಧ ವ್ಯಕ್ತಪಡಿಸಿದೆ, ಹೆಣ್ಣೆಂದರೆ ಅಷ್ಟು ಹಗುರವೇ ಎಂದೆ. ತಾನು ಹೆಣ್ಣು ಮಕ್ಕಳನ್ನು ತುಂಬಾ ಗೌರವಿಸುವುದಾಗಿಯೂ, ವಾಸ್ತವವಾಗಿ ತನ್ನ ಕ್ಯಾಮೆರಾ ಮತ್ತು ಲೆನ್ಸ್ ಗಳನ್ನು ತನ್ನ ಗರ್ಲ್ ಫ್ರೆಂಡ್ ಎಂದುಕೊಂಡಿರುವುದಾಗಿಯೂ ಆತ ಉತ್ತರಿಸಿದಾಗ ತಬ್ಬಿಬ್ಬಾದೆ. ಒಂದು ಹೆಣ್ಣಿನ ಮೇಲಾಗುವ ದೈಹಿಕ ಮತ್ತು ಮಾನಸಿಕ ದೌರ್ಜನ್ಯವನ್ನು ಎಷ್ಟು ಸುಲಭವಾಗಿ, ಉಡಾಫೆಯಿಂದ ಹೇಗೆ ನೀರ್ಜೀವ ವಸ್ತುಗಳ ಮೇಲೆ ಬಳಸುತ್ತಿದ್ದೀರಿ ಎಂದು ನಾನು ಕೋಪದಲ್ಲಿ ಕೇಳಿದಾಗ ಬಂದ ಉತ್ತರ, "ಅದು ಹಾಗಲ್ಲ, ನಾನು ಕ್ಯಾಶುಯಲ್ ಆಗಿ ಹೇಳಿದೆ ಅಷ್ಟೇ, ಅದನ್ನೇನು ರೇಪ್ ಮಾಡೋಕಾಗುತ್ತಾ?"  


(Source: TV9 Kannada)

Qatar Mail: ಬೇರೆ ವಾಟ್ಸಾಪ್ ಗ್ರೂಪ್ ಗೆ ಹಾಕಿ ನನ್ನನ್ನು ಪರಕೀಯಳಂತೆ ಕಂಡರು

 ಕತಾರ್ ಮೇಲ್ | Qatar Mail :  ಕರೋನಾ ಮಾರಿ ಕತಾರಿಗೆ ವಕ್ಕರಿಸಿ ವರ್ಷಕ್ಕೂ ಮೇಲಾಗಿತ್ತು. ಲಾಕ್ಡೌನ್ ಮುಗಿದು ಹೊರಗೆ ಕಾಲಿಡಲು ಅವಕಾಶ ಸಿಕ್ಕಾಗಲೆಲ್ಲಾ ಫೋಟೋಗ್ರಾಫರ್ ಗಳು ಚಿತ್ರ ತೆಗೆಯಲು ಹೊರಗೆ ಹೋಗುವುದು ಮತ್ತೊಮ್ಮೆ ಪ್ರಾರಂಭವಾಗಿತ್ತು. ಅಂತಹ ಒಂದು ಸಮಯದಲ್ಲಿ ಫೋಟೋ ತೆಗೆಯಲು ಹೋದ ನನಗೆ ಹುಡುಗನೊಬ್ಬ ಹಳೆಯ ಫೋಟೋವಾಕ್ ಗುಂಪಿನ ಹಿರಿಯರೊಬ್ಬರು ನನ್ನ ಬಗ್ಗೆ ಬಹಳ ವಿಚಾರಿಸಿಕೊಂಡರೆಂದು ತಿಳಿಸಿದ. ಆ ಫೋಟೋವಾಕ್ ಗುಂಪಿನಲ್ಲಿದ್ದವರ ಮನಸ್ಥಿತಿಗೆ ಬೇಸತ್ತು ಅವರ ಗುಂಪಿನಿಂದ ದೂರವುಳಿದು ಸುಮಾರು ಎರಡು ವರ್ಷಕ್ಕೂ ಮೇಲಾಗಿತ್ತು. ಈಗ ಅಚಾನಕ್ ನನ್ನ ಬಗ್ಗೆ ವಿಚಾರಿಸಿಕೊಳ್ಳುವಂಥಾದ್ದೇನಿದೆ, ನೇರವಾಗಿ ನನಗೇ ಫೋನಾಯಿಸಬಹುದಿತ್ತಲ್ಲ ಎನ್ನಿಸಿದರೂ ಅಹಂ ನಡುವೆ ಬಂದಿರಬೇಕು ಎಂದುಕೊಂಡು ಸುಮ್ಮನಾದೆ. ಅಷ್ಟಕ್ಕೂ ಎರಡು ವರ್ಷಗಳಿಂದಲೂ ಮನಸ್ಸಿನಲ್ಲಿ ಕೊರೆಯುತ್ತಿದ್ದ ಪ್ರಶ್ನೆಯೊಂದಕ್ಕೆ ಆ ವ್ಯಕ್ತಿಯಿಂದಲೇ ಉತ್ತರವೂ ದೊರಕಬೇಕಿತ್ತು. 


ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ಛಾಯಾಗ್ರಾಹಕಿ (Chaithra Arjunpuri) 


*


(ಪತ್ರ 5, ಭಾಗ 2 )


ಸಂಬಂಧಿಕರನ್ನು, ಗೆಳೆಯರನ್ನು, ಪರಿಚಯದ ವಲಯದಲ್ಲಿ ಸಾಕಷ್ಟು ಮಂದಿಯನ್ನು ಕರೋನಾ ಬಲಿ ತೆಗೆದುಕೊಳ್ಳುತ್ತಿತ್ತು. ಇಂದು ಮಾತನಾಡಿದವರು, ನಾಳೆ ಇರುತ್ತಿರಲಿಲ್ಲ. ನಾಳೆ ನಾನು ಮರೆಯಾಗುತ್ತೇನೋ ಅಥವಾ ಆ ವ್ಯಕ್ತಿಯೋ ಎಂದು ಮನಸ್ಸು ಚುಚ್ಚುತ್ತಲೇ ಇತ್ತು. ಮೂರ್ನಾಲ್ಕು ದಿನಗಳವರೆಗೆ "ಟು ಡು ಆರ್ ನಾಟ್ ಟು ಡು" ಎಂದು ಹತ್ತಾರು ಬಾರಿ ಯೋಚಿಸಿ, ಆ ಹಿರಿಯ ಫೋಟೋಗ್ರಾಫರ್ ಗೆ ಕರೆ ಮಾಡಿದೆ.  

                   

ಕರೆ ಸ್ವೀಕರಿಸಿದ ಆ ವ್ಯಕ್ತಿ ಇಷ್ಟು ವರ್ಷಗಳಾದ ಮೇಲೆ ಕರೆ ಮಾಡುತ್ತಿರುವ ಕಾರಣ ಕೇಳಿ, ಅವರ ಫೋಟೋವಾಕ್ ಗುಂಪಿನೊಂದಿಗೆ ಮಾತನಾಡುವುದು ನಿಲ್ಲಿಸಿದ್ದು ನಾನೇ ಎನ್ನುವುದನ್ನು ನೆನಪಿಸಿದರು. ದನಿಯಲ್ಲಿ ಅದೇ ವ್ಯಂಗ್ಯ ತುಂಬಿತ್ತು. ನಾನು ಹೌದೆಂದು ಒಪ್ಪಿಕೊಂಡು, ನನ್ನನ್ನು ಬೇರೆ ಗುಂಪಿಗೆ ಹಾಕಿ ಪರಕೀಯಳ ಹಾಗೆ ನಡೆಸಿಕೊಂಡಿದ್ದರ ಕಾರಣ ಕೇಳಿದೆ. ವಿಷಯವನ್ನು ಆತ ಬೇರೆಡೆಗೆ ಹೊರಳಿಸುವ ಪ್ರಯತ್ನ ಪಟ್ಟರೂ, ನಾನು ಪಟ್ಟು ಹಿಡಿದೆ. ಕರೋನಾ ಸಮಯ, ನಾಳೆ ನಾನಿರುತ್ತೇನೋ, ಆತನಿರುತ್ತಾನೋ, ಅಸಲಿ ವಿಚಾರ ತಿಳಿದರೆ ಮನಸ್ಸು ಹಗುರವಾಗುತ್ತದೆ ಎಂದು ತಿಳಿಸಿದೆ.

 

ನನ್ನ ವರ್ತನೆಯನ್ನು ಮಾನಿಟರ್ ಮಾಡುವ ಸಲುವಾಗಿ ನನ್ನನ್ನು ಬೇರೆ ವಾಟ್ಸಾಪ್ ಗ್ರೂಪಿಗೆ ಹಾಕಲಾಗಿತ್ತು ಎನ್ನುವ ಸತ್ಯವನ್ನು ಆತ ಬಹಿರಂಗ ಪಡಿಸಿದಾಗ ಅಚ್ಚರಿಯೇನೂ ಆಗಲಿಲ್ಲ. "ನಾವು ಗಂಡಸರು ಚರ್ಚೆ ಮಾಡ್ತಿದ್ವಿ, ನೀನು ಮಧ್ಯೆ ಬಂದು ದೊಡ್ಡ ಫೆಮಿನಿಸ್ಟ್ ಥರ ಮಾತಾಡಿದ್ದು ನಮಗ್ಯಾರಿಗೂ ಇಷ್ಟವಾಗ್ಲಿಲ್ಲ. ನಿನ್ನ ಮಾತನ್ನು ನಮಗೆ ಜೀರ್ಣಿಸಿಕೊಳ್ಳೋಕಾಗ್ಲಿಲ್ಲ. ಇಟ್ ವಾಸ್ ಮೆನ್ಸ್ ಟಾಕ್, ಆ ಥರದ ಮಾತುಕತೆ ನಮಗೆ ಅದೇ ಮೊದಲೇನಲ್ಲ. ಅದೇ ಥರದ, ಅದಕ್ಕಿಂತಲೂ ಬೇರೆ ಥರದ ಮಾತುಗಳು ನಮ್ಮ ನಡುವೆ ಆಗಾಗ ನಡೆಯುತ್ತಲೇ ಇರುತ್ತವೆ..." ಎಂದು ಆ ವ್ಯಕ್ತಿ ಸಮರ್ಥಿಸಿಕೊಳ್ಳುತ್ತಿದ್ದರೆ ನಾನು ಅರೆಕ್ಷಣ ಅವಾಕ್ಕಾದೆ.

 

ಪುರುಷರ ಮಾತುಕತೆ: ನಾನು ಮುಂಚೆ ಊಹಿಸಿದ್ದ ಕಾರಣ ಸರಿಯಾಗಿಯೇ ಇತ್ತು. ಅದೇ ಫೋಟೋವಾಕ್ ಗುಂಪಿನ ಹಿರಿಯ ಗೆಳೆಯನೊಬ್ಬ ಆ ಘಟನೆ ನಡೆದ ಒಂದಷ್ಟು ದಿನಗಳ ಬಳಿಕ, 'ನೀನು ತುಂಬಾ ಸೆನ್ಸಿಟಿವ್ ಹುಡುಗಿ, ಸುಮ್ಮನೆ ಇಲ್ಲದ್ದೆಲ್ಲಾ ಯೋಚಿಸಿ ತಲೆ ಕೆಡಿಸಿಕೊಳ್ಳುತ್ತಿದ್ದೀಯೆ,' ಎಂದು ಬುದ್ಧಿವಾದ ಹೇಳಿದ್ದು ನೆನಪಾಗಿ ಮನಸ್ಸು ಮತ್ತಷ್ಟು ವಿಚಲಿತವಾಯಿತು. ನಾನು ಮುಖ್ಯ ವಾಟ್ಸಾಪ್ ಗುಂಪಿನಲ್ಲಿ ಚರ್ಚೆ ಮಾಡುವುದನ್ನು ತಪ್ಪಿಸದಲೆಂದೇ ನಾಲ್ಕು ಹುಡುಗರ ಒಂದು ವಾಟ್ಸಾಪ್ ಗ್ರೂಪ್ ರಚಿಸಿ, ಅದರಲ್ಲಿ ನನ್ನ ಹೆಸರನ್ನೂ ಸೇರಿಸಿ, ಅದನ್ನು ನೋಡಿಕೊಳ್ಳುತ್ತಿದ್ದ ಇಬ್ಬರು ಹಿರಿಯ ಫೋಟೋಗ್ರಾಫರ್ ಗಳು, "ಬಿ ಎ ಬ್ಯಾಕ್ ಬೆಂಚರ್ ಫಾರ್ ಸಮ್ ಟೈಮ್," ಎಂದು ಸಲಹೆ ನೀಡಿದ್ದು ನೆನಪಾಯಿತು. 


(Source: TV9 Kannada)

Qatar Mail: ಪುರುಷ ಜಗತ್ತಿನೊಳಗೆ ಛಾಯಾಗ್ರಾಹಕಿಯ ಮೌನಯುದ್ಧ

 ಕತಾರ್ ಮೇಲ್ | Qatar Mail :  ಮಾರ್ಗರೆಟ್ ಅಟ್ವುಡ್ ತಮ್ಮ ದಿ ಹ್ಯಾಂಡ್ ಮೇಡ್ಸ್  ಟೇಲ್ ನಲ್ಲಿ, “All you have to do, I tell myself, is keep your mouth shut and look stupid. It shouldn’t be that hard,” ಎಂದು ಹೇಳುತ್ತಾರೆ. ಬಾಯಿ ಮುಚ್ಚಿಕೊಂಡು ಮೂರ್ಖರ ಹಾಗಿರುವುದು ನಿಜಕ್ಕೂ ಅಷ್ಟು ಸುಲಭವೇ? ಮುಂದುವರೆಯುತ್ತಿರುವ ಸಮಾಜದಲ್ಲಿ ಪ್ರತಿದಿನದ ಜಂಜಾಟದಿಂದ ಹೊರಬರಲು ನಮ್ಮ ಸುತ್ತಲೂ ಎಲ್ಲವೂ ಚೆನ್ನಾಗಿದೆ, ಸರಿಯಾಗಿದೆ ಎನ್ನುವ ಸುಳ್ಳಿನ ಪ್ರಪಂಚವನ್ನೇ ನಾವು ಹೆಣ್ಣುಮಕ್ಕಳು ಸೃಷ್ಟಿಸಿಕೊಂಡುಬಿಡುತ್ತೇವೆ. ನಮ್ಮನ್ನೇ ಗಂಧದ ಹಾಗೆ ತೇಯ್ದುಕೊಂಡು ಅಪರಿಮಿತ ನಿರೀಕ್ಷೆಗಳನ್ನು ಪೂರೈಸಲು ಪ್ರಯತ್ನಿಸುತ್ತೇವೆ. ನಮ್ಮ ಸುತ್ತಲಿರುವವರಿಗೆ ಚಂದವಾಗಿ ಕಾಣಿಸಲು ನಮ್ಮನ್ನು ನಾವೇ ದಂಡಿಸಿಕೊಳ್ಳುತ್ತೇವೆ, ಪುರುಷ ಸಮಾಜ ನಮಗಾಗಿ ರೂಪಿಸಿದ ಆದರ್ಶಗಳಿಗೆ ಹೊಂದಿಕೊಳ್ಳಲು ನಮ್ಮ ದೇಹವನ್ನು ಹಸಿವಿನಿಂದ ಬಳಲಿಸುತ್ತೇವೆ. ದಿನನಿತ್ಯದ ಕೆಲಸ, ಮಕ್ಕಳು, ಗಂಡ ಮತ್ತು ಮೌನ ನಿರೀಕ್ಷೆಗಳಿಂದ ನಮ್ಮ ಮನಸ್ಸುಗಳನ್ನೂ ಹಸಿವಿನಿಂದ ಬಳಲಿಸುತ್ತೇವೆ. ಕೊನೆಗೆ ಅವುಲಿಗಳ ಭಾರಕ್ಕೆ ಸೋತು, ಆ ಸೋಲನ್ನೂ ನಗುಮುಖದಿಂದಲೇ ಸ್ವೀಕರಿಸುತ್ತೇವೆ. ಯಾಕೆಂದರೆ, ನಮಗೆ ಸಿಕ್ಕಿರುವ ಬಿರುದು ಬಾವಲಿಗಳೇ ಹೇಳುವಂತೆ ನಾವು ಸಹನಾಮಯಿಗಳು, ಕರುಣಾಮಯಿಗಳು, ನಾವು ಭೂಮಿ ತೂಕದವರು. 

ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ಛಾಯಾಗ್ರಾಹಕಿ (Chaithra Arjunpuri) 


*


(ಪತ್ರ 5, ಭಾಗ 1)


ಮಾರ್ಚ್ 8 ಬಂದರೆ ಸಾಕು ನಾವು ಕಂಡು ಕೇಳರಿಯದ ಪದಗಳಿಂದ ನಮ್ಮನ್ನು, ನಮ್ಮ ಸಾಧನೆಗಳನ್ನು ಎಲ್ಲರೂ ಹೊಗಳುತ್ತಾರೆ. ದಿನವಿಡೀ ದುಡಿದು, ವೃತ್ತಿ ಹಾಗೂ ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಪಾಡಿಕೊಂಡು ಹೋಗುವುದು ಸುಲಭದ ಮಾತೇನಲ್ಲ ಎನ್ನುವ ಮೆಚ್ಚುಗೆಯ ಮಾತುಗಳನ್ನು ಎಲ್ಲರೂ ಹೇಳುವ ಆ ದಿನ ಅಂತಾರಾಷ್ಟ್ರೀಯ ಮಹಿಳಾ ದಿನ. ಆದರೆ ಆ ಒಂದು ದಿನ ನಮ್ಮನ್ನು, ನಮ್ಮ ಸಾಧನೆಗಳನ್ನು ಗುರುತಿಸಿದರೆ ಸಾಕೆ? ಅಸ್ತಿತ್ವದ ದೃಷ್ಟಿಯಿಂದ ನಾವು, ಮಹಿಳೆಯರು, ಸಮಾನ ಹಕ್ಕುಗಳಿಗೆ, ಸಬಲೀಕರಣಕ್ಕೆ ಪ್ರತಿ ದಿನವೂ ಒಂದಲ್ಲ ಒಂದು ರೀತಿಯಲ್ಲಿ ಹೆಣಗುತ್ತಿರುವುದು ಹೊಸ ವಿಚಾರವೇನಲ್ಲ. ನಮ್ಮದೊಂದು ಸ್ಥಾನ ಕಂಡುಕೊಳ್ಳುವುದಕ್ಕೆ ನಾವು ಪುರುಷ ಸಮಾಜದೊಂದಿಗೆ ಮೌನ ಯುದ್ಧದಲ್ಲಿ ತೊಡಗಿಕೊಂಡಿರುವುದು ಹಲವು ಸಲ ಹೊರ ಪ್ರಪಂಚಕ್ಕೆ ತಿಳಿಯುವುದೇ ಇಲ್ಲ. ಇಂಥಾ ಒಂದು ಮೌನ, ಏಕಾಂಗಿ ಯುದ್ಧವನ್ನು ಒಬ್ಬ ಮಹಿಳೆಯಾಗಿ, ಫೋಟೋಗ್ರಾಫರ್ ಆಗಿ ಹೇಗೆಲ್ಲಾ ಎದುರಿಸಬೇಕಾಗುತ್ತದೆ ಎನ್ನುವುದನ್ನು ಹೇಳುತ್ತೇನೆ ಬನ್ನಿ.      

 

ಉಡಾಫೆಯ ಮಾತುಗಳು: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅತ್ಯಾಚಾರದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದಾಗ ನೆನಪಿಗೆ ಬಂದದ್ದು ಎರಡು ಘಟನೆಗಳು. ಹಾಗೆ ನೋಡಿದರೆ, ಆ ಸಾಲನ್ನು ಮೊದಲ ಬಾರಿಗೆ ಕೇಳಿದಾಗ ನಾನಿನ್ನೂ ಹೈಸ್ಕೂಲಿನಲ್ಲಿದ್ದೆ. ವಿಷ್ಣುವರ್ಧನ್ ಜೊತೆಯಲ್ಲಿ ಹಿಂದಿ ಚಿತ್ರನಟಿ ಮಮತಾ ಕುಲಕರ್ಣಿ ನಟಿಸಿದ ಕನ್ನಡ ಚಿತ್ರವೊಂದು ಆಗಷ್ಟೇ ಬಿಡುಗಡೆಯಾಗಿತ್ತು. ಯಾವುದೋ ಕನ್ನಡ ವಾರಪತ್ರಿಕೆಗೆ ನೀಡಿದ್ದ ಸಂದರ್ಶನವೊಂದರಲ್ಲಿ, "ಇಫ್ ಐ ಕಾಂಟ್ ಅವಾಯ್ಡ್ ರೇಪ್, ಐ ವಿಲ್ ಎಂಜಾಯ್ ಇಟ್," ಎನ್ನುವ ಹೇಳಿಕೆಯೊಂದನ್ನು ಆಕೆ ನೀಡಿದ್ದಳು. ಅದನ್ನು ಓದಿದ ಅಪ್ಪ, "ನೋಡು, ಎಷ್ಟು ಅಸಹ್ಯವಾದ ಹೇಳಿಕೆ ಕೊಟ್ಟಿದ್ದಾಳೆ. ಇಂಥವರೆಲ್ಲಾ ನಟಿಯರು, ಇವರಿಗೆ ಚಪ್ಪಾಳೆ, ಶಿಳ್ಳೆ ಬೇರೆ," ಎಂದು ರೇಗಿ ಆ ಹಾಳೆಯನ್ನು ಹರಿದು ಹಾಕಿದ್ದರು. 

 

ಆಗ ಹಳ್ಳಿಯಲ್ಲಿದ್ದ ನಮ್ಮ ಮನೆಯಲ್ಲಿ ಕೇಬಲ್ ಇರಲಿಲ್ಲ, ಇದ್ದದ್ದು ದೂರದರ್ಶನ ಮಾತ್ರ. ಆಗ ನನಗೂ, ನನ್ನ ತಮ್ಮನಿಗೂ ಟಿವಿ ಮುಂದೆ ಕೂರಲು ಅವಕಾಶವಿದ್ದದ್ದು ವಾರಕ್ಕೆರಡು ಬಾರಿ ಮಾತ್ರ - ಗುರುವಾರವೋ, ಶುಕ್ರವಾರವೋ ಬರುತ್ತಿದ್ದ ಕನ್ನಡ ಚಿತ್ರಮಂಜರಿ, ಮತ್ತೊಂದು ಭಾನುವಾರ ಸಂಜೆಯ ಕನ್ನಡ ಸಿನಿಮಾ. ವಾರಕ್ಕೊಮ್ಮೆ ದೂರದರ್ಶನದಲ್ಲಿ ಬರುತ್ತಿದ್ದ ಚಿತ್ರಮಂಜರಿಯಲ್ಲಿ ಮಮತಾ ಕುಲಕರ್ಣಿಯ ಮೊಗವೇನಾದರೂ ಅಪ್ಪಿತಪ್ಪಿ ಬಂದರೆ ಟಿವಿ ಆರಿಸಿ ಬಿಡುತ್ತಿದ್ದರು. ಅಪ್ಪ-ಅಮ್ಮ ಇಬ್ಬರೂ ಆ ವಿಚಾರದಲ್ಲಿ ಬಹಳ ಕಟ್ಟುನಿಟ್ಟಾಗಿದ್ದರು. 

 

ಕಹಿ ಸತ್ಯ: ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ಮಾತ್ರ ಹೀಗೆ ಯೋಚಿಸುತ್ತಾರೆ, ಅದಕ್ಕೆ ಇಂಥಾ ಹೇಳಿಕೆ ನೀಡಿ ವಿವಾದಗಳಿಗೆ ಸಿಲುಕಿ ಬೀಳುತ್ತಾರೆ ಎಂದುಕೊಂಡರೆ ತಪ್ಪಾಗುತ್ತದೆ. ಸಣ್ಣ ಗುಂಪುಗಳಲ್ಲೂ ಹೆಣ್ಣನ್ನು ಕುರಿತು, ಅತ್ಯಾಚಾರದ ಕುರಿತು ಇಷ್ಟೇ ಉಡಾಫೆಯ ಮಾತುಗಳು ಬಂದು ಹೋಗುತ್ತವೆ. ಇದಕ್ಕೆ ಕಾಲ, ದೇಶ, ಗಡಿಗಳೆಂಬ ನಿರ್ದಿಷ್ಟ ಮಿತಿಗಳಿಲ್ಲ. ಒಂದಲ್ಲಾ ಒಂದು ತಿರುವಿನಲ್ಲಿ ಎಲ್ಲರ ಜೀವನದಲ್ಲೂ ಇಂತಹ ಅನಿರೀಕ್ಷಿತ ಮಾತುಗಳು ಕೇಳಿ ಬರುತ್ತವಾದರೂ ಆ ಸಮಯದಲ್ಲಿ ನಾವು ಅವುಗಳನ್ನು ಹೇಗೆ ಮೆಟ್ಟಿ ನಿಲ್ಲುತ್ತೇವೆ, ಯಾವ ರೀತಿ ಪ್ರತಿಕ್ರಿಯಿಸುತ್ತೇವೆ ಎನ್ನುವುದೂ ಮುಖ್ಯವಾಗುತ್ತದೆ.


(Source: TV 9 Kannada)