Showing posts with label TV. Show all posts
Showing posts with label TV. Show all posts

Friday, 1 April 2022

Qatar Mail: ಮಗು ಹುಟ್ಟಿ, ಹೆಂಡತಿ ಕತಾರಿಗೆ ಕಾಲಿಟ್ಟ ಮೇಲೆಯೇ ವಿವಾಹದ ಗುಟ್ಟು ರಟ್ಟಾಗಿದ್ದು!

 ಕತಾರ್ ಮೇಲ್ | Qatar Mail : ಹಳೆಯ ಕಂಪನಿ ಬಿಟ್ಟು ಹೊಸ ನೌಕರಿ ಸಿಕ್ಕಿದ ಮೇಲೆ ಅವನ ಶೋಕಿ ಒಂದು ಕೈ ಜಾಸ್ತಿಯಾಯಿತೆಂದೇ ಹೇಳಬೇಕು. ಬ್ಯಾಂಕಿನಿಂದ ಸಾಲ ಪಡೆದು ಲ್ಯಾಂಡ್ ಕ್ರೂಸರ್ ಖರೀದಿಸಿದ, ಅವನ ಹೊಸ ಗೆಳೆಯರೆಲ್ಲರ ಬಳಿಯೂ ಅದೇ ಕಾರಿರುವುದು ಗಮನಕ್ಕೆ ಬಂದು, ಆರೇ ತಿಂಗಳಿನಲ್ಲಿ ಅದನ್ನು ಮಾರಿ ಮತ್ತೆ ಸಾಲ ಪಡೆದು ನಿಸಾನ್ ಪ್ಯಾಟ್ರೋಲ್ ಖರೀದಿಸಿದ. ಪಾರ್ಟಿ ಹುಚ್ಚು ಹಿಡಿದವನಿಗೆ ಹುಡುಗಿಯರ ಜೊತೆ ಫ್ಲರ್ಟ್ ಮಾಡುವ ಹುಚ್ಚು ಹಿಡಿಯುವುದೆಷ್ಟು ಹೊತ್ತು? ಹೊಸ ಕಂಪನಿಯಲ್ಲಿ ಆತನಿಗೆ ಮದುವೆಯಾಗಿ ಒಬ್ಬ ಮಗಳಿರುವ ವಿಚಾರ ಸಹೋದ್ಯೋಗಿಗಳಿಗೆ ತಿಳಿದೇ ಇರಲ್ಲಿಲ್ಲ. ಅವನ ಫೇಸ್ ಬುಕ್ ಅಕೌಂಟಿನಲ್ಲೂ ತಾನು ವಿವಾಹಿತನೆಂದಾಗಲಿ, ತನಗೆ ಮಗಳಿರುವುದಾಗಲಿ ಅವನು ಎಂದೂ ತಿಳಿಸಿರಲಿಲ್ಲ. ಇದು ಅಚ್ಚರಿಯೆನಿಸಿದರೂ, ಇನ್ನೊಬ್ಬ ಗೆಳೆಯನೂ ಇದೇ ರೀತಿ ತನಗೆ ಮದುವೆಯಾಗಿದೆಯೆಂದು ಗೆಳೆಯರೊಂದಿಗೆ ವರ್ಷದವರೆಗೂ ಹೇಳಿಕೊಂಡೇ ಇರಲಿಲ್ಲ. ಅವನಿಗೊಂದು ಮಗು ಹುಟ್ಟಿ, ಹೆಂಡತಿ ಕತಾರಿಗೆ ಕಾಲಿಟ್ಟ ಮೇಲೆಯೇ ಆತನ ವಿವಾಹದ ಗುಟ್ಟು ರಟ್ಟಾಗಿದ್ದು!       

ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ಛಾಯಾಗ್ರಾಹಕಿ (Chaitra Arjunpuri) 


*


(ಪತ್ರ 7, ಭಾಗ 2)


ತಾನು ವಿದೇಶದಲ್ಲಿ ಪದವಿ ಪಡೆದಿರುವುದಾಗಿಯೂ, ಈ ಮುಂಚೆ ಅಲ್-ಜಜೀರ ಟಿವಿ ಚಾನೆಲ್ ನಲ್ಲಿ ಕೆಲಸ ಮಾಡಿರುವುದಾಗಿಯೂ ಸಜಿ ಫೇಸ್ ಬುಕ್ಕಿನಲ್ಲಿ ಮತ್ತು ಕೆಲಸಕ್ಕೆ ಸೇರಿದ ಚಾನೆಲ್ಲಿನ ಗೆಳೆಯರೊಂದಿಗೆ ಹೇಳಿಕೊಂಡಿದ್ದ. ನಾನು ಅಲ್-ಜಜೀರದಲ್ಲಿ ಕೆಲಸ ಮಾಡುತ್ತಿದ್ದಾಗ ಅವನನ್ನು, "ನೀನು ಯಾವಾಗ ನಮ್ಮ ಕಂಪನಿಯಲ್ಲಿ ಕೆಲಸ ಮಾಡಿದ್ದೆಯೋ?" ಎಂದು ಒಂದೆರಡು ಬಾರಿ ಅವನನ್ನು ಚುಡಾಯಿಸಿದ್ದೆ. ಅದಕ್ಕವನು, "ಸುಮ್ಮನಿರಿ ಚೇಚಿ, ಯಾಕೆ ರೇಗಿಸುತ್ತೀರಿ?" ಎಂದು ಮಾತು ಹೊರಳಿಸಿದ್ದ.


ಅವನ ರೂಪಕ್ಕೆ, ಮಾತಿಗೆ  ಮರುಳಾಗಿ ಹುಡುಗಿಯರು ಅವನ ಜೊತೆ ಪಾರ್ಟಿಗಳಿಗೆ ತೆರಳುತ್ತಿದ್ದರು. ಫೇಸ್ ಬುಕ್ಕಿನ ತುಂಬಾ ಹುಡುಗಿಯರ ಜೊತೆ ಆತ ಪಾರ್ಟಿಗಳಲ್ಲಿ ತೆಗೆದುಕೊಂಡ ನೂರಾರು ಚಿತ್ರಗಳು ರಾರಾಜಿಸುತ್ತಿದ್ದವು. ಅವನ ವೈಯಕ್ತಿಕ ಜೀವನದ ಬಗ್ಗೆ ಅರಿವಿದ್ದ ಬೆರಳೆಣಿಕೆಯಷ್ಟು ಗೆಳೆಯರನ್ನು, ನನ್ನ ಗಂಡನನ್ನೂ ಸೇರಿದಂತೆ, ಸಾಧ್ಯವಾದಷ್ಟು ದೂರವಿರಿಸಿದ್ದ. ಆದರೂ ಹೆಂಡತಿ ಮತ್ತು ಸಂಬಂಧಿಕರ ಕಣ್ಣಿಗೆ ಬೀಳದಂತೆ ಹೇಗೆ ಅಷ್ಟು ವರ್ಷ ತನ್ನ ಇಮೇಜನ್ನು ಸಜಿ ಕಾಪಾಡಿಕೊಂಡಿದ್ದ ಎನ್ನುವುದು ಮಾತ್ರ ನಮ್ಮ ಪಾಲಿಗೆ ಈಗಲೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.  


ಆತನ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಕ್ಯಾಮೆರಾಮ್ಯಾನ್ ಒಬ್ಬ ಸಜಿಯ ಹಳೆಯ ಕಂಪೆನಿಯ ಮಾಲೀಕನನ್ನು ಪಾರ್ಟಿಯೊಂದರಲ್ಲಿ ಭೇಟಿ ಮಾಡಿದಾಗ, ಮಾತುಕತೆಯ ನಡುವೆ ಸಜಿ ಬಗ್ಗೆ ವಿಚಾರಿಸಿದಾಗ ಅವನಿಗೆ ಅಚ್ಚರಿಯೊಂದು ಕಾದಿತ್ತು. ಸಜಿ ಹಳೆಯ ಕಂಪನಿಯಲ್ಲಿ ಕಾರ್ ಡ್ರೈವರ್ ಆಗಿದ್ದನೆನ್ನುವ ಸತ್ಯ ತಿಳಿದು ದಂಗಾದ ಕ್ಯಾಮೆರಾಮ್ಯಾನ್ ಈ ವಿಚಾರವನ್ನು ಆಫೀಸಿನಲ್ಲಿ ನಿರ್ದೇಶಕ ಮತ್ತು ನಿರ್ಮಾಪಕರಿಗೆ ತಿಳಿಸಿದ. ಈಗಾಗಲೇ ಅವನನ್ನು ಸಹಾಯಕ ಕ್ಯಾಮೆರಾಮ್ಯಾನ್ ಆಗಿ ನೌಕರಿಗೆ ಸೇರಿಸಿಕೊಂಡು, ವರ್ಷದಿಂದಲೂ ಸಂಬಳ ಮತ್ತು ಇತರೆ ಸೌಲಭ್ಯಗಳನ್ನು ನೀಡಿದ್ದ ಕಂಪನಿ ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅವನ ವಿದ್ಯಾಭ್ಯಾಸದ ಸರ್ಟಿಫಿಕೇಟುಗಳನ್ನು ಕೇಳುವಷ್ಟರಲ್ಲಿ ಆತ ಸದ್ದಿಲ್ಲದಂತೆ ಒಂದು ದಿನ ಮಾಯವಾಗಿಬಿಟ್ಟ. ಅವನ ನಾಪತ್ತೆಯ ಹಿಂದೆ ಬೇರೆಯೇ ಕಾರಣವಿತ್ತು!


ಎಂದಿನಂತೆ ಪಾರ್ಟಿಯೊಂದಕ್ಕೆ ತೆರಳಿದ ಸಜಿ ಆ ರಾತ್ರಿ ಒಬ್ಬ ಸುಂದರ ವಿದೇಶಿ ಹುಡುಗಿಯನ್ನು ಭೇಟಿ ಮಾಡಿದ. ಪರಿಚಯವಾದ ಮೇಲೆ ಆಕೆಯ ಮದ್ಯಕ್ಕೆ ಈತನೇ ಹಣ ತೆತ್ತಿದ್ದಾನೆ. ಕುಡಿತದ ಅಮಲಿನಲ್ಲಿ ಆಕೆ ಏನು ಹೇಳಿದಳೊ, ಈತ ಏನು ಕೇಳಿದನೋ ಗೊತ್ತಿಲ್ಲ. ಸುತ್ತಲೂ ಇದ್ದ ಗೆಳೆಯರ ಪ್ರಕಾರ ಸಜಿ ಆಕೆಯನ್ನು ಎಳೆದಾಡಿದನಂತೆ, ಮತ್ತೆ ಕೆಲವರ ಪ್ರಕಾರ ಮಾತಿಗೆ ಮಾತು ಬೆಳೆದು ಆಕೆಯ ಕೆನ್ನೆಗೆ ಹೊಡೆದನಂತೆ.


ಮಾರನೆಯ ದಿನ ಆಕೆ ಕತಾರ್ ಪ್ರವಾಸ ಮುಗಿಸಿ ಮರಳಿ ತನ್ನ ದೇಶಕ್ಕೆ ಹೊರಟು ನಿಂತಳು. ಹೋಗುವ ಮುನ್ನ, ವಿಮಾನ ನಿಲ್ದಾಣದ ಪೊಲೀಸರಿಗೆ ತನ್ನ ಮೇಲೆ ಸಜಿ ಹಲ್ಲೆ ನಡೆಸಿದ ಎಂದು ದೂರು ನೀಡಿದಳು. ಪೊಲೀಸರಿಂದ ಠಾಣೆಗೆ ಹಾಜರಾಗುವಂತೆ ಕರೆ ಬಂದೊಡನೆ, ದೂರಿನ ಬಗ್ಗೆ ಅರಿಯದ ಸಜಿ ಹೋಗಿ ಪೊಲೀಸರ ಮುಂದೆ ನಿಂತದ್ದೇ ತಡ, ಅವನನ್ನು ಬಂಧಿಸಿದರು. ಬಂಧನಕ್ಕೊಳಗಾದ ಮೇಲೆ ಅವನಿಗೆ ವಿದೇಶಿ ಹುಡುಗಿಯ ದೂರಿನ ಬಗ್ಗೆ ಅರಿವಾಯಿತು. ಮೂರ್ನಾಲ್ಕು ದಿನಗಳಾದರೂ ಸಜಿ ಪತ್ತೆಯಿಲ್ಲದ್ದು ಕಂಡು ಆತನ ಪತ್ನಿ ಅವರಿವರನ್ನು ವಿಚಾರಿಸಿ ಆತ ಜೈಲಿನಲ್ಲಿರುವ ವಿಚಾರವನ್ನು ತಿಳಿದುಕೊಂಡಳು.


ವಾರಗಟ್ಟಲೆ ಆತ ಗೈರು ಹಾಜರಾದಾಗ ಆಫೀಸಿನಲ್ಲೂ ಗುಸು ಗುಸು ಹಬ್ಬಿತು. ಕೆಲವರು ಆತ ಅತ್ಯಾಚಾರವೆಸಗಿದ ಆರೋಪದ ಮೇಲೆ ಬಂಧನಕ್ಕೊಳಪಟ್ಟಿದ್ದಾನೆ ಎಂದು ಸುದ್ದಿ ಹಬ್ಬಿಸಿದರು. ಕೊನೆಗೊಂದು ದಿನ ಬೇಲ್ ಮೇಲೆ ಹೊರಬಂದ ಸಜಿ ತನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ದೂರು ನೀಡಲಾಗಿದೆ ಎಂದು ಸಹೋದ್ಯೋಗಿಗಳೊಡನೆ ನೋವು ತೋಡಿಕೊಂಡ.


ಠಾಣೆಯಿಂದ ಹೊರಬಿದ್ದ ಮೇಲೆ ಸಜಿ ಎಚ್ಚೆತ್ತುಕೊಂಡಿದ್ದ. ಯಾವಾಗ ಬೇಕಾದರೂ ತಾನು ಮತ್ತೆ ಜೈಲು ಪಾಲಾಗಬಹುದು ಎನ್ನುವ ಭಯ ಅವನನ್ನು ಸದಾ ಕಾಡಹತ್ತಿತ್ತು. ಈ ನಡುವೆ ಪೊಲೀಸರು ಭಾನುವಾರ ನ್ಯಾಯಾಲಯಕ್ಕೆ ಹಾಜರಾಗುವಂತೆ ಅವನಿಗೆ ಒಂದು ಗುರುವಾರ ನೋಟೀಸ್ ಕಳುಹಿಸಿದರು. ತಂದೆಗೆ ಹುಷಾರಿಲ್ಲವೆಂದು ಹೇಳಿ ಆಫೀಸಿನಲ್ಲಿ ಒಂದು ವಾರ ರಜಾ ಹಾಕಿ ಶುಕ್ರವಾರವೇ ಹೆಂಡತಿ ಮತ್ತು ಮಗುವಿನ ಜೊತೆ ಮರಳಿ ಭಾರತ ತಲುಪಿಬಿಟ್ಟ. ವಾರ, ತಿಂಗಳಾದರೂ ಆತ ಮರಳದಿದ್ದಾಗ ಗೆಳೆಯರಿಗೆ ಸಂಶಯವಾಯಿತು. ಅವನ, ಮತ್ತವನ ಹೆಂಡತಿಯ ಫೇಸ್ ಬುಕ್ ಅಕೌಂಟುಗಳೂ ಇದ್ದಕ್ಕಿದ್ದಂತೆಯೇ ಮಾಯವಾಗಿಬಿಟ್ಟವು. ಬ್ಯಾಂಕಿನಲ್ಲಿ ಕಾರಿಗೆ ತೆಗೆದುಕೊಂಡ ಸಾಲ, ವೈಯಕ್ತಿಕ ಸಾಲದ ಕಂತು ಪಾವತಿಯಾಗದೆ ಆಫೀಸಿಗೆ ಬ್ಯಾಂಕಿನ ನೋಟೀಸ್ ಗಳು ಬರತೊಡಗಿದಾಗ ಸಹೋದ್ಯೋಗಿಗಳಿಗೆ ಆತ ತಲೆಮರೆಸಿಕೊಂಡಿರುವುದುಮನದಟ್ಟಾಯಿತು. ಆಫೀಸಿನಲ್ಲಿ ತೆಗೆದುಕೊಂಡ ಸಾಲವೂ ಗುಳುಂ!


ಮತ್ತೆ ಆತ ಕತಾರಿಗೆ ಮರಳಲು ಸಾಧ್ಯವೇ ಇಲ್ಲ. ಬಂದರೆ ಕಂಬಿ ಎಣಿಸುವುದಂತೂ ಗ್ಯಾರಂಟಿ. ನೆರೆಯ ದೇಶಗಳೊಡನೆ ಕತಾರ್ ರಾಜಕೀಯ ಬಿಕ್ಕಟ್ಟನ್ನೆದುರುಸುತ್ತಿದ್ದಾಗ, ಅವರಿವರ ಕಾಲು ಹಿಡಿದು ದುಬೈನಲ್ಲಿ ಕೆಲಸ ಗಿಟ್ಟಿಸಿದ ಎಂದು ಕೆಲವರು ಮಾತನಾಡಿಕೊಳ್ಳುವುದು ಕಿವಿಗೆ ಬಿದ್ದದ್ದು ಬಿಟ್ಟರೆ ಸಜಿಯ ಬಗ್ಗೆ ಹೆಚ್ಚಿನ ಸುದ್ದಿ ಇಲ್ಲ. ಆ ಸಮಯದಲ್ಲಿ ಇಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಹಣಕಾಸು ವಿಚಾರದಲ್ಲಿ ಸಿಕ್ಕಿಬಿದ್ದು, ರಾತ್ರೋರಾತ್ರಿ ತಲೆ ಮರೆಸಿಕೊಂಡು ಕತಾರ್ ಬಿಟ್ಟವರೆಲ್ಲಾ ದುಬೈ ಸೇರಿಕೊಂಡಿದ್ದು, ಕೆಲವರು ಅಲ್ಲಿಗೆ ತೆರಳುವ ಮುನ್ನ ತಮ್ಮ ಹೆಸರುಗಳನ್ನೂ ಬದಲಾಯಿಸಿಕೊಂಡಿದ್ದು ಓಪನ್ ಸೀಕ್ರೆಟ್! 


ಒಟ್ಟಿನಲ್ಲಿ ಹೆಣ್ಣನ್ನು ಕೆಣಕಿ ಯಾರು ಉದ್ಧಾರವಾದರೋ ಬಿಟ್ಟರೋ, ಸಜಿ ಮಾತ್ರ ದೇಶವನ್ನೇ ಬಿಟ್ಟು, ಎಲ್ಲರಿಂದ ತಲೆ ಮರೆಸಿಕೊಂಡು ಬದುಕುವ ಸ್ಥಿತಿ ತಂದುಕೊಂಡ. 


(Source: TV9 Kannada)


Qatar Mail: ಇಲ್ಲಿ ಹೆಣ್ಣನ್ನು ಕೆಣಕಿದರೆ ಕಾಳಿಂಗ ಸರ್ಪವನ್ನು ಮೆಟ್ಟಿದಂತೆ!

 ಕತಾರ್ ಮೇಲ್ | Qatar Mail : ಕಳೆದ ವಾರ ಗೆಳೆಯನೊಬ್ಬನ ಮನೆಗೆ ಪಾರ್ಟಿಗೆ ಹೋದಾಗ ಆತನ ಹೆಂಡತಿ ಕಚೇರಿಯಲ್ಲಿ ಸಹೋದ್ಯೋಗಿಯೊಬ್ಬ ಸುಖಾಸುಮ್ಮನೆ ತನಗೆ ಕಿರಿಕಿರಿ ಮಾಡುತ್ತಿರುವ ವಿಚಾರವನ್ನು ಹೇಳಿದಳು. ಯಾವ ಕೆಲಸವನ್ನೂ ಒಪ್ಪದ, ಸದಾ ಎಲ್ಲದರಲ್ಲೂ ತಪ್ಪು ಹುಡುಕುವ ಆತ ಪ್ರತಿ ತಿಂಗಳೂ ಒಂದಲ್ಲ ಒಂದು ಕಾರಣಕ್ಕೆ ಸಂಬಳವನ್ನೂ ಮುರಿದುಕೊಂಡೇ ಕೊಡುತ್ತಾನೆ ಎಂದಳು. ರಜೆ ಹಾಕದೆ ಸಂಬಳವನ್ನು ಏಕೆ ಕತ್ತರಿಸುತ್ತಾನೆ ಎಂದು ಕೇಳಿದಾಗ, ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಒಂದು ದಿನ ಆಫೀಸಿನಿಂದ ಎರಡು ಗಂಟೆ ಬೇಗ ಹೋಗಬೇಕಾಯಿತು. ಮಾರನೇ ದಿನ ಮೈಕೈ ನೋವಿದ್ದರೂ ಕೆಲಸಕ್ಕೆ ಬಂದು, ಕಂಪ್ಯೂಟರ್ ಕೀಲಿಮಣೆಯನ್ನು ಕುಟ್ಟಲಾಗದಿದ್ದರೂ ಕುಟ್ಟಿ ಮಧ್ಯಾಹ್ನವಾಗುವಷ್ಟರಲ್ಲಿ ಜ್ವರ ಬಂದು ಮನೆಗೆ ಹೋರಾಡಬೇಕಾಯಿತು ಎಂದು ಅವಲತ್ತುಕೊಂಡಳು. ಇಲ್ಲಿ ಆಫೀಸಿನಲ್ಲಿ ಕನಿಷ್ಠ ಎಂಟು ಗಂಟೆ ಕೆಲಸ ಕಡ್ಡಾಯ, ಅದರಲ್ಲಿ ಒಂದು ಗಂಟೆ ಕಡಿಮೆಯಾದರೂ ಸಂಬಳ ಕಡಿತ ಮಾಮೂಲು ಎಂದು ಅವಳಿಗೆ ಸಮಾಧಾನಮಾಡಿದೆ. 

ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ಛಾಯಾಗ್ರಾಹಕಿ (Chaitra Arjunpuri) 


*


(ಪತ್ರ 7, ಭಾಗ 1)


ಆತನ ಬಗ್ಗೆ ಮೇಲಿನವರಿಗೆ ದೂರು ಕೊಡು ಎಂದು ಸಲಹೆ ನೀಡಿದಾಗ, ಆತ ಮಾಲೀಕನ ಸಂಬಂಧಿಯೆಂದೂ, ಆಫೀಸಿನಲ್ಲಿ ಇತರರೂ ಆತನಿಗೆ ಹೆದರುತ್ತಾರೆಂದು ಮುಖ ಪೆಚ್ಚು ಮಾಡಿಕೊಂಡಳು. ಯಾಕಾದರೂ ಈ ಕೆಲಸಕ್ಕೆ ಸೇರಿದೆನೋ, ಬೇರೆಲ್ಲಾದರೂ ನೌಕರಿ ಸಿಕ್ಕಿದ್ದರೆ ಇದನ್ನು ಬಿಟ್ಟುಬಿಡುತ್ತಿದ್ದೆ ಎಂದು ನಿಟ್ಟುಸಿರುಬಿಟ್ಟು ಮೇಲೆದ್ದವಳನ್ನು ಮತ್ತೊಬ್ಬ ಗೆಳೆಯನ ಹೆಂಡತಿ ತಡೆದು ನಿಲ್ಲಿಸಿದಳು. ಆಕೆಯ ಸಮಸ್ಯೆಗೆ ತನ್ನ ಬಳಿ ಉತ್ತರವಿದೆಯೆಂದು ಮುಗುಳ್ನಕ್ಕಳು. ಆತ ಮೈ ಕೈ ಸವರಿ ಮಾತಾನಾಡಿಸುತ್ತಾನೆ ಎಂದು ಒಂದು ದೂರು ಕೊಟ್ಟು ನೋಡು, ಅವನಲ್ಲ, ಯಾರೂ ನಿನ್ನ ಸಹವಾಸಕ್ಕೆ ಬರುವುದಿಲ್ಲ ಎಂದಳು. ಅವಳ ಮಾತು ಕೇಳಿ ನಾನೂ, ಗೆಳೆಯನ ಹೆಂಡತಿಯೂ ಅವಾಕ್ಕಾದೆವು. ಅಷ್ಟರಲ್ಲಿ ಅಲ್ಲಿಗೆ ಬಂದ ಗೆಳೆಯ, ಆತ ಹಾಗೇನೂ ಕೆಟ್ಟದಾಗಿ ನಡೆದುಕೊಳ್ಳುವುದಿಲ್ಲ, ಕೆಲಸದ ವಿಷಯದಲ್ಲಿ ಕಿರಿಕಿರಿಯಷ್ಟೆ ಎಂದು ತಿಳಿಸಿದ. ಮಾತ್ರವಲ್ಲ, ತನ್ನ ಹೆಂಡತಿ ತಿಂಗಳಿಗೆ ಮೂರ್ನಾಲ್ಕು ಸಲ ಇಲ್ಲಸಲ್ಲದ ಸಬೂಬು ಹೇಳಿಕೊಂಡು ಆಫೀಸಿನಲ್ಲಿ ಮೈಗಳ್ಳತನ ತೋರಿಸಿದರೆ ಯಾರು ತಾನೇ ಸುಮ್ಮನೆ ಸಂಬಳ ಕೊಡುತ್ತಾರೆ ಎಂದು ಗೊಳ್ಳನೆ ನಕ್ಕ. 


ಭಾರತದಲ್ಲಿ ಹೆಣ್ಣನ್ನು ವಸ್ತುವನ್ನಾಗಿ ನೋಡಿ, ಕಾಲಲ್ಲಿ ಹೊಸಕಿ ಹಾಕುವ, ಅತ್ಯಾಚಾರ ಮಾಡಿ, ದಬ್ಬಾಳಿಕೆ ಮಾಡಿ ರಾಜಾರೋಷವಾಗಿ ಓಡಾಡುವ ಗಂಡಸರಿದ್ದಾರೆ. ಆದರೆ ಇಲ್ಲಿ ಹೆಣ್ಣನ್ನು ಕೆಣಕಿದರೆ ಕಾಳಿಂಗ ಸರ್ಪವನ್ನು ಮೆಟ್ಟಿದಂತೆ ಎನ್ನುವುದು ಮಾತ್ರ ಅಕ್ಷರಶಃ ನಿಜ. ಒಂದು ವೇಳೆ ಹಾವನ್ನು ಮೆಟ್ಟಿ ಅದರ ಕೋಪದಿಂದ ಬಚಾವಾದರೂ ಬಚಾವಾಗಬಹುದು, ಆದರೆ ಮಹಿಳೆಯನ್ನು ಕೆಣಕಿ ಶಿಕ್ಷೆಯಿಂದ ತಪ್ಪಿಸಿಕೊಂಡವರನ್ನು ನೋಡುವುದು ವಿರಳ. ಆದರೆ ಈ ವಿಚಾರವನ್ನು ದುರುಪಯೋಗ ಪಡಿಸಿಕೊಳ್ಳುವ ಹೆಣ್ಣುಮಕ್ಕಳು ಎಲ್ಲ ಕಡೆಯ ಹಾಗೆ ಇಲ್ಲಿಯೂ ಸಿಗುತ್ತಾರೆ ಎನ್ನುವುದಕ್ಕೆ ಗೆಳೆಯನ ಹೆಂಡತಿ ನೀಡಿದ ಐಡಿಯಾ ಕೇಳಿದ ಮೇಲೆ ನಿಮಗೆ ಅರ್ಥವಾಗಿರಬೇಕಲ್ಲವೇ? ಈ ಆರೋಪ-ಪ್ರತ್ಯಾರೋಪಗಳು ದುರುಪಯೋಗವಾಗಿ ಯಾವ ಮಟ್ಟ ತಲುಪುತ್ತವೆ, ಒಬ್ಬ ವ್ಯಕ್ತಿ ಮತ್ತವನ ಕುಟುಂಬವನ್ನು ಹೇಗೆ ಅಲ್ಲೋಲಕಲ್ಲೋಲ ಮಾಡಿಬಿಡುತ್ತದೆ ಎನ್ನುವುದಕ್ಕೆ ಒಬ್ಬ ಗೆಳೆಯನ ಜೀವನದಲ್ಲಾದ ಏರುಪೇರುಗಳನ್ನು ಇಂದು ಹಂಚಿಕೊಳ್ಳುತ್ತೇನೆ.  


ನನ್ನ ಗಂಡ ಈ ಹಿಂದೆ ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿ ಸಜಿ (ಹೆಸರನ್ನು ಬದಾಲಾಯಿಸಲಾಗಿದೆ)ಯ ಬಗ್ಗೆ ಗೆಳೆಯರಿಂದ ಸಾಕಷ್ಟು ಕೇಳಿದ್ದೆ. ನಾನು ಅವನನ್ನು ಮೊದಲ ಬಾರಿ ಭೇಟಿ ಮಾಡಿದಾಗ ಅವನ ವಯಸ್ಸು 22. ಅಷ್ಟರಲ್ಲೇ ಅವನಿಗೆ ಒಂದು ವರ್ಷದ ಮಗುವಿತ್ತು. ನಿನ್ನದು ಬಾಲ್ಯ ವಿವಾಹವೇನೋ ಎಂದು ನಾನು ಆಗಾಗ ಅವನನ್ನು ರೇಗಿಸುತ್ತಿದ್ದದ್ದೂ ಇದೆ. 


ನೋಡಲು ಚಿತ್ರನಟರ ಹಾಗೆ ಸುಂದರವಾಗಿದ್ದ ಆತ ವಯಸ್ಸಿಗೆ ತಕ್ಕನಾಗಿ ಬಹಳ ಶೋಕಿಲಾಲ. ಓದಿದ್ದು ಮೊದಲ ಪಿಯುಸಿ ಮಾತ್ರವಾದರೂ, ಯಾವ ಪದವೀಧರರಿಗೂ ಕಡಿಮೆಯಿಲ್ಲದಂತೆ ಹರುಳು ಹುರಿದಂತೆ ಇಂಗ್ಲೀಷ್ ಮಾತನಾಡುತ್ತಿದ್ದ. ಪಾಶ್ಚಾತ್ಯರ ಹಾಗೆ ಅವನ ಉಚ್ಚಾರಣೆ ಕೇಳಿದರೆ ಬಹುಶಃ ಆತ ವಿದೇಶದಲ್ಲಿ ಹುಟ್ಟಿ ಬೆಳೆದು, ಅಲ್ಲೇ ವ್ಯಾಸಂಗ ಮಾಡಿರಬೇಕು ಎಂದು ಜನರು ತಪ್ಪು ತಿಳಿದುಕೊಳ್ಳುತ್ತಿದ್ದರು. ಆತನ ಭಾಷಾ ಮೋಡಿಗೆ ಬಿದ್ದೇ ಅವನನ್ನು ಕಂಪನಿಗೆ ಸೇರಿಸಿಕೊಂಡರು ಎಂದು ಗೆಳೆಯರು ಗೇಲಿ ಮಾಡುತ್ತಿದ್ದರು. ಓದಿದ್ದು ಕಡಿಮೆಯಾಗಿದ್ದರಿಂದ, ತಾಂತ್ರಿಕ ವಿಷಯಗಳ ಜ್ಞಾನವೂ ಇಲ್ಲದಿದ್ದರಿಂದ ವಾಹನ ಚಾಲಕನಾಗಿ ಅವನನ್ನು ನೌಕರಿಗೆ ಸೇರಿಸಿಕೊಂಡಿದ್ದರು. 


ಪಾಶ್ಚಿಮಾತ್ಯರ ಮಾಲೀಕತ್ವದ ಕಂಪನಿಯಲ್ಲಿ, ಅಗತ್ಯವಾದ ವಿದ್ಯಾಭ್ಯಾಸವೂ ಇಲ್ಲದೆ ಕೆಲಸ ಗಿಟ್ಟಿಸುವುದು, ಅದು ಚಾಲಕನ ನೌಕರಿಯಾದರೂ, ಇಲ್ಲಿ ಸುಲಭದ ಮಾತಲ್ಲ. ಚಾಲಕನಾದ ಮೇಲೆ ಕ್ಯಾಮೆರಾಗಳನ್ನು, ಲೈಟುಗಳನ್ನು ಶೂಟಿಂಗ್ ಸ್ಥಳಕ್ಕೆ ಸಾಗಿಸುವುದು, ಅವುಗಳನ್ನು ಬೇಕಾದ ಸ್ಥಳಗಳಿಗೆ ಎತ್ತಿರಿಸಿಕೊಡುವುದು ಇದ್ದೇ ಇರುತ್ತದೆ. ವರ್ಷಗಟ್ಟಲೆ ಅದನ್ನೇ ದಿನನಿತ್ಯ ಮಾಡುತ್ತಾ ತಾನೇ ಕ್ಯಾಮೆರಾಮ್ಯಾನ್ ಆಗಬಲ್ಲೆ ಎನ್ನುವ ವಿಶ್ವಾಸ ಅವನಿಗೆ ಹುಟ್ಟಿತು. ಹಾಗೆ ಕ್ಯಾಮೆರಾಮ್ಯಾನ್ ಗಳಾದ ಕೆಲವು ಗೆಳೆಯರನ್ನೂ ಇಲ್ಲಿ ನೋಡಿದ್ದೇನೆ.


ಈ ನಡುವೆ, ಅರಾಬಿಕ್ ಟಿವಿ ಚಾನೆಲ್ ಒಂದರಲ್ಲಿ ಉದ್ಯೋಗ ದೊರೆತು ನನ್ನ ಗಂಡ ಆ ಕಂಪನಿಯನ್ನು ತೊರೆದ. ಅದೇ ಸಮಯದಲ್ಲಿ ಸಜಿ ಸಹ ಅದೇ ಚಾನೆಲ್ಲಿನಲ್ಲಿ ನೌಕರಿಗೆಂದು ಅರ್ಜಿ ಹಾಕಿದ. ಸಂದರ್ಶನವೆಲ್ಲ ಮುಗಿದು ನೌಕರಿಯೂ ದೊರಕಿತು, ಚಾಲಕನಾಗಲ್ಲ, ಸಹಾಯಕ ಕ್ಯಾಮೆರಾಮ್ಯಾನ್ ಆಗಿ. ಸಂದರ್ಶನ ಮಾಡಿದ ಚಾನೆಲ್ ನವರು ಅವನ ಮಾತಿನ ಮೋಡಿಗೆ ಮರುಳಾಗಿ, ಜವಾಬ್ದಾರಿಯುತ ಕೆಲಸವನ್ನು ನೀಡಿದರು. 


ಎಲ್ಲಾ ಸರಿಯಿದೆ, ಹ್ಯಾಪಿ ಎಂಡಿಂಗ್ ಎಂದು ಕೊಳ್ಳೋಣ ಎಂದರೆ ಅದೂ ಸಾಧ್ಯವಿಲ್ಲ. ಕಾರಣ, ಸಜಿಯಲ್ಲಿಯೂ ಕೆಲವು ನೆಗೆಟಿವ್ ಅಂಶಗಳಿದ್ದವು. ಹಾಗೆಂದು ಅವನಿಗೆ ಕುಡಿತ, ಸಿಗರೇಟು, ಜೂಜು ಎಂದು ಯಾವ ದುರಭ್ಯಾಸಗಳೂ ಇರಲಿಲ್ಲ. ಇದ್ದದ್ದು ಶೋಕಿ ಮಾಡಬೇಕು, ಪಾರ್ಟಿ ಮಾಡಬೇಕು, ಎಲ್ಲರ ಮುಂದೆ ತಾನು ದೊಡ್ಡವನು ಎಂದು ಮೆರೆಯಬೇಕೆಂಬ ಹುಚ್ಚು ಮಾತ್ರ. ಪ್ರತಿ ಶುಕ್ರವಾರ ಮತ್ತು ಶನಿವಾರ ಗೆಳೆಯರೊಂದಿಗೆ ಪಾರ್ಟಿ ಮಾಡಲು ದೊಡ್ಡ ಪಂಚತಾರಾ ಹೋಟೆಲುಗಳಿಗೆ ಹೋಗುತ್ತಿದ್ದ. ಜೊತೆಯವರು ಮದ್ಯ ಸೇವಿಸುವಾಗ ಇವನು ಕೋಕಾ ಕೋಲ, ಪೆಪ್ಸಿ ಕುಡಿಯುತ್ತಿದ್ದ. ಗೆಳೆಯರು ಸಿಗರೇಟು ಸೇದುವಾಗ ಇವನು ಬಬ್ಬಲ್ ಗಮ್ ಜಗಿಯುತ್ತಿದ್ದ.


(Source: TV9 Kannada)