Friday 24 June 2022

Qatar Mail: ಮದ್ದೂರಿನಿಂದ ಕತಾರದತನಕ ಚಿನ್ನದ ಮಾಯಾಜಿಂಕೆಯ ಬೆನ್ನಟ್ಟಿ

Qatar Mail : ಅನಾದಿ ಕಾಲದಿಂದಲೂ ಭಾರತೀಯರು ಮತ್ತು ಚಿನ್ನದ ನಡುವೆ ಏನೋ ಒಂದು ಅವಿನಾಭಾವ ಸಂಬಂಧವಿದೆ. ಇದಕ್ಕೆ ವಯಸ್ಸು, ಅಂತಸ್ತು, ಪ್ರದೇಶದ ಹಂಗಿಲ್ಲ ಎನ್ನುವುದಕ್ಕೆ ಸಾಕ್ಷಿ ವರ್ಷದಿಂದ ವರ್ಷಕ್ಕೆ ಮೇಲೆ ಹೋಗುತ್ತಿರುವ ಚಿನ್ನದ ಆಮದು ಮತ್ತು ವ್ಯಾಪಾರ. ಅದು ಒಂದು ಗ್ರಾಂ ಇರಲಿ ನೂರು ಗ್ರಾಂ ಇರಲಿ, ಸ್ತ್ರೀಧನವಾಗಿ ಪ್ರತಿಯೊಂದು ಹೆಣ್ಣಿನ ಹತ್ತಿರ ಇದ್ದೇ ಇರುವ ಹಳದಿ ಲೋಹ ಒಂದು ಮದುವೆಯನ್ನು ನಿಶ್ಚಯಿಸುವ, ಮುರಿಯುವ ಅಥವಾ ಮುಂದೂಡುವ ಪ್ರಬಲ ಶಕ್ತಿ ಹೊಂದಿದೆಯೆಂದರೆ ನಮ್ಮ ಸಮಾಜದಲ್ಲಿ ಇದರ ಸ್ಥಾನ ಎಷ್ಟು ಮಹತ್ವವಾದದ್ದು ಎನ್ನುವುದು ಮನವರಿಕೆಯಾಗುತ್ತದೆ. ನಮಗೆ ಚಿನ್ನ ಖರೀದಿಸಲು ಪ್ರತ್ಯೇಕ ಸಮಯ, ಕಾರಣಗಳು ಬೇಕಿಲ್ಲದಿದ್ದರೂ, ಅಕ್ಷಯ ತೃತೀಯ ಮತ್ತು ಧನ್ತೇರಸ್ ಎಂದು ವರ್ಷಕ್ಕೆ ಎರಡು ಪ್ರತ್ಯೇಕ ದಿನಗಳನ್ನು ಅದಕ್ಕೆಂದೇ ಮೀಸಲಾಗಿಟ್ಟಿದ್ದೇವೆ ಎಂದ ಮೇಲೆ ಚಿನ್ನದ ವಿಚಾರದಲ್ಲಿ ನಮಗಿಂತಲೂ ಬೇರೆ ವ್ಯಾಮೋಹಿಗಳು ಸಿಗುತ್ತಾರೆಯೇ? ಚೈತ್ರಾ ಅರ್ಜುನಪುರಿ, ಪತ್ರಕರ್ತೆ (Chaitra Arjunpuri)


(ಪತ್ರ 13)

ಭಾರತದಲ್ಲಿ ಚಿನ್ನದ ಉತ್ಪಾದನೆ ಕಡಿಮೆಯಿರುವುದರಿಂದ ಬಹುತೇಕ ಬಂಗಾರವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಹೊಳೆಯುವ ಲೋಹವನ್ನು ಆಮದು ಮಾಡಿಕೊಳ್ಳುವುದನ್ನು ಕಡಿಮೆ ಮಾಡಲು ಕಾಲಕಾಲಕ್ಕೆ ವಿವಿಧ ಸರ್ಕಾರಗಳು ಹಲವಾರು ನಿರ್ಬಂಧಗಳನ್ನು ಹಾಕಿಕೊಂಡೇ ಬಂದಿವೆ. ಹಾಗೆ ನೋಡಿದರೆ, 1990ರವರೆಗೆ ಚಿನ್ನದ ಆಮದನ್ನು ಭಾರತ ಬಹುತೇಕ ನಿಷೇಧಿಸಿಯೇ ಬಿಟ್ಟಿತ್ತು. ಭಾರತದ ಚಿನ್ನದ ಬೇಡಿಕೆ 1982ರಲ್ಲಿ ಕೇವಲ 65 ಟನ್‌ಗಳಷ್ಟಿದ್ದದ್ದು, 2020ರಲ್ಲಿ 450 ಟನ್‌ ಗಳಿಗೆ ಹೋಗಿ, 2021ರಲ್ಲಿ 1,050 ಟನ್‌, ಅಂದರೆ 2020ಕ್ಕಿಂತ ಎರಡು ಪಟ್ಟು ಹೆಚ್ಚಾಯಿತು, ಎಂದು ವಿಶ್ವ ಚಿನ್ನ ಸಂಸ್ಥೆ (WGC) ಇತ್ತೀಚಿನ ವರದಿ ತಿಳಿಸುತ್ತದೆ. ಕೋವಿಡ್-19 ಕಾರಣ ಚಿನ್ನದ ಬೆಲೆ ಶೇಕಡಾ 28 ರಷ್ಟು ಹೆಚ್ಚಿದರೂ ಬಂಗಾರವನ್ನು ಕೊಳ್ಳುವವರ ಸಂಖ್ಯೆಯೇನೂ ಕಡಿಮೆಯಾಗಿಲ್ಲವೆಂದರೆ ಚಿನ್ನದ ಜೊತೆಗೆ ಭಾರತೀಯರ ನಂಟು ಎಷ್ಟು ಗಾಢವಾಗಿದೆ ಎನ್ನುವುದು ಅರ್ಥವಾಗುತ್ತದೆ.


ಗಲ್ಫ್ ಬಂಗಾರ

ಮಧ್ಯಪ್ರಾಚ್ಯದಲ್ಲಿ ಚಿನ್ನ ಪರಿಶುದ್ಧವಾಗಿರುವುದು ಮಾತ್ರವಲ್ಲದೆ ಭಾರತಕ್ಕಿಂತಲೂ ಕಡಿಮೆ ದರದಲ್ಲಿ ದೊರಕುತ್ತದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಅದರಲ್ಲೂ ಚಿನ್ನವೆಂಬ ಮಾಯಾಜಿಂಕೆ ದುಬೈನಲ್ಲಿ ಕಡಿಮೆ ಬೆಲೆಗೆ ಹೇರಳವಾಗಿ ಸಿಗುತ್ತದೆ, ನಮ್ಮಲ್ಲಿ ಪೆಟ್ಟಿ ಅಂಗಡಿಗಳಲ್ಲಿ ಮಾರುವ ಹಾಗೆ ಎಲ್ಲೆಂದರಲ್ಲಿ ಒಡವೆಗಳನ್ನು ಮಾರುತ್ತಾರೆ ಎನ್ನುವ ವರ್ಣನೆಗಳನ್ನು ಕಣ್ಣರಳಿಸಿಕೊಂಡು ಕೇಳುವಾಗ ನಾನಿನ್ನೂ ಸ್ಕೂಲಿನ ಮೆಟ್ಟಿಲನ್ನೇ ಹತ್ತಿರಲಿಲ್ಲ.

ಮದ್ದೂರಿನಲ್ಲಿ ನನಗೆ ನೆನಪಿರುವ ಹಾಗೆ ಆಗ ಇದ್ದದ್ದು ಎರಡೇ ಫ್ಯಾನ್ಸಿ ಸ್ಟೋರ್ ಗಳು, ಪದವೂ ಬುದ್ಧಿ ಬಂದ ಮೇಲೆ ತಿಳಿದದ್ದು, ಅವೇನಿದ್ದರೂ ನಮ್ಮ ಪಾಲಿಗೆ ಬಳೆ ಅಂಗಡಿಗಳು ಅಷ್ಟೇ. ಎರಡೂ ಅಂಗಡಿಗಳು ಅಪ್ಪನ ವಿದ್ಯಾರ್ಥಿಗಳವೇ ಆಗಿದ್ದರೂ, ಬಳೆ, ಸುಜಾತ ಪಿನ್, ಶೃಂಗಾರ್ ಕುಂಕುಮ, ಬಟ್ಟೆ ಪಿನ್ನು, ಇತ್ಯಾದಿ ಕೊಂಡುಕೊಳ್ಳಲು ನಾವು ಸದಾ ಹೋಗುತ್ತಿದ್ದದ್ದು ಮಸೀದಿಯ ಬಾಗಿಲಿಗೇ ಅಂಟಿಕೊಂಡಂತಿದ್ದ ಜಿಯಾ ಸಾಹೇಬರ ಅಂಗಡಿಗೆ. ದುಬೈ ಮತ್ತು ಸಿಂಗಪೂರ್ ನಿಂದ ಕೆಲವು ಸಾಮಾನುಗಳನ್ನು ತರಿಸುತ್ತಿದ್ದ ಜಿಯಾ ಮತ್ತೊಂದು ಅಂಗಡಿಗಿಂತಲೂ ಕಡಿಮೆ ಬೆಲೆಗೆ, ಮಹಿಳೆಯರಿಗೆ ಇಷ್ಟವಾಗುವ ಪ್ರಸಾಧನಗಳನ್ನು ಮಾರುತ್ತಿದ್ದುದ್ದರಿಂದಲೋ ಏನೋ ಆತನ ಅಂಗಡಿಯ ಮುಂದೆ ಗಿರಾಕಿಗಳು ಸದಾ ಇದ್ದೇ ಇರುತ್ತಿದ್ದರು. ಆತ ಯಾವುದಾದರೂ ಸಾಮಾನಿಗೆ ಬೆಲೆ ಹೆಚ್ಚು ಹೇಳಿದರೆ ಅಪ್ಪ-ಅಮ್ಮ, “ಏನೋ, ಜಿಯಾ. ಇದನ್ನೂ ದುಬೈನಿಂದ ತರಿಸಿದ್ದೀಯಾ?” ಎಂದು ರೇಗಿಸುತ್ತಿದ್ದರು.


ಬಿಡುವಿನ ಸಮಯದಲ್ಲಿ ಜಿಯಾ ದುಬೈನ ಜೀವನದ ಬಗ್ಗೆ, ಚಿನ್ನದ ಅಂಗಡಿಗಳ ಬಗ್ಗೆ, ಐಷಾರಾಮಿ ಬದುಕಿನ ಬಗ್ಗೆ ರಸವತ್ತಾಗಿ ವರ್ಣಿಸುತ್ತಿದ್ದರೆ, ಪಿಳಿ ಪಿಳಿ ಕಣ್ಣು ಬಿಡುತ್ತಾ ನಾನು ಸೋಜಿಗದಿಂದ ಕಥೆಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ಗಲ್ಫ್ ಆಗಿನ ಕಾಲಕ್ಕೆ ಎಂಥವರನ್ನೂ ಸಿಂಡ್ರೆಲಾ ಮಾಡುವ ಕನಸಿನ ಪ್ರದೇಶವಾಗಿತ್ತು. ನಂತರದ ವರ್ಷಗಳಲ್ಲಿ ವಿಜಯನಗರದ ಸಿರಿವಂತಿಕೆಯನ್ನು ಬಣ್ಣಿಸುತ್ತಾ, ಚಿನ್ನವನ್ನು ರಸ್ತೆಯ ಇಕ್ಕೆಲಗಳಲ್ಲಿ ಮಾರುತ್ತಿದ್ದರು, ಎಂದು ಕ್ಲಾಸಿನಲ್ಲಿ ಟೀಚರ್ ವಿವರಿಸುತ್ತಿದ್ದರೆ ಕಣ್ಣೆದುರಿಗೆ ಬರುತ್ತಿದ್ದದ್ದು ಹಿಂದೆ ಜಿಯಾ ಹೇಳಿದ್ದ ದುಬೈನ ಚಿತ್ರಣವೇ!


ದೋಹಾ ಗೋಲ್ಡ್ ಸೂಕ್

ಮದುವೆಯಾಗಿ ನಾನು ಕತಾರಿಗೆ ಬಂದ ಮೇಲೆ ಮೊದಲ ಸಲ ದೋಹಾ ಗೋಲ್ಡ್ ಸೂಕ್ ಗೆ ಕಾಲಿರಿಸಿದ್ದೆ. ಬಾಲ್ಯದಲ್ಲಿ ಕೇಳಿದ್ದ ಹಾಗೆ ಸಾಲು ಸಾಲಿನಲ್ಲಿ ಪೆಟ್ಟಿಗೆ ಅಂಗಡಿಯ ಹಾಗಿರುವ ಪುಟ್ಟ ಪುಟ್ಟ ಒಡವೆ ಅಂಗಡಿಗಳು, ಎಲ್ಲಿ ನೋಡಿದರೂ ಜಗಮಗಿಸುವ ವೈವಿಧ್ಯಮಯ ಆಭರಣಗಳು, ಅಂಗಡಿಯವರ ಜೊತೆಯಲ್ಲಿ ಚೌಕಾಸಿ ಮಾಡಿ ಬಂಗಾರಕೊಳ್ಳುತ್ತಿರುವ ಮಹಿಳೆಯರ ದೃಶ್ಯ ಬೇರೆಯೇ ಲೋಕಕ್ಕೆ ಕರೆದುಕೊಂಡು ಹೋಗಿತ್ತು. ಕೇರಳ ಮೂಲದ ಅಂಗಡಿಯೊಂದರಲ್ಲಿ ಬೆಲೆ ವಿಚಾರಿಸಿದರೆ, ನಾನು ಬೆಂಗಳೂರಿನಲ್ಲಿದ್ದಾಗ ಒಂದು ಗ್ರಾಮಿಗೆ ರೂ. 1,800 ಇದ್ದ ಚಿನ್ನ ಏಕಾಏಕಿ ರೂ. 2,600ಕ್ಕೆ ಏರಿ ಬಿಟ್ಟಿತ್ತು. ಚಿನ್ನದ ಬೆಲೆ ಕಚ್ಚಾ ತೈಲದ ಮಾರುಕಟ್ಟೆಯ ಮೇಲೆ ಅವಲಂಬಿತವಾಗಿರುತ್ತದೆ ಎನ್ನುವ ತಿಳುವಳಿಕೆ ಆಗ ನನಗಿರಲಿಲ್ಲ.


ಪ್ರತಿಯೊಂದು ವಸ್ತುವಿನ ಬೆಲೆಯನ್ನು ರಿಯಾಲ್ ನಿಂದ ಭಾರತದ ರೂಪಾಯಿಗೆ ಬದಲಾಯಿಸಿ (ಆಗ ಪ್ರತಿ 1 ಕತಾರಿ ರಿಯಾಲ್ ಭಾರತದ ರೂ. 12 ಸಮನಾಗಿತ್ತು, ಈಗ ಅದು ರೂ. 21.52 ಆಗಿದೆ) ನೋಡುವ ಅಭ್ಯಾಸ ಆಗಿನ್ನೂ ಇದ್ದುದ್ದರಿಂದ, ಚಿನ್ನದ ಬೆಲೆಯನ್ನೂ ರೂಪಾಯಿಗೆ ಬದಲಾಯಿಸಿ ನೋಡಿದಾಗ ಅಚ್ಚರಿಯೊಂದು ಕಾದಿತ್ತು. ಬಾಲ್ಯದಿಂದಲೂ ಕೇಳಿಕೊಂಡು ಬಂದಿದ್ದ ವಿಚಾರ ಸತ್ಯವೇ ಆಗಿತ್ತು: ಬೆಂಗಳೂರಿನ ಬೆಲೆಗೂ ಇಲ್ಲಿನ ಬೆಲೆಗೂ ಪ್ರತಿ ಗ್ರಾಮಿಗೆ ಸುಮಾರು ರೂ. 190 ವ್ಯತ್ಯಾಸವಿತ್ತು, ಅಂದರೆ ಪ್ರತಿ ಹತ್ತು ಗ್ರಾಮಿಗೆ ರೂ. 1,900 ಕಡಿಮೆಯಾಗುತ್ತಿತ್ತು. ನಾನು ಕೈಲಿದ್ದ ಕ್ಯಾಲ್ಕ್ಯುಲೇಟರ್ ಟೇಬಲ್ ಮೇಲಿರಿಸಿ, ಒಡವೆ ಖರೀದಿಸಲು ಬಂದಿರುವ ಹೆಂಗಸರಿಗೂ ತಮಗೂ ಯಾವುದೇ ಸಂಬಂಧವಿಲ್ಲವೆನ್ನುವ ಹಾಗೆ ಮಾರು ದೂರದಲ್ಲಿ ಕೂತಿದ್ದ ಇತರೆ ಗಂಡಸರ ಪಕ್ಕದಲ್ಲಿ ಕೂತಿದ್ದ ಗಂಡನ ಮುಖವನ್ನೊಮ್ಮೆ ನೋಡಿದೆ. ಸೇಲ್ಸ್ ಮ್ಯಾನ್ ಹಲ್ಲು ಗಿಂಜಿ, “ಚೇಚಿ, ಯಾವುದು ಬೇಕೋ ಮೊದಲು ಆಯ್ಕೆ ಮಾಡಿ. ಆಮೇಲೆ ಚೇಟನನ್ನು ಕರೆದ್ರಾಯ್ತು,” ಎನ್ನುತ್ತಾ ಕಿವಿಯೋಲೆಗಳ ಟ್ರೇಯೊಂದನ್ನು ನನ್ನ ಮುಂದಿರಿಸಿದ.


ಒಂದು ಜೊತೆ ಹ್ಯಾಂಗಿಂಗ್ಸ್ ಆಯ್ಕೆ ಮಾಡಿದ ಮೇಲೆ ಕೂಲಿ ಕಡಿಮೆ ಮಾಡಿಸಲು ಗಂಡನನ್ನು ಕರೆದೆ. ಸೇಲ್ಸ್ ಮ್ಯಾನ್ ಮೂರ್ನಾಲ್ಕು ಬಾರಿ ಪಟಪಟನೆ ಕ್ಯಾಲ್ಕುಲೇಟರ್ ನಲ್ಲಿ ಲೆಕ್ಕ ಹಾಕಿ, ಎಲ್ಲಾ ಆಭರಣಗಳು ದುಬೈನಿಂದ ಬರುವುದರಿಂದ ಅಲ್ಲಿಗಿಂತಲೂ ಇಲ್ಲಿ ಸ್ವಲ್ಪ ಬೆಲೆ ಹೆಚ್ಚು ಎಂದು ತಿಳಿಸಿದ. ಓಲೆ ಖರೀದಿಸಿದ ಮೂರ್ನಾಲ್ಕು ದಿನಗಳಲ್ಲೇ ಪ್ರತಿ ಗ್ರಾಮಿಗೆ ರೂ. 300 ಕುಸಿತವಾದಾಗ ಬಹಳ ಬೇಸರವಾಯಿತು. ಆದರೆ ಆಭರಣಗಳ ಅಂಗಡಿಯಲ್ಲಿ ಕಡಿಮೆಯಾಗಿದ್ದದ್ದು ಕೇವಲ ರೂ. 50 ಮಾತ್ರ. ಅಷ್ಟಾಗಿಯೂ, ಭಾರತದ ಬೆಲೆಗೆ ಹೋಲಿಸಿದಾಗ ಇಲ್ಲಿ ಬೆಲೆ ಕಡಿಮೆಯಿತ್ತು. ಹೀಗಿದ್ದರೂ ಅಪ್ಪನ ಪರಿಚಯಸ್ಥರು ಅಥವಾ ಗೆಳೆಯರು ಹಣ ಕೊಟ್ಟರೂ ಯಾಕೆ ದುಬೈನಿಂದ ಒಡವೆಗಳನ್ನು ತಂದುಕೊಡಲು ಒಪ್ಪುತ್ತಿರಲಿಲ್ಲವೆಂದು ಜ್ಞಾನೋದಯವಾಗಲು ಮತ್ತಷ್ಟು ವರ್ಷಗಳು ಬೇಕಾದವು.


ದುಬೈನ ಮುತ್ತಿನ ಹಾರ

ನಾನಾಗ ಇನ್ನೂ ಏಳರಲ್ಲಿದ್ದೆ. ಮಗುವಿದ್ದಾಗ ಕಿವಿ ಚುಚ್ಚಿ ಹಾಕಿಸಿದ್ದ ಚಿನ್ನದ ಕೊಂಡಿ ಇನ್ನೂ ಕಿವಿಯಲ್ಲಿದ್ದವು. ಒಂದು ದಿನ ಹೆಡ್ ಸಿಸ್ಟರ್ ಕ್ಲಾಸಿಗೆ ಬಂದು ನಾಳೆ ಯಾರೂ ಚಿನ್ನದ ಕಿವಿಯೋಲೆಗಳನ್ನು ಹಾಕಿಕೊಂಡು ಬರುವ ಹಾಗಿಲ್ಲ ಎಂದು ಹೇಳಿ ಹೊರಟು ಹೋದರು. ಅಪ್ಪ-ಅಮ್ಮ ಎಷ್ಟು ಹೇಳಿದರೂ ಪಟ್ಟು ಬಿಡದೆ ಅದನ್ನು ಸಂಜೆಯೇ ಕತ್ತರಿಸಿ ಹಾಕಿಸಿದೆ. ತೂತು ಮುಚ್ಚದಿರಲೆಂದು ಅಪ್ಪ ಹಂಚಿಕಡ್ಡಿಯ ತುಂಡುಗಳನ್ನು ಸಿಕ್ಕಿಸಿ, ಅಮ್ಮ ಹಲವು ವರ್ಷಗಳಿಂದ ಬಳೆ ತೆಗೆದುಕೊಳ್ಳುತ್ತಿದ್ದ ಜಿಯಾ ಸಾಹೇಬರ ಅಂಗಡಿಗೆ ಸಂಜೆ ಕರೆದುಕೊಂಡು ಹೋಗಿ ಗೋಲಾಕಾರದ, ತಿಂಗಳುಗಟ್ಟಲೆ ಉಪಯೋಗಿಸಿದರೂ ಬಣ್ಣವನ್ನೂ ಕಳೆದುಕೊಳ್ಳದ, ಬಡವರ ಪಾಲಿನ ಚಿನ್ನವಾಗಿದ್ದ ಉಮಾ ಗೋಲ್ಡ್ ಒಂದು ಜೊತೆ ಪುಟ್ಟ ಕಲ್ಪನಾ ರಿಂಗ್ ಕೊಡಿಸಿದರು. “ಯಾಕೆ, ಅಕ್ಕ? ಪುಟ್ಟಿಗೆ ಇದು ಕೊಡಿಸ್ತೀರಿ? ಚಿನ್ನದ್ದು ಕೊಡ್ಸಿಬಿಡಿ, ಮೊದ್ಲ ಸಲ ಕಿವಿಗೆ ಓಲೆ ಕೊಡಿಸ್ತಿದ್ದೀರಿ,” ಎಂದು ಜಿಯಾ ಅಮ್ಮನಿಗೆ ಹೇಳಿದಾಗ, ಅಪ್ಪ, “ನಿನ್ನ ಬಾವಮೈದುನನ ಕೈಯಲ್ಲಿ ದುಬೈನಿಂದ ತರಿಸಿಕೊಡೋ,” ಎಂದಿದ್ದರು.


ನಾನು ಹೈಸ್ಕೂಲು ಮೆಟ್ಟಿಲು ಹತ್ತಿದ ಮೇಲೆ ಅಪ್ಪನ ಹತ್ತಿರದ ಗೆಳೆಯರೊಬ್ಬರು ಅಮೆರಿಕಾಗೆ ಹೊರಟಿದ್ದರು. ಮರಳುವಾಗ ದುಬೈ ಮುಖಾಂತರ ಬರುವರೆಂದು ಗೊತ್ತಾದ ಮೇಲೆ ಅಪ್ಪ ಅವರ ಕೈಯಲ್ಲಿ ದುಡ್ಡು ಕೊಟ್ಟು ಅಲ್ಲಿಂದ ಒಂದು ಚಿನ್ನದ ಚೈನನ್ನು ತರಲು ವಿನಂತಿಸಿಕೊಂಡರು. ಏರ್ಪೋರ್ಟ್ ನಲ್ಲಿ ಚಿನ್ನ ಅಥವಾ ಯಾವುದೇ ವಸ್ತು ಖರೀದಿಸಿದರೆ ಲಾಭವಿಲ್ಲ ಎನ್ನುವುದು ನಮಗೆ ಆಗ ಗೊತ್ತಿರಲಿಲ್ಲ. ಅಪ್ಪನ ಗೆಳೆಯ ಮರಳಿ ಬರುವಾಗ ದುಬೈ ಏರ್ಪೋರ್ಟಿನಲ್ಲಿ ಮುತ್ತಿನ ಹಾರವೊಂದನ್ನು ಖರೀದಿಸಿ ತಂದುಕೊಟ್ಟರು.


ಚಿನ್ನದ ನಗರ

The city of gold ಎಂದೇ ಪ್ರಖ್ಯಾತವಾಗಿರುವ ದುಬೈಗೆ ಮೊದಲ ಸಲ ಹೋಗುವ ಅವಕಾಶ ಬಂದಾಗ ಅಲ್ಲಿ ವೀಕ್ಷಿಸಲೇಬೇಕಾದ ಪಟ್ಟಿಯಲ್ಲಿ ನಾನು ಸೇರಿಸಿದ್ದ ಸ್ಥಳಗಳಲ್ಲಿ ಗೋಲ್ಡ್ ಸೂಕ್ ಸಹ ಒಂದು. ಕತಾರಿನಲ್ಲಿ ಕಂಡ ಗೋಲ್ಡ್ ಸೂಕ್ ಗಿಂತಲೂ ದೊಡ್ಡದಾದ ದುಬೈ ಸೂಕ್ ನಲ್ಲಿ ಹಿಂದೆಂದೂ ಕಂಡಿರದಿದ್ದ ಬಗೆಬಗೆಯ ಒಡವೆಗಳು. ಸುಮಾರು 400 ಆಭರಣದ ಅಂಗಡಿಗಳನ್ನು ಹೊಂದಿರುವ ಸೂಕ್ ನಲ್ಲಿ ಎತ್ತ ತಿರುಗಿದರೂ ಬಂಗಾರವೇ. ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ತಮ್ಮ ಅಂಗಡಿಗೆ ಬನ್ನಿ ಬಂದು ರಸ್ತೆ ಬದಿಯಲ್ಲಿ ನಿಂತು ಗ್ರಾಹಕರನ್ನು ಕರೆಯುವ ಹುಡುಗರ ಹಾಗೆಯೇ, ಅಲ್ಲಿಯೂ ಅಂಗಡಿಗಳ ಮುಂದೆ ಹುಡುಗರು ನಮ್ಮನ್ನು ಒಳಗೆ ಕರೆಯುವುದನ್ನು ಕಂಡು ಅಚ್ಚರಿಯಾಗಿತ್ತು.


ಒಂದೆರಡು ಅಂಗಡಿಗಳಲ್ಲಿ ಬೆಲೆ ವಿಚಾರಿಸಿದಾಗ, ಕೂಲಿ ಕತಾರಿಗಿಂತಲೂ ಬಹಳವೇ ಕಡಿಮೆ ಎನ್ನುವುದು ತಿಳಿದು ಒಡವೆಗಳಲ್ಲಿ ಮೋಸವಿರಬಹುದೇ ಎನ್ನುವ ಗುಮಾನಿಯೂ ಬಂದಿತ್ತು. ಎಮಿರೇಟ್ಸ್ ನಲ್ಲಿ ಚಿನ್ನದ ಮೇಲೆ ಯಾವುದೇ ಆಮದು ಸುಂಕವನ್ನು ಹೇರುದಿರುವ ಕಾರಣ ಮತ್ತು ಆಭರಣಗಳ ಮೇಲೆ ಅತ್ಯಂತ ಕಡಿಮೆ ತೆರಿಗೆಯನ್ನು ಹಾಕುವುದರಿಂದ ಇತರೆ ಯಾವುದೇ ದೇಶಗಳಿಗೆ ಹೋಲಿಸಿದರೂ ಇಲ್ಲಿ ಗಮನಾರ್ಹ ಕಡಿಮೆ ದರಕ್ಕೆ ಚಿನ್ನ ಖರೀದಿಸಬಹುದು. ಮಾತ್ರವಲ್ಲದೆ, 18 ಕ್ಯಾರೆಟ್ ನಿಂದ 24 ಕ್ಯಾರೆಟ್ ವರೆಗಿನ ಆಭರಣಗಳ ಮೇಲಿನ ಕೂಲಿಯನ್ನು ನಾಚಿಕೆ ಮಾಡಿಕೊಳ್ಳದೆ ಚೌಕಾಸಿ ಮಾಡಿ ಅವರು ಕೇಳುವ ದರಕ್ಕಿಂತ ಏನಿಲ್ಲವೆಂದರೂ ಶೇಕಡಾ 30ರಷ್ಟು ಕಡಿಮೆ ಮಾಡಿಸಬಹುದು. ಪ್ರತಿಯೊಂದು ಒಡವೆಯ ಮೇಲೂ ಸರ್ಕಾರದ ಸೀಲ್ ಇರುವುದರಿಂದ ಯಾವ ಭಯವೂ ಇಲ್ಲದೆ ಖರೀದಿಸಬಹುದು.


ಚೌಕಾಸಿ ಮಾಡದೇ ಗಲ್ಫ್ ನಲ್ಲಿ ಚಿನ್ನ ಖರೀದಿಸಿದರೆ ಹೇಗೆ ಮೂರ್ಖರಾಗಿಬಿಡುತ್ತೇವೆ ಎನ್ನುವುದಕ್ಕೆ ಒಂದು ಪ್ರಸಂಗವನ್ನು ಹೇಳುತ್ತೇನೆ. ಒಂದು ಜೊತೆ ಸೆಕೆಂಡ್ ಇಯರ್ ರಿಂಗ್ ಖರೀದಿಸಲು ಹಲವು ಅಂಗಡಿಗಳಲ್ಲಿ ವಿಚಾರಿಸುತ್ತ ನಡೆಯುತ್ತಿದ್ದೆವು. ಕೇರಳ ಮೂಲದ ಪ್ರತಿಷ್ಠಿತ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ವಜ್ರದ ಪುಟ್ಟ ಓಲೆಗಳನ್ನು ತೋರಿಸಿದ. ನಾನು ಹುಡುಕುತ್ತಿರುವುದು ಸಾದಾ ರಿಂಗ್, ವಜ್ರದ ಓಲೆಗಳನ್ನಲ್ಲ ಎಂದು ಎಷ್ಟು ಹೇಳಿದರೂ ಆತ, “ಶೇ. 30ರಷ್ಟು ರಿಯಾಯಿತಿ ಕೊಡುತ್ತೇವೆ,” ಎಂದು ಶುರು ಮಾಡಿ, 50, 60, 75 ಎಂದು ಹೇಳಿ, ಕೊನೆಗೆ ನಾನು ಬೇಡವೆಂದು ಕೂತಲ್ಲಿಂದ ಮೇಲೆದ್ದಾಗ, “ಮೇಡಂ, ನಿಮಗಾಗಿ ಶೇಕಡಾ 80ರಷ್ಟು ವಿಶೇಷ ರಿಯಾಯಿತಿ ಕೊಡುತ್ತೇವೆ,” ಎಂದ. ಅದಕ್ಕೆ ನಾನು, “ಇನ್ನು ಇಪ್ಪತ್ತೇಕೆ ಉಳಿಸಿದಿರಿ? ಬಿಟ್ಟಿಯಾಗಿಯೇ ಕೊಟ್ಟುಬಿಡಿ,” ಎಂದು ನಕ್ಕು ಅಲ್ಲಿಂದ ಜಾಗ ಖಾಲಿ ಮಾಡಿದೆವು.


ಅಂಗಡಿಗಳಲ್ಲಿ ಏಕೆ ಹೆಚ್ಚು ಬೆಲೆ?

ಪ್ರತಿದಿನ ದಿನಪತ್ರಿಕೆಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯನ್ನು ಗಮನಿಸಿರುತ್ತೀರಿ. ಆಗ ನಾವು ಆಭರಣ ಖರೀದಿಸಲು ಬೆಂಗಳೂರಿಗೆ ಹೋಗಬೇಕೆಂದರೆ ಮೊದಲು ನೋಡುತ್ತಿದ್ದದ್ದು ಪತ್ರಿಕೆಗಳಲ್ಲಿ ಚಿನ್ನದ ದರವನ್ನು. ಪೇಪರ್ ನಲ್ಲಿ ಕಾಣುತ್ತಿದ್ದ ದರಕ್ಕೂ, ಅಂಗಡಿಗಳಲ್ಲಿರುವ ದರಕ್ಕೂ ಯಾವಾಗಲೂ ವ್ಯತ್ಯಾಸವಿರುತ್ತಿತ್ತು. ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ದರ ಹಿಂದಿನ ದಿನದ್ದು ಎನ್ನುವ ಅಂಶ ಒಂದೆಡೆಯಾದರೆ, ಆಭರಣಗಳ ಅಂಗಡಿಯವರ ಸಂಘ ಆಯಾ ದಿನಕ್ಕೆ ದರವನ್ನು ನಿಗದಿ ಪಡಿಸುವುದು ಮತ್ತೊಂದು ಪ್ರಮುಖ ಅಂಶ. ಭಾರತದಲ್ಲಿ ಮಾತ್ರವಲ್ಲ, ಗಲ್ಫ್ ಸೇರಿದಂತೆ ಬಹುತೇಕ ಎಲ್ಲಾ ದೇಶಗಳಲ್ಲಿಯೂ ಆಭರಣಗಳ ಬೆಲೆಯ ಹಿಂದಿರುವುದೂ ಇದೇ ವಿಚಾರ.


ಅದು ಪಕ್ಕಕ್ಕಿರಲಿ ಎಂದು ಗೋಲ್ಡ್ ಲೈವ್ ರೇಟ್ ನೋಡಿದರೆ ಅಚ್ಚರಿಯಾಗುತ್ತದೆ. ಸಾಮಾನ್ಯವಾಗಿ ಪ್ರತಿ ನಿಮಿಷವೂ ಏರಿಳಿತ ಕಾಣುವ ಬೆಲೆಗೇ ಚಿನ್ನ ದೊರಕುತ್ತದೆ ಎಂದುಕೊಂಡು ನಾಣ್ಯ ಖರೀದಿಸಲು ಗೋಲ್ಡ್ ಎಕ್ಸ್ ಚೇಂಜ್  ಸೆಂಟರ್ ಗಳಿಗೆ ಹೋದರೆ ಅಲ್ಲಿಯೂ ಅರೆಗಳಿಗೆ ಹಿಂದೆ ಸ್ಕ್ರೀನ್ ಮೇಲೆ ಕಂಡ ಸ್ಪಾಟ್ ರೇಟಿಗೆ ಚಿನ್ನ ದೊರಕುವುದೇ ಇಲ್ಲ. ಗೋಲ್ಡ್ ಲೈವ್ ರೇಟ್ ನಲ್ಲಿ ಕಾಣುವ 24 ಕ್ಯಾರೆಟ್ ಚಿನ್ನದ ಬೆಲೆಯನ್ನು ಆಭರಣದ ಅಂಗಡಿಗಳು 22 ಕ್ಯಾರೆಟ್ ಒಡವೆಗಳ ಮೇಲೆ ಹೇರುತ್ತವೆ ಎನ್ನುವುದು ಲೈವ್ ರೇಟ್ ನೋಡಿದರೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಅದರ ಜೊತೆಗೆ ಕೂಲಿ ಪ್ರತ್ಯೇಕ ಎನ್ನುವುದನ್ನು ಮರೆಯುವ ಹಾಗಿಲ್ಲ (ಭಾರತದ ಹಾಗೆ ಇಲ್ಲಿ ಕೂಲಿ ಪರ್ಸೆಂಟೇಜ್ ಲೆಕ್ಕದಲ್ಲಿ ಇಲ್ಲ, ಡಿಸೈನ್ ಮೇಲೆ ಇಂತಿಷ್ಟು ಎಂದು ಒಂದು ಮೊತ್ತ ನಿಗದಿ ಪಡಿಸಿರುತ್ತಾರೆ).


ಇದನ್ನು ಬರೆಯುವಾಗ Xe ವಿನಿಮಯ ದರದ ಪ್ರಕಾರ, 1 ಕತಾರಿ ರಿಯಾಲ್ ಗೆ ರೂ. 21.52, ಹಾಗೂ 1 ಎಮಿರೇಟ್ಸ್ ದಿರ್ಹಾಮ್ ಗೆ ರೂ. 21.34 ಇತ್ತು. ಗೋಲ್ಡ್ ಲೈವ್ ರೇಟ್ ನಲ್ಲಿ 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 216.55 ರಿಯಾಲ್ (ರೂ. 4,661.59) ಹಾಗೂ 22 ಕ್ಯಾರೆಟ್ ಬೆಲೆ 198.79 ರಿಯಾಲ್ (ರೂ. 4,279.28) ಇದ್ದು, ಸ್ಪಾಟ್ ರೇಟ್ ನಲ್ಲಿ 215.57 ರಿಯಾಲ್ (ರೂ. 4,640.18) ಇತ್ತು. ಇದೇ ಸಮಯದಲ್ಲಿ ಭಾರತದಲ್ಲಿ 22 ಕ್ಯಾರೆಟ್ ಗೆ ರೂ. 4,745 ಇದ್ದರೆ, ಕತಾರಿನಲ್ಲಿ 212 ರಿಯಾಲ್ (ರೂ. 4,563.68) ಇತ್ತು. ಹಾಗೆಯೇ ದುಬೈನಲ್ಲಿ 24 ಕ್ಯಾರೆಟ್ ಗೆ 221.25 ದಿರ್ಹಾಮ್ (ರೂ. 47,720.42) ಹಾಗೂ 22 ಕ್ಯಾರೆಟ್ ಗೆ 207.75 ದಿರ್ಹಾಮ್ (ರೂ. 4,432.39) ಇತ್ತು.


ಅಂಗಡಿಗಳಿಗಿಂತಲೂ ಕಡಿಮೆಯೆಂದುಕೊಂಡು ಎಕ್ಸ್ ಚೇಂಜ್ ಸೆಂಟರ್ ನಲ್ಲಿ ನಾಣ್ಯ ಖರೀದಿಸಿದರೆ, ಅಲ್ಲಿಯೂ ಕೂಲಿ ತೆರಬೇಕು. ನಾಣ್ಯವನ್ನು ಒಡವೆಗೆ ವಿನಿಮಯ ಮಾಡಿಕೊಳ್ಳಲು ಅಂಗಡಿಗಳಿಗೆ ಹೋದರೆ, ವೇಸ್ಟೇಜ್ ಎಂದು ಖರೀದಿಸಿದ ಮೊತ್ತಕ್ಕಿಂತಲೂ ಕಡಿಮೆ ಬೆಲೆಗೆ ಅದನ್ನು ಕೊಡಬೇಕಾಗುತ್ತದೆ. ಹಾಗಾಗಿ ನೇರವಾಗಿ ಅಂಗಡಿಗಳಿಗೇ ಹೋಗಿ, ಸಾಧ್ಯವಾದಷ್ಟು ಚೌಕಾಸಿ ಮಾಡಿ ಒಡವೆಗಳನ್ನು ಜನ ಖರೀದಿಸುತ್ತಾರೆ. ಇಷ್ಟೆಲ್ಲಾ ಲೆಕ್ಕಾಚಾರ ಹಾಕಿ, ನಿಗದಿ ಪಡಿಸಿದ ಕೂಲಿ ಕೊಟ್ಟು ಒಡವೆ ಖರೀದಿಸಿದರೂ, ದುಬೈ ಇರಲಿ ಕತಾರ್ ಇರಲಿ, ಗಲ್ಫ್ ನಲ್ಲಿ ಚಿನ್ನ ಭಾರತಕ್ಕಿಂತಲೂ ಕಡಿಮೆ ಬೆಲೆಗೆ ಸಿಗುತ್ತದೆ ಎನ್ನುವುದು ಮಾತ್ರ ವಾಸ್ತವ.


(Source: TV9 Kannada)