Showing posts with label photography. Show all posts
Showing posts with label photography. Show all posts

Friday, 4 March 2022

Qatar Mail: 'ನ್ಯಾಷನಲ್ ಜಿಯಾಗ್ರಫಿಕ್' ರೇಂಜ್ ನಲ್ಲಿರುವ ನ್ ನಿನ್ನ ಫೋಟೋಗಳಿಗೆ ನಾವು ಸಲಹೆ ಕೊಡಲಾಗುವುದಿಲ್ಲ

 ಕತಾರ್ ಮೇಲ್ | Qatar Mail : ಈ ಪ್ರಶ್ನೆ-ಉತ್ತರ, ವಾದ-ವಿವಾದ ಗಂಟೆಗಟ್ಟಲೆ ನಡೆದು, ನನ್ನ ಮಾತಿಗೆ ಮತ್ತೆ ಅದೇ ವ್ಯಕ್ತಿಗಳು ನಗುವ ಎಮೋಜಿ ಹಾಕಲು ಪ್ರಾರಂಭಿಸಿದಾಗ ರೋಸಿ ಹೋಯಿತು. ಹತ್ತನ್ನೆರಡು ಮಹಿಳೆಯರೂ ಸೇರಿದಂತೆ ನೂರಕ್ಕೂ ಹೆಚ್ಚು ಸದಸ್ಯರಿರುವ ಗುಂಪಿನಲ್ಲಿ, ಅತ್ಯಾಚಾರ ಎನ್ನುವ ಪದವನ್ನು ಹಗುರವಾಗಿ ಬಳಸುವುದಲ್ಲದೆ ಅದನ್ನು ಸಮರ್ಥಿಸಿಕೊಳ್ಳುವ ವ್ಯಕ್ತಿಗಳ ನಡುವೆ ನಾನೊಬ್ಬಳೇ ಆ ದಿನ ವಾದಕ್ಕಿಳಿದಾಗ ಮಹಿಳೆಯರನ್ನೂ ಒಳಗೊಂಡು ಯಾರೊಬ್ಬರೂ ನನ್ನ ಬೆಂಬಲಕ್ಕೆ ನಿಲ್ಲಲಿಲ್ಲ. ಆ ದಿನ ಒಂದು ವಿಚಾರ ಸ್ಪಷ್ಟವಾಯಿತು: ಅವರ ಕಣ್ಣ ಮುಂದೆಯೇ ನನಗೇನಾದರೂ ಹೆಚ್ಚು ಕಡಿಮೆಯಾದರೆ ಅವರಾರೂ ತಡೆಯುವುದಿರಲಿ, ಅದನ್ನು ಹೆಣ್ಣಾಗಿ ಹುಟ್ಟಿದ, ಅವರ ಜೊತೆ ಹೆಣ್ಣಾಗಿಯೂ ಫೋಟೋ ತೆಗೆಯಲು ಹೋಗಿದ್ದು ನನ್ನ ತಪ್ಪೆಂದೇ ಹೇಳಿಬಿಡುತ್ತಾರೆ! ಆ ದಿನ ಸಂಜೆ ಆ ವ್ಯಕ್ತಿ ಫೋನಾಯಿಸಿ, ತನ್ನ ಹೇಳಿಕೆ ಜನರಲ್ ಆಗಿತ್ತೆಂದೂ, ಅದನ್ನು ನಾನು ವೈಯಕ್ತಿಕವಾಗಿ ತೆಗೆದುಕೊಳ್ಳುವ ಅಗತ್ಯವಿರಲಿಲ್ಲವೆಂಬುದೂ ಬುದ್ಧಿ ಹೇಳಲು ಪ್ರಯತ್ನಿಸಿದಾಗ ಅಚ್ಚರಿಯಾಯಿತು.


ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ಛಾಯಾಗ್ರಾಹಕಿ (Chaithra Arjunpuri) 


*


(ಪತ್ರ 5, ಭಾಗ 4)


ಆ ಬಳಿಕ ಗುಂಪಿನಲ್ಲಿ ನಾನು ತೆಗೆಯುವ ಫೋಟೋಗಳಿಗೆ ಮುಂಚೆ ಪ್ರತಿಕ್ರಿಯಿಸುತ್ತಿದ್ದವರು, "ನೀನು ಈಗ ಬೇರೆ ರೇಂಜ್ ನಲ್ಲಿದ್ದೀಯ," "ನ್ಯಾಟ್ ಜಿಯೋ ಮಟ್ಟದಲ್ಲಿದ್ದೀಯೆ, ನಮ್ಮಿಂದ ನಿನ್ನ ಚಿತ್ರಗಳಿಗೆ ಸಲಹೆಗಳನ್ನು ಕೊಡಲಾಗುವುದಿಲ್ಲ," ಎಂದು ಗೇಲಿ ಮಾಡತೊಡಗಿದರು. ಇನ್ನೂ ಒಂದು ಹೆಜ್ಜೆ ಮುಂದುವರೆದು, ನಾಲ್ಕು ಹುಡುಗರನ್ನು ಸೇರಿಸಿಕೊಂಡು ಒಂದು ವಾಟ್ಸಾಪ್ ಗ್ರೂಪ್ ರಚಿಸಿ, ನಾನು ತೆಗೆದಿರುವ ಎಲ್ಲಾ ಪ್ರಕಾರಗಳ ಚಿತ್ರಗಳನ್ನೂ ತರಿಸಿಕೊಂಡು ಪೋಸ್ಟರ್ ತಯಾರಿಸಿ ಹಂಗಿಸುವುದರಿಂದ ಹಿಡಿದು, ಪ್ರತಿ ವಾರ ಹೋಗುವ ಫೋಟೋವಾಕ್ ಗಳಿಗೆ ತಾವು ಹೋಗುತ್ತಿಲ್ಲವೆಂದು ಹೇಳಿ ನಂತರ ಫೋಟೋವಾಕ್ ನ ಚಿತ್ರಗಳನ್ನು ಫೇಸ್ ಬುಕ್ಕಿನಲ್ಲಿ ಹಾಕುವುದು, ನಾನು ಎಲ್ಲಿಗೆ ಫೋಟೋ ತೆಗೆಯಲು ಹೋಗುತ್ತೇನೆ ಎನ್ನುವುದರ ಬಗ್ಗೆ ನನ್ನ ಇತರೆ ಸ್ನೇಹಿತರ ಬಳಿ ವಿಚಾರಿಸುವುದನ್ನೂ ಮಾಡತೊಡಗಿದರು. 

 

ಅಪ್ಪನನ್ನು ಕಳೆದುಕೊಂಡ ನೋವನ್ನು ಮರೆಯಲು ಫೋಟೋಗ್ರಫಿಯನ್ನು, ಅದರಲ್ಲೂ ಆಸ್ಟ್ರೋಫೋಟೋಗ್ರಫಿಯನ್ನು ಗಂಭೀರವಾಗಿ ತೆಗೆದುಕೊಂಡಿದ್ದ ನಾನು, ಅಮ್ಮನನ್ನು ಕಳೆದುಕೊಂಡ ನಾಲ್ಕೈದು ತಿಂಗಳಿನಲ್ಲಿಯೇ ನಾನು ಗೌರವಿಸುತ್ತಿದ್ದ ವ್ಯಕ್ತಿಗಳು ಮಹಿಳೆಯರ ಬಗ್ಗೆ ಇಟ್ಟುಕೊಂಡಿರುವ ಕೀಳು ಅಭಿಪ್ರಾಯವನ್ನು ಕಂಡು ಅಕ್ಷರಶಃ ಬೆಚ್ಚಿ ಬಿದ್ದಿದ್ದೆ. ಇಂತಹ ಗುಂಪಿನ ಜೊತೆಯಲ್ಲಿ ನಾನು ಚಿತ್ರಗಳನ್ನು ತೆಗೆಯಲು ಒಂದು ವರ್ಷದಿಂದಲೂ ಹೋಗುತ್ತಿದ್ದೆನೆ ಎಂದು ನನ್ನ ಬಗ್ಗೆಯೇ ನನಗೆ ತುಂಬಾ ರೇಜಿಗೆಯಾಗಿಬಿಟ್ಟಿತ್ತು.ದಿನಗಳೆದಂತೆ ಆ ಗುಂಪಿನಿಂದ, ಮತ್ತದರ ಸದಸ್ಯರಿಂದ ದೂರವಾಗಿ ಉಳಿದೆ. 

 

ನಾವು ಹೆಣ್ಣು ಮಕ್ಕಳು ನಾಲ್ಕು ಗೋಡೆಗಳ ಮದ್ಯೆ ಬದುಕುವ ಕಾಲ ಇದಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ನಾವು ನಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ಮುನ್ನಡೆಯುತ್ತಿದ್ದೇವೆ. ನಾವು ಎಷ್ಟೇ ಗಟ್ಟಿಗಿತ್ತಿಯರಾಗಿದ್ದರೂ ಆಗಾಗ ಇಂತಹ ಮಾತುಗಳು, ಘಟನೆಗಳು ಮನಸ್ಸಿಗೆ ನೋವು ಮಾಡಿ ನಮ್ಮನ್ನು ಸೊರಗಿಸಿಬಿಡುತ್ತವೆ. ಜನರು ಬಳಸುವ ದೈನಂದಿನ ಸಂಭಾಷಣೆಗಳಲ್ಲಿ ಸಾಕಷ್ಟು ಬಾರಿ ಅರಿವಿಲ್ಲದೆ, ಹಲವು ಸಲ ಅರಿವಿದ್ದೂ ಸೆಕ್ಸಿಸ್ಟ್ ಭಾಷೆ ಬಂದು ಹೋಗುತ್ತದೆ. ಇದು ತಪ್ಪು ಎಂದು ಒಪ್ಪಿಕೊಳ್ಳುವುದೇ ಬದಲಾವಣೆಯ ಮೊದಲ ಕ್ರಿಯೆಗೆ ನಾಂದಿಯಾಗಬಹುದೇನೋ. ಇರಲಿ, ಆಲ್ ಈಸ್ ವೆಲ್ ಎಂದು ನಾವು ಮುಂದುವರೆಯುತ್ತಿರುತ್ತೇವೆ. ಎಲ್ಲರಿಗೂ ಮುಂಚಿತವಾಗಿಯೇ, ಹ್ಯಾಪಿ ವುಮೆನ್ಸ್ ಡೇ!    


(Source: TV9 Kannada)


Qatar Mail: 'ಐ ಡೋಂಟ್ ರೇಪ್ ಮೈ ಲೆನ್ಸ್!' ಇದು ಭ್ರಮೆಯಲ್ಲವೆಂದು ಖಚಿತಪಡಿಸಿಕೊಂಡೆ

 ಕತಾರ್ ಮೇಲ್ | Qatar Mail :  ಅಷ್ಟಕ್ಕೂ ತಾವು ಮಾತನಾಡಿದ್ದರಲ್ಲಿ ತಪ್ಪೇನಿತ್ತು, ಗುಂಪಿನಲ್ಲಿ ಬೇರೆ ಯಾರಿಗೂ ಬರದೇ ಇದ್ದ ಕೋಪ ನನಗೇಕೆ ಬರಬೇಕಿತ್ತು, ನಾನು ಫೋಟೋಗ್ರಫಿಯಲ್ಲಿ ಕಣ್ಣು ಬಿಡುತ್ತಿರುವ ಕೂಸು, ಚರ್ಚೆ ಮಾಡುತ್ತಿದ್ದವರು ಹಿರಿಯ ಫೋಟೋಗ್ರಾಫರ್ ಗಳು, ಅದರಲ್ಲೂ ಎಲ್ಲಾ ಗಂಡಸರು ಅನ್ನುವುದೂ ತಿಳಿದಿರಲಿಲ್ಲವೇ ಎಂದು ಆತ ನನ್ನನ್ನೇ ಮರುಪ್ರಶ್ನೆ ಮಾಡಿದಾಗ ಮೈ ಪರಚಿಕೊಳ್ಳುವ ಹಾಗಾಯಿತು. "ಇಟ್ ವಾಸ್ ಲೈಕ್ ಎ ಸ್ಮಾಲ್ ಪನಿಷಮೆಂಟ್ ಫಾರ್ ಯು. ನಿನ್ನನ್ನು ಆಗ ತಡೆಯದಿದ್ದರೆ ನಮ್ಮನ್ನು ಮತ್ತಷ್ಟು ಮುಜುಗರಕ್ಕೊಳಪಡಿಸುತ್ತಿದ್ದೆ," ಆತ ದೃಢವಾಗಿ ಹೇಳಿದಾಗ ನಾನು ಮೂಕಳಾದೆ. ಆ ಸಣ್ಣ ವಾಟ್ಸಾಪ್ ರಚಿಸಿ ನನ್ನ ವರ್ತನೆಯನ್ನು ಎಷ್ಟು ಮಾನಿಟರ್ ಮಾಡಿದರು, ನನ್ನನ್ನು ಎಷ್ಟು ಬದಲಾಯಿಸಿದರು, ಅದನ್ನು ರಚಿಸಿದ ಮೂರೇ ತಿಂಗಳಿಗೆ ಅಂಗಡಿ ಯಾಕೆ ಮುಚ್ಚಿದರು ಎಂದು ಕೇಳಿದಾಗ ನಾನು ಅದರಲ್ಲಿ ಸರಿಯಾಗಿ ಭಾಗವಹಿಸುತ್ತಿರಲಿಲ್ಲ, ಅದಕ್ಕೇ ಅದನ್ನು ನಿಲ್ಲಿಸಿದರು ಎಂದು ಆತ ಹೇಳಿದಾಗ ನಗು ಬಂತು.


ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ಛಾಯಾಗ್ರಾಹಕಿ (Chaithra Arjunpuri) 


*


(ಪತ್ರ 5, ಭಾಗ 3)


ನಾನು ಬೇರೊಂದು ಫೋಟೋವಾಕ್ ಗುಂಪಿನ ಸದಸ್ಯತ್ವ ಪಡೆದುಕೊಂಡಿದ್ದರೆ ಬಗ್ಗೆ ತಕರಾರೆತ್ತಿದಾಗ, ಹೆಣ್ಣನ್ನು ವಸ್ತುವಿನ ಹಾಗೆ ಕಾಣುವವರು, ಅತ್ಯಾಚಾರವನ್ನು ಮೆನ್ಸ್ ಟಾಕ್ ಎಂದು ಹಗುರವಾಗಿ ಮಾತನಾಡುವವರ ನಡುವೆ ಒಬ್ಬ ಸ್ವಾಭಿಮಾನವಿರುವ ಹೆಣ್ಣು ಮಗಳಾಗಿ ಹೇಗೆ ಮುಂದುವರೆಯಲು ಸಾಧ್ಯ ಎಂದು ಆತನನ್ನೇ ಕೇಳಿದೆ. ಆತ ಮತ್ತೆ ತಾವಾಡಿದ ಮಾತುಕತೆಯನ್ನು ಸಮರ್ಥಿಸಿಕೊಂಡಾಗ, ಹೆಣ್ಣು ಮಕ್ಕಳ ಬಗ್ಗೆಯಾಗಲಿ, ರೇಪ್ ಬಗ್ಗೆಯಾಗಲಿ ಹಗುರವಾಗಿ ಮಾತನಾಡುವವರ ನಡುವಿನಲ್ಲಿ ನಾನು ಸುರಕ್ಷಿತವಲ್ಲವೆಂದು ನನಗೆ ಆಗಲೂ ಅನ್ನಿಸಿತ್ತು, ಈಗಲೂ ಅನಿಸುತ್ತಿದೆ ಎಂದು ತಿಳಿಸಿದೆ. ಅವರ ಗುಂಪನ್ನು ತೊರೆದುದ್ದರ ಬಗ್ಗೆ ಯಾವುದೇ ವಿಷಾದವಿಲ್ಲವೆನ್ನುವುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿ, ಸತ್ಯವನ್ನು ಅವರ ಬಾಯಿಂದಲೇ ಕೇಳಿ ಮನಸ್ಸು ಮತ್ತಷ್ಟು ಹಗುರವಾಯಿತೆಂದು ಹೇಳಿ ಕರೆಯನ್ನು ಮುಗಿಸಿದೆ. 

 

ಉಡಾಫೆ ಮಾತು: ಆ ಒಂದು ಕರೆ ಮತ್ತೊಮ್ಮೆ ಎರಡು ವರ್ಷಗಳ ಹಿಂದಕ್ಕೆ ನನ್ನನ್ನು ದಬ್ಬಿತು. ಅದೊಂದು ದಿನ ಬೆಳಗ್ಗೆ ಯಾವುದೊ ಫೋಟೋ ಎಡಿಟ್ ಮಾಡುತ್ತಾ ಕೂತಿದ್ದ ನಾನು ನಡುವಲ್ಲಿ ವಾಟ್ಸಾಪ್ ನತ್ತ ಕಣ್ಣಾಡಿಸಿದೆ. ವರ್ಷದ ಹಿಂದೆ ನಾನು ಸೇರಿದ್ದ ಫೋಟೋವಾಕ್ ಗುಂಪಿನಲ್ಲಿ ಹತ್ತನ್ನೆರಡು ನಗುವ ಎಮೋಜಿಗಳು, ಮೇಲಕ್ಕೆ ಸ್ಕ್ರೋಲ್ ಮಾಡಿದರೆ ನಾನು ಕರೆ ಮಾಡಿದ ವ್ಯಕ್ತಿಯ ಹೇಳಿಕೆ ರಪ್ಪನೆ ಕಣ್ಣಿಗೆ ರಾಚಿದಂತಾಗಿ ಬೆಚ್ಚಿಬಿದ್ದೆ. "ಐ ಡೋಂಟ್ ರೇಪ್ ಮೈ ಲೆನ್ಸ್"! ಅದಕ್ಕೆ ಉತ್ತರವಾಗಿ ಉಳಿದವರ ನಗುವ, ಕಣ್ಣಲ್ಲಿ ಹೃದಯವನ್ನು ತೋರುವ ಎಮೋಜಿಗಳು, ವಾವ್ ಏನು ಹೇಳಿದಿರಿ ಅಣ್ಣ ಎನ್ನುವ ಮೆಚ್ಚುಗೆಯ ಸಾಲುಗಳನ್ನು ಕಂಡು ನಂಬಲು ಸಾಧ್ಯವಾಗದೆ, ನನ್ನ ಭ್ರಮೆಯೇನೋ ಎಂದುಕೊಂಡು ಮತ್ತೆ ಮತ್ತೆ ಮೇಲೆ ಕೆಳಗೆ ಸ್ಕ್ರೋಲ್ ಮಾಡಿ ಎರಡೆರಡು ಬಾರಿ ನೋಡಿದೆ. ಭ್ರಮೆಯಲ್ಲ, ಅದೇ ಸಾಲು, ಲೌಡ್ ಅಂಡ್ ಕ್ಲಿಯರ್. 

 

ಆ ಮಾತನ್ನು ಹೇಳಿದ ವ್ಯಕ್ತಿ, ಆತನ ಮಾತಿಗೆ ಮೆಚ್ಚುಗೆ ಸೂಚಿಸಿದ ವ್ಯಕ್ತಿಗಳೆಲ್ಲರೂ ಎರಡೆರಡು ಹೆಣ್ಣು ಮಕ್ಕಳ ತಂದೆ ಎನ್ನುವುದನ್ನು ನೋಡಿ ಮತ್ತಷ್ಟು ವಿಷಾದವೆನಿಸಿತು. ಆ ವ್ಯಕ್ತಿ ಅತ್ಯಾಚಾರ ಎನ್ನುವ ಪದವನ್ನು ಅಷ್ಟು ಹಗುರವಾಗಿ ಬಳಸಿರುವುದರ ಬಗ್ಗೆ ಅಲ್ಲೇ ನನ್ನ ವಿರೋಧ ವ್ಯಕ್ತಪಡಿಸಿದೆ, ಹೆಣ್ಣೆಂದರೆ ಅಷ್ಟು ಹಗುರವೇ ಎಂದೆ. ತಾನು ಹೆಣ್ಣು ಮಕ್ಕಳನ್ನು ತುಂಬಾ ಗೌರವಿಸುವುದಾಗಿಯೂ, ವಾಸ್ತವವಾಗಿ ತನ್ನ ಕ್ಯಾಮೆರಾ ಮತ್ತು ಲೆನ್ಸ್ ಗಳನ್ನು ತನ್ನ ಗರ್ಲ್ ಫ್ರೆಂಡ್ ಎಂದುಕೊಂಡಿರುವುದಾಗಿಯೂ ಆತ ಉತ್ತರಿಸಿದಾಗ ತಬ್ಬಿಬ್ಬಾದೆ. ಒಂದು ಹೆಣ್ಣಿನ ಮೇಲಾಗುವ ದೈಹಿಕ ಮತ್ತು ಮಾನಸಿಕ ದೌರ್ಜನ್ಯವನ್ನು ಎಷ್ಟು ಸುಲಭವಾಗಿ, ಉಡಾಫೆಯಿಂದ ಹೇಗೆ ನೀರ್ಜೀವ ವಸ್ತುಗಳ ಮೇಲೆ ಬಳಸುತ್ತಿದ್ದೀರಿ ಎಂದು ನಾನು ಕೋಪದಲ್ಲಿ ಕೇಳಿದಾಗ ಬಂದ ಉತ್ತರ, "ಅದು ಹಾಗಲ್ಲ, ನಾನು ಕ್ಯಾಶುಯಲ್ ಆಗಿ ಹೇಳಿದೆ ಅಷ್ಟೇ, ಅದನ್ನೇನು ರೇಪ್ ಮಾಡೋಕಾಗುತ್ತಾ?"  


(Source: TV9 Kannada)

Qatar Mail: ಬೇರೆ ವಾಟ್ಸಾಪ್ ಗ್ರೂಪ್ ಗೆ ಹಾಕಿ ನನ್ನನ್ನು ಪರಕೀಯಳಂತೆ ಕಂಡರು

 ಕತಾರ್ ಮೇಲ್ | Qatar Mail :  ಕರೋನಾ ಮಾರಿ ಕತಾರಿಗೆ ವಕ್ಕರಿಸಿ ವರ್ಷಕ್ಕೂ ಮೇಲಾಗಿತ್ತು. ಲಾಕ್ಡೌನ್ ಮುಗಿದು ಹೊರಗೆ ಕಾಲಿಡಲು ಅವಕಾಶ ಸಿಕ್ಕಾಗಲೆಲ್ಲಾ ಫೋಟೋಗ್ರಾಫರ್ ಗಳು ಚಿತ್ರ ತೆಗೆಯಲು ಹೊರಗೆ ಹೋಗುವುದು ಮತ್ತೊಮ್ಮೆ ಪ್ರಾರಂಭವಾಗಿತ್ತು. ಅಂತಹ ಒಂದು ಸಮಯದಲ್ಲಿ ಫೋಟೋ ತೆಗೆಯಲು ಹೋದ ನನಗೆ ಹುಡುಗನೊಬ್ಬ ಹಳೆಯ ಫೋಟೋವಾಕ್ ಗುಂಪಿನ ಹಿರಿಯರೊಬ್ಬರು ನನ್ನ ಬಗ್ಗೆ ಬಹಳ ವಿಚಾರಿಸಿಕೊಂಡರೆಂದು ತಿಳಿಸಿದ. ಆ ಫೋಟೋವಾಕ್ ಗುಂಪಿನಲ್ಲಿದ್ದವರ ಮನಸ್ಥಿತಿಗೆ ಬೇಸತ್ತು ಅವರ ಗುಂಪಿನಿಂದ ದೂರವುಳಿದು ಸುಮಾರು ಎರಡು ವರ್ಷಕ್ಕೂ ಮೇಲಾಗಿತ್ತು. ಈಗ ಅಚಾನಕ್ ನನ್ನ ಬಗ್ಗೆ ವಿಚಾರಿಸಿಕೊಳ್ಳುವಂಥಾದ್ದೇನಿದೆ, ನೇರವಾಗಿ ನನಗೇ ಫೋನಾಯಿಸಬಹುದಿತ್ತಲ್ಲ ಎನ್ನಿಸಿದರೂ ಅಹಂ ನಡುವೆ ಬಂದಿರಬೇಕು ಎಂದುಕೊಂಡು ಸುಮ್ಮನಾದೆ. ಅಷ್ಟಕ್ಕೂ ಎರಡು ವರ್ಷಗಳಿಂದಲೂ ಮನಸ್ಸಿನಲ್ಲಿ ಕೊರೆಯುತ್ತಿದ್ದ ಪ್ರಶ್ನೆಯೊಂದಕ್ಕೆ ಆ ವ್ಯಕ್ತಿಯಿಂದಲೇ ಉತ್ತರವೂ ದೊರಕಬೇಕಿತ್ತು. 


ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ಛಾಯಾಗ್ರಾಹಕಿ (Chaithra Arjunpuri) 


*


(ಪತ್ರ 5, ಭಾಗ 2 )


ಸಂಬಂಧಿಕರನ್ನು, ಗೆಳೆಯರನ್ನು, ಪರಿಚಯದ ವಲಯದಲ್ಲಿ ಸಾಕಷ್ಟು ಮಂದಿಯನ್ನು ಕರೋನಾ ಬಲಿ ತೆಗೆದುಕೊಳ್ಳುತ್ತಿತ್ತು. ಇಂದು ಮಾತನಾಡಿದವರು, ನಾಳೆ ಇರುತ್ತಿರಲಿಲ್ಲ. ನಾಳೆ ನಾನು ಮರೆಯಾಗುತ್ತೇನೋ ಅಥವಾ ಆ ವ್ಯಕ್ತಿಯೋ ಎಂದು ಮನಸ್ಸು ಚುಚ್ಚುತ್ತಲೇ ಇತ್ತು. ಮೂರ್ನಾಲ್ಕು ದಿನಗಳವರೆಗೆ "ಟು ಡು ಆರ್ ನಾಟ್ ಟು ಡು" ಎಂದು ಹತ್ತಾರು ಬಾರಿ ಯೋಚಿಸಿ, ಆ ಹಿರಿಯ ಫೋಟೋಗ್ರಾಫರ್ ಗೆ ಕರೆ ಮಾಡಿದೆ.  

                   

ಕರೆ ಸ್ವೀಕರಿಸಿದ ಆ ವ್ಯಕ್ತಿ ಇಷ್ಟು ವರ್ಷಗಳಾದ ಮೇಲೆ ಕರೆ ಮಾಡುತ್ತಿರುವ ಕಾರಣ ಕೇಳಿ, ಅವರ ಫೋಟೋವಾಕ್ ಗುಂಪಿನೊಂದಿಗೆ ಮಾತನಾಡುವುದು ನಿಲ್ಲಿಸಿದ್ದು ನಾನೇ ಎನ್ನುವುದನ್ನು ನೆನಪಿಸಿದರು. ದನಿಯಲ್ಲಿ ಅದೇ ವ್ಯಂಗ್ಯ ತುಂಬಿತ್ತು. ನಾನು ಹೌದೆಂದು ಒಪ್ಪಿಕೊಂಡು, ನನ್ನನ್ನು ಬೇರೆ ಗುಂಪಿಗೆ ಹಾಕಿ ಪರಕೀಯಳ ಹಾಗೆ ನಡೆಸಿಕೊಂಡಿದ್ದರ ಕಾರಣ ಕೇಳಿದೆ. ವಿಷಯವನ್ನು ಆತ ಬೇರೆಡೆಗೆ ಹೊರಳಿಸುವ ಪ್ರಯತ್ನ ಪಟ್ಟರೂ, ನಾನು ಪಟ್ಟು ಹಿಡಿದೆ. ಕರೋನಾ ಸಮಯ, ನಾಳೆ ನಾನಿರುತ್ತೇನೋ, ಆತನಿರುತ್ತಾನೋ, ಅಸಲಿ ವಿಚಾರ ತಿಳಿದರೆ ಮನಸ್ಸು ಹಗುರವಾಗುತ್ತದೆ ಎಂದು ತಿಳಿಸಿದೆ.

 

ನನ್ನ ವರ್ತನೆಯನ್ನು ಮಾನಿಟರ್ ಮಾಡುವ ಸಲುವಾಗಿ ನನ್ನನ್ನು ಬೇರೆ ವಾಟ್ಸಾಪ್ ಗ್ರೂಪಿಗೆ ಹಾಕಲಾಗಿತ್ತು ಎನ್ನುವ ಸತ್ಯವನ್ನು ಆತ ಬಹಿರಂಗ ಪಡಿಸಿದಾಗ ಅಚ್ಚರಿಯೇನೂ ಆಗಲಿಲ್ಲ. "ನಾವು ಗಂಡಸರು ಚರ್ಚೆ ಮಾಡ್ತಿದ್ವಿ, ನೀನು ಮಧ್ಯೆ ಬಂದು ದೊಡ್ಡ ಫೆಮಿನಿಸ್ಟ್ ಥರ ಮಾತಾಡಿದ್ದು ನಮಗ್ಯಾರಿಗೂ ಇಷ್ಟವಾಗ್ಲಿಲ್ಲ. ನಿನ್ನ ಮಾತನ್ನು ನಮಗೆ ಜೀರ್ಣಿಸಿಕೊಳ್ಳೋಕಾಗ್ಲಿಲ್ಲ. ಇಟ್ ವಾಸ್ ಮೆನ್ಸ್ ಟಾಕ್, ಆ ಥರದ ಮಾತುಕತೆ ನಮಗೆ ಅದೇ ಮೊದಲೇನಲ್ಲ. ಅದೇ ಥರದ, ಅದಕ್ಕಿಂತಲೂ ಬೇರೆ ಥರದ ಮಾತುಗಳು ನಮ್ಮ ನಡುವೆ ಆಗಾಗ ನಡೆಯುತ್ತಲೇ ಇರುತ್ತವೆ..." ಎಂದು ಆ ವ್ಯಕ್ತಿ ಸಮರ್ಥಿಸಿಕೊಳ್ಳುತ್ತಿದ್ದರೆ ನಾನು ಅರೆಕ್ಷಣ ಅವಾಕ್ಕಾದೆ.

 

ಪುರುಷರ ಮಾತುಕತೆ: ನಾನು ಮುಂಚೆ ಊಹಿಸಿದ್ದ ಕಾರಣ ಸರಿಯಾಗಿಯೇ ಇತ್ತು. ಅದೇ ಫೋಟೋವಾಕ್ ಗುಂಪಿನ ಹಿರಿಯ ಗೆಳೆಯನೊಬ್ಬ ಆ ಘಟನೆ ನಡೆದ ಒಂದಷ್ಟು ದಿನಗಳ ಬಳಿಕ, 'ನೀನು ತುಂಬಾ ಸೆನ್ಸಿಟಿವ್ ಹುಡುಗಿ, ಸುಮ್ಮನೆ ಇಲ್ಲದ್ದೆಲ್ಲಾ ಯೋಚಿಸಿ ತಲೆ ಕೆಡಿಸಿಕೊಳ್ಳುತ್ತಿದ್ದೀಯೆ,' ಎಂದು ಬುದ್ಧಿವಾದ ಹೇಳಿದ್ದು ನೆನಪಾಗಿ ಮನಸ್ಸು ಮತ್ತಷ್ಟು ವಿಚಲಿತವಾಯಿತು. ನಾನು ಮುಖ್ಯ ವಾಟ್ಸಾಪ್ ಗುಂಪಿನಲ್ಲಿ ಚರ್ಚೆ ಮಾಡುವುದನ್ನು ತಪ್ಪಿಸದಲೆಂದೇ ನಾಲ್ಕು ಹುಡುಗರ ಒಂದು ವಾಟ್ಸಾಪ್ ಗ್ರೂಪ್ ರಚಿಸಿ, ಅದರಲ್ಲಿ ನನ್ನ ಹೆಸರನ್ನೂ ಸೇರಿಸಿ, ಅದನ್ನು ನೋಡಿಕೊಳ್ಳುತ್ತಿದ್ದ ಇಬ್ಬರು ಹಿರಿಯ ಫೋಟೋಗ್ರಾಫರ್ ಗಳು, "ಬಿ ಎ ಬ್ಯಾಕ್ ಬೆಂಚರ್ ಫಾರ್ ಸಮ್ ಟೈಮ್," ಎಂದು ಸಲಹೆ ನೀಡಿದ್ದು ನೆನಪಾಯಿತು. 


(Source: TV9 Kannada)