Friday 4 March 2022

Qatar Mail: ಪುರುಷ ಜಗತ್ತಿನೊಳಗೆ ಛಾಯಾಗ್ರಾಹಕಿಯ ಮೌನಯುದ್ಧ

 ಕತಾರ್ ಮೇಲ್ | Qatar Mail :  ಮಾರ್ಗರೆಟ್ ಅಟ್ವುಡ್ ತಮ್ಮ ದಿ ಹ್ಯಾಂಡ್ ಮೇಡ್ಸ್  ಟೇಲ್ ನಲ್ಲಿ, “All you have to do, I tell myself, is keep your mouth shut and look stupid. It shouldn’t be that hard,” ಎಂದು ಹೇಳುತ್ತಾರೆ. ಬಾಯಿ ಮುಚ್ಚಿಕೊಂಡು ಮೂರ್ಖರ ಹಾಗಿರುವುದು ನಿಜಕ್ಕೂ ಅಷ್ಟು ಸುಲಭವೇ? ಮುಂದುವರೆಯುತ್ತಿರುವ ಸಮಾಜದಲ್ಲಿ ಪ್ರತಿದಿನದ ಜಂಜಾಟದಿಂದ ಹೊರಬರಲು ನಮ್ಮ ಸುತ್ತಲೂ ಎಲ್ಲವೂ ಚೆನ್ನಾಗಿದೆ, ಸರಿಯಾಗಿದೆ ಎನ್ನುವ ಸುಳ್ಳಿನ ಪ್ರಪಂಚವನ್ನೇ ನಾವು ಹೆಣ್ಣುಮಕ್ಕಳು ಸೃಷ್ಟಿಸಿಕೊಂಡುಬಿಡುತ್ತೇವೆ. ನಮ್ಮನ್ನೇ ಗಂಧದ ಹಾಗೆ ತೇಯ್ದುಕೊಂಡು ಅಪರಿಮಿತ ನಿರೀಕ್ಷೆಗಳನ್ನು ಪೂರೈಸಲು ಪ್ರಯತ್ನಿಸುತ್ತೇವೆ. ನಮ್ಮ ಸುತ್ತಲಿರುವವರಿಗೆ ಚಂದವಾಗಿ ಕಾಣಿಸಲು ನಮ್ಮನ್ನು ನಾವೇ ದಂಡಿಸಿಕೊಳ್ಳುತ್ತೇವೆ, ಪುರುಷ ಸಮಾಜ ನಮಗಾಗಿ ರೂಪಿಸಿದ ಆದರ್ಶಗಳಿಗೆ ಹೊಂದಿಕೊಳ್ಳಲು ನಮ್ಮ ದೇಹವನ್ನು ಹಸಿವಿನಿಂದ ಬಳಲಿಸುತ್ತೇವೆ. ದಿನನಿತ್ಯದ ಕೆಲಸ, ಮಕ್ಕಳು, ಗಂಡ ಮತ್ತು ಮೌನ ನಿರೀಕ್ಷೆಗಳಿಂದ ನಮ್ಮ ಮನಸ್ಸುಗಳನ್ನೂ ಹಸಿವಿನಿಂದ ಬಳಲಿಸುತ್ತೇವೆ. ಕೊನೆಗೆ ಅವುಲಿಗಳ ಭಾರಕ್ಕೆ ಸೋತು, ಸೋಲನ್ನೂ ನಗುಮುಖದಿಂದಲೇ ಸ್ವೀಕರಿಸುತ್ತೇವೆ. ಯಾಕೆಂದರೆ, ನಮಗೆ ಸಿಕ್ಕಿರುವ ಬಿರುದು ಬಾವಲಿಗಳೇ ಹೇಳುವಂತೆ ನಾವು ಸಹನಾಮಯಿಗಳು, ಕರುಣಾಮಯಿಗಳು, ನಾವು ಭೂಮಿ ತೂಕದವರು

ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ಛಾಯಾಗ್ರಾಹಕಿ (Chaithra Arjunpuri


*


(ಪತ್ರ 5, ಭಾಗ 1)


ಮಾರ್ಚ್ 8 ಬಂದರೆ ಸಾಕು ನಾವು ಕಂಡು ಕೇಳರಿಯದ ಪದಗಳಿಂದ ನಮ್ಮನ್ನು, ನಮ್ಮ ಸಾಧನೆಗಳನ್ನು ಎಲ್ಲರೂ ಹೊಗಳುತ್ತಾರೆ. ದಿನವಿಡೀ ದುಡಿದು, ವೃತ್ತಿ ಹಾಗೂ ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಪಾಡಿಕೊಂಡು ಹೋಗುವುದು ಸುಲಭದ ಮಾತೇನಲ್ಲ ಎನ್ನುವ ಮೆಚ್ಚುಗೆಯ ಮಾತುಗಳನ್ನು ಎಲ್ಲರೂ ಹೇಳುವ ಆ ದಿನ ಅಂತಾರಾಷ್ಟ್ರೀಯ ಮಹಿಳಾ ದಿನ. ಆದರೆ ಆ ಒಂದು ದಿನ ನಮ್ಮನ್ನು, ನಮ್ಮ ಸಾಧನೆಗಳನ್ನು ಗುರುತಿಸಿದರೆ ಸಾಕೆ? ಅಸ್ತಿತ್ವದ ದೃಷ್ಟಿಯಿಂದ ನಾವು, ಮಹಿಳೆಯರು, ಸಮಾನ ಹಕ್ಕುಗಳಿಗೆ, ಸಬಲೀಕರಣಕ್ಕೆ ಪ್ರತಿ ದಿನವೂ ಒಂದಲ್ಲ ಒಂದು ರೀತಿಯಲ್ಲಿ ಹೆಣಗುತ್ತಿರುವುದು ಹೊಸ ವಿಚಾರವೇನಲ್ಲ. ನಮ್ಮದೊಂದು ಸ್ಥಾನ ಕಂಡುಕೊಳ್ಳುವುದಕ್ಕೆ ನಾವು ಪುರುಷ ಸಮಾಜದೊಂದಿಗೆ ಮೌನ ಯುದ್ಧದಲ್ಲಿ ತೊಡಗಿಕೊಂಡಿರುವುದು ಹಲವು ಸಲ ಹೊರ ಪ್ರಪಂಚಕ್ಕೆ ತಿಳಿಯುವುದೇ ಇಲ್ಲ. ಇಂಥಾ ಒಂದು ಮೌನ, ಏಕಾಂಗಿ ಯುದ್ಧವನ್ನು ಒಬ್ಬ ಮಹಿಳೆಯಾಗಿ, ಫೋಟೋಗ್ರಾಫರ್ ಆಗಿ ಹೇಗೆಲ್ಲಾ ಎದುರಿಸಬೇಕಾಗುತ್ತದೆ ಎನ್ನುವುದನ್ನು ಹೇಳುತ್ತೇನೆ ಬನ್ನಿ.      

 

ಉಡಾಫೆಯ ಮಾತುಗಳು: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅತ್ಯಾಚಾರದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದಾಗ ನೆನಪಿಗೆ ಬಂದದ್ದು ಎರಡು ಘಟನೆಗಳು. ಹಾಗೆ ನೋಡಿದರೆ, ಆ ಸಾಲನ್ನು ಮೊದಲ ಬಾರಿಗೆ ಕೇಳಿದಾಗ ನಾನಿನ್ನೂ ಹೈಸ್ಕೂಲಿನಲ್ಲಿದ್ದೆ. ವಿಷ್ಣುವರ್ಧನ್ ಜೊತೆಯಲ್ಲಿ ಹಿಂದಿ ಚಿತ್ರನಟಿ ಮಮತಾ ಕುಲಕರ್ಣಿ ನಟಿಸಿದ ಕನ್ನಡ ಚಿತ್ರವೊಂದು ಆಗಷ್ಟೇ ಬಿಡುಗಡೆಯಾಗಿತ್ತು. ಯಾವುದೋ ಕನ್ನಡ ವಾರಪತ್ರಿಕೆಗೆ ನೀಡಿದ್ದ ಸಂದರ್ಶನವೊಂದರಲ್ಲಿ, "ಇಫ್ ಐ ಕಾಂಟ್ ಅವಾಯ್ಡ್ ರೇಪ್, ಐ ವಿಲ್ ಎಂಜಾಯ್ ಇಟ್," ಎನ್ನುವ ಹೇಳಿಕೆಯೊಂದನ್ನು ಆಕೆ ನೀಡಿದ್ದಳು. ಅದನ್ನು ಓದಿದ ಅಪ್ಪ, "ನೋಡು, ಎಷ್ಟು ಅಸಹ್ಯವಾದ ಹೇಳಿಕೆ ಕೊಟ್ಟಿದ್ದಾಳೆ. ಇಂಥವರೆಲ್ಲಾ ನಟಿಯರು, ಇವರಿಗೆ ಚಪ್ಪಾಳೆ, ಶಿಳ್ಳೆ ಬೇರೆ," ಎಂದು ರೇಗಿ ಆ ಹಾಳೆಯನ್ನು ಹರಿದು ಹಾಕಿದ್ದರು. 

 

ಆಗ ಹಳ್ಳಿಯಲ್ಲಿದ್ದ ನಮ್ಮ ಮನೆಯಲ್ಲಿ ಕೇಬಲ್ ಇರಲಿಲ್ಲ, ಇದ್ದದ್ದು ದೂರದರ್ಶನ ಮಾತ್ರ. ಆಗ ನನಗೂ, ನನ್ನ ತಮ್ಮನಿಗೂ ಟಿವಿ ಮುಂದೆ ಕೂರಲು ಅವಕಾಶವಿದ್ದದ್ದು ವಾರಕ್ಕೆರಡು ಬಾರಿ ಮಾತ್ರ - ಗುರುವಾರವೋ, ಶುಕ್ರವಾರವೋ ಬರುತ್ತಿದ್ದ ಕನ್ನಡ ಚಿತ್ರಮಂಜರಿ, ಮತ್ತೊಂದು ಭಾನುವಾರ ಸಂಜೆಯ ಕನ್ನಡ ಸಿನಿಮಾ. ವಾರಕ್ಕೊಮ್ಮೆ ದೂರದರ್ಶನದಲ್ಲಿ ಬರುತ್ತಿದ್ದ ಚಿತ್ರಮಂಜರಿಯಲ್ಲಿ ಮಮತಾ ಕುಲಕರ್ಣಿಯ ಮೊಗವೇನಾದರೂ ಅಪ್ಪಿತಪ್ಪಿ ಬಂದರೆ ಟಿವಿ ಆರಿಸಿ ಬಿಡುತ್ತಿದ್ದರು. ಅಪ್ಪ-ಅಮ್ಮ ಇಬ್ಬರೂ ಆ ವಿಚಾರದಲ್ಲಿ ಬಹಳ ಕಟ್ಟುನಿಟ್ಟಾಗಿದ್ದರು. 

 

ಕಹಿ ಸತ್ಯ: ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು ಮಾತ್ರ ಹೀಗೆ ಯೋಚಿಸುತ್ತಾರೆ, ಅದಕ್ಕೆ ಇಂಥಾ ಹೇಳಿಕೆ ನೀಡಿ ವಿವಾದಗಳಿಗೆ ಸಿಲುಕಿ ಬೀಳುತ್ತಾರೆ ಎಂದುಕೊಂಡರೆ ತಪ್ಪಾಗುತ್ತದೆ. ಸಣ್ಣ ಗುಂಪುಗಳಲ್ಲೂ ಹೆಣ್ಣನ್ನು ಕುರಿತು, ಅತ್ಯಾಚಾರದ ಕುರಿತು ಇಷ್ಟೇ ಉಡಾಫೆಯ ಮಾತುಗಳು ಬಂದು ಹೋಗುತ್ತವೆ. ಇದಕ್ಕೆ ಕಾಲ, ದೇಶ, ಗಡಿಗಳೆಂಬ ನಿರ್ದಿಷ್ಟ ಮಿತಿಗಳಿಲ್ಲ. ಒಂದಲ್ಲಾ ಒಂದು ತಿರುವಿನಲ್ಲಿ ಎಲ್ಲರ ಜೀವನದಲ್ಲೂ ಇಂತಹ ಅನಿರೀಕ್ಷಿತ ಮಾತುಗಳು ಕೇಳಿ ಬರುತ್ತವಾದರೂ ಆ ಸಮಯದಲ್ಲಿ ನಾವು ಅವುಗಳನ್ನು ಹೇಗೆ ಮೆಟ್ಟಿ ನಿಲ್ಲುತ್ತೇವೆ, ಯಾವ ರೀತಿ ಪ್ರತಿಕ್ರಿಯಿಸುತ್ತೇವೆ ಎನ್ನುವುದೂ ಮುಖ್ಯವಾಗುತ್ತದೆ.


(Source: TV 9 Kannada)

No comments:

Post a Comment