Showing posts with label printing press. Show all posts
Showing posts with label printing press. Show all posts

Friday, 18 March 2022

Qatar Mail: ಪರವಾನಗಿ ಎನ್ನುವ ಈ ಪರಮವಿಚಾರ!

 ಕತಾರ್ ಮೇಲ್ | Qatar Mail : ದುರಾದೃಷ್ಟಕ್ಕೆ, ಅತಿಕ್ರಮಣ ಪ್ರವೇಶ ಮತ್ತು ಪರವಾನಗಿ ಇಲ್ಲದೆ ಚಿತ್ರೀಕರಣದ ಜೊತೆ ಜೊತೆಗೆ ಮದ್ಯ ಸೇವನೆಯ ಅಪರಾಧವೂ ಸೇರಿಕೊಂಡು, ಗುರುವಾರ ಜೈಲು ಸೇರಿದ ರಿಚರ್ಡ್ನನ್ನು ಭಾನುವಾರ ನ್ಯಾಯಾಧೀಶರ ಮುಂದೆ ನಿಲ್ಲಿಸಿ ದಂಡ ತೆರುವವರೆಗೂ ಕಾರಾಗೃಹ ಶಿಕ್ಷೆಗೆ ಗುರಿ ಪಡಿಸಲಾಗಿತ್ತು. ಕೊನೆಗೆ, ಕಂಪನಿಯ ಮಾಲೀಕ ದಂಡ ತೆತ್ತು ರಿಚರ್ಡ್ ನನ್ನು ಜೈಲಿನಿಂದ ಬಿಡಿಸಿದರು. ಅದರ ಬಳಿಕವೂ ಆತ ಇನ್ನೂ ಒಂದೆರಡು ಬಾರಿ ಜೈಲಿನ ಮುಖ ನೋಡುವಂತಾದರೂ ಅದು ಕುಡಿತದ ಕಾರಣಕ್ಕೆ ಮಾತ್ರ, ಆಫೀಸಿನ ವಿಚಾರದಲ್ಲಿ ಅಲ್ಲ. ಎಷ್ಟೇ ಪರಿಚಯವಿರಲಿ, ಇಲ್ಲಿ ಸೆಕ್ಯೂರಿಟಿಗಳು ಗೇಟ್ ಪಾಸ್ ತಪಾಸಣೆ ಮಾಡದೆ ಕಚೇರಿಗಳಿಗೆ ಪ್ರವೇಶಿಸಲು ಬಿಡುವುದಿಲ್ಲ. ಅವರಿಗೆ ಅವರದೇ ಆದ ಸುರಕ್ಷತೆ ಮತ್ತು ಭದ್ರತೆಯ ನಿಯಮಗಳಿರುತ್ತವೆ, ಅವನ್ನು ಅವರು ಮತ್ತು ನಾವು ಪಾಲಿಸಲೇಬೇಕಾಗುತ್ತದೆ. ಈ ನಿಯಮಗಳು ಸರ್ಕಾರಿ ಕಚೇರಿ ಮತ್ತು ಮೀಡಿಯಾ ಆಫೀಸುಗಳಲ್ಲಿ ಬಹಳ ಕಟ್ಟುನಿಟ್ಟಾಗಿರುತ್ತದೆ. 


ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ಛಾಯಾಗ್ರಾಹಕಿ (Chaithra Arjunpuri) 


*


(ಪತ್ರ 6, ಭಾಗ 3)


ಅಷ್ಟಕ್ಕೂ, ಕಚೇರಿಯೊಂದನ್ನು, ಅದರಲ್ಲೂ ಮೀಡಿಯಾ ಆಫೀಸನ್ನು ಪ್ರವೇಶಿಸಲು, ಅನುಮತಿ, ಗೇಟ್ ಪಾಸ್ ಬೇಕು ಎನ್ನುವುದು ಮೊದಲ ಬಾರಿಗೆ ತಿಳಿದದ್ದು ಬೆಂಗಳೂರಿನಲ್ಲಿ. ನಾನಾಗ ಇನ್ನೂ ಪ್ರೈಮರಿ ಸ್ಕೂಲಿನಲ್ಲಿ ಓದುತ್ತಿದ್ದೆ. ಮಂಡ್ಯದ ಹಳ್ಳಿ ಜನರಾದ ನಮಗೆ ಬೆಂಗಳೂರು ಯಾವ ವಿದೇಶಕ್ಕೂ ಕಡಿಮೆಯೆನಿಸುತ್ತಿರಲಿಲ್ಲ. ವರ್ಷಕ್ಕೊಮ್ಮೆ ಮೌಲ್ಯಮಾಪನಕ್ಕೆಂದು ಅಪ್ಪ ಬೆಂಗಳೂರಿಗೆ ಹೋಗುವಾಗ, ಕೊನೆಯ ದಿನ ನನ್ನನ್ನೂ ಕರೆದುಕೊಂಡು ಹೋಗುತ್ತಿದ್ದರು. ಮೌಲ್ಯಮಾಪನ ಮುಗಿದ ಮೇಲೆ, ಮಧ್ಯಾಹ್ನ ಪ್ರಜಾವಾಣಿ ಕಚೇರಿಗೂ ಹೋಗುತ್ತಿದ್ದೆವು. ಪ್ರಜಾವಾಣಿ ಕಚೇರಿ ನನಗೆ ಬಹಳ ಇಷ್ಟವಾಗುತ್ತಿದ್ದುದ್ದಕ್ಕೆ ಕಾರಣ ಅಲ್ಲಿದ್ದ ಲಿಫ್ಟ್. ನಿಜ ಹೇಳಬೇಕೆಂದರೆ, ನಾನು ಮೊದಲ ಬಾರಿ ಲಿಫ್ಟ್ ನೋಡಿದ್ದು, ಹತ್ತಿದ್ದು ಪ್ರಜಾವಾಣಿಯಲ್ಲೇ! ಮಾತ್ರವಲ್ಲ, ಬೆಂಗಳೂರೆಂದರೆ ಆಗ ನನ್ನ ಪಾಲಿಗೆ ಎಂ.ಜಿ. ರಸ್ತೆಯ ಪ್ರಜಾವಾಣಿ ಮತ್ತು ಇಟ್ಟಿಗೆ ಬಣ್ಣದ ಸೆಂಟ್ರಲ್ ಕಾಲೇಜು. ಆ ದೊಡ್ಡ ಮಾಯಾನಗರಿಯಲ್ಲಿ ಕಳೆದು ಹೋದರೆ, ಎಂ.ಜಿ. ರಸ್ತೆಯ ಪ್ರಜಾವಾಣಿ ಆಫೀಸ್ ತಲುಪಿದರೆ ನಾನು ಮನೆ ತಲುಪಿದ ಹಾಗೆ ಎನ್ನುವಷ್ಟು ಸುರಕ್ಷಿತ ಭಾವನೆ ನನ್ನ ಪುಟ್ಟ ಮನಸ್ಸಿನಲ್ಲಿ ಮನೆಮಾಡಿತ್ತು.                  

 

ಎಂ.ಜಿ.ರಸ್ತೆಯಲ್ಲಿರುವ ಆ ಕಟ್ಟಡದ ಕೆಳಗೆ ಕಾಲಿಡುತ್ತಿದ್ದಂತೆಯೇ ಪ್ರಜಾವಾಣಿ ಆಫೀಸಿಗೋ, ಡೆಕ್ಕನ್ ಹೆರಾಲ್ಡ್ ಆಫೀಸಿಗೋ ಎಂದು ವಿಚಾರಿಸಿ, ಯಾರನ್ನು ಭೇಟಿ ಮಾಡಬೇಕು ಎಂದು ಕೇಳುತ್ತಿದ್ದರು. ಅಪ್ಪ ಹೇಳುತ್ತಿದ್ದ ಹೆಸರಿನ ಎಡಿಟರ್ ಅಥವಾ ಡೆಸ್ಕ್ ಎಡಿಟರ್ ಬಂದಿದ್ದರೆ ಅವರಿಗೆ ಕರೆ ಮಾಡಿ, ಇಂಥವರು ಮದ್ದೂರಿನ ಸ್ಟ್ರಿಂಗರ್ ಬಂದಿದ್ದಾರೆ, ಕಳುಹಿಸಬಹುದೇ ಎಂದು ವಿಚಾರಿಸುತ್ತಿದ್ದರು. ಅವರು ಆ ದಿನ ರಜೆಯಲ್ಲಿದ್ದರೆ ಬೇರೆಯವರನ್ನು ಭೇಟಿ ಮಾಡಬೇಕೆ ಎಂದು ವಿಚಾರಿಸಿ ಅವರ ಅನುಮತಿಯನ್ನು ಪಡೆದು, ಸಂದರ್ಶಕರ ಹಾಜರಿ ಪುಸ್ತಕದಲ್ಲಿ, ಹೆಸರು, ದಿನಾಂಕ, ಸಮಯ, ಸಹಿ, ಯಾರನ್ನು ಭೇಟಿ ಮಾಡುತ್ತಿದ್ದೇವೆ, ಭೇಟಿಯ ಕಾರಣವನ್ನು ಬರೆಯಿಸಿಕೊಂಡು ಒಳಗೆ ಹೋಗಲು ಬಿಡುತ್ತಿದ್ದರು. ಪ್ರಿಂಟಿಂಗ್ ಮಷೀನ್ ಗಳನ್ನು ಹಾದು, ಲಿಫ್ಟ್ ಹತ್ತಿ ಮೂರನೇ ಮಹಡಿಯಲ್ಲಿರುವ ಪ್ರಜಾವಾಣಿಯಲ್ಲಿ ಸಂಪಾದಕರನ್ನು ಭೇಟಿ ಮಾಡಿ, ಕೆಲವೊಮ್ಮೆ ಅಲ್ಲಿನ ಮೆಸ್ ನಲ್ಲಿ ಊಟ ಮಾಡಿ ಬರುತ್ತಿದ್ದೆವು. ಬೇರೆ ಪತ್ರಿಕೆಯ ಕಚೇರಿಗಳಲ್ಲಿಲ್ಲದ ಸೆಕ್ಯೂರಿಟಿ ಪ್ರಜಾವಾಣಿ ಕಟ್ಟಡದಲ್ಲಿ ಮಾತ್ರವೇಕೆ ಎನ್ನುವುದು ಆಗ ಅರ್ಥವಾಗುತ್ತಿರಲಿಲ್ಲವಾದರೂ, ಬೇರೆ ಪತ್ರಿಕೆಗಳಿಗಿಂತಲೂ ಅದು ವಿಭಿನ್ನ, ಅಪ್ಪ ಆ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಹೆಮ್ಮೆ ಮಾತ್ರ ಸದಾ ಇರುತ್ತಿತ್ತು. 

 

ಓದು ಮುಗಿಸಿ ಬೆಂಗಳೂರಿಗೆ ಹೋದ ಮೇಲೆ, ನನ್ನ ರೂಮ್ ಮೇಟ್ ಕೆಲಸ ಮಾಡುತ್ತಿದ್ದ ಇಂಡಿಯನ್ ಎಕ್ಸ್‌ಪ್ರೆಸ್/ಕನ್ನಡಪ್ರಭ ಕಚೇರಿಗೆ ಮೊದಲ ಬಾರಿಗೆ ಭೇಟಿ ಕೊಟ್ಟಾಗ ದೊಡ್ಡ ಅಚ್ಚರಿ ಕಾದಿತ್ತು. ಅಲ್ಲಿ ಯಾವುದೇ ಸೆಕ್ಯೂರಿಟಿ ಚೆಕ್ ಆಗಲಿ, ಸಂದರ್ಶಕರ ಹಾಜರಿ ಪುಸ್ತಕವಾಗಲಿ ಇರಲಿಲ್ಲ. ಯಾರು ಬೇಕಾದರೂ ಪತ್ರಿಕೆಯ ಕಚೇರಿಗೆ ಭೇಟಿ ನೀಡಬಹುದಿತ್ತು. ಕಾರಣ ಕೇಳಿದಾಗ ತಾವು ಪ್ರಜಾವಾಣಿಯಷ್ಟು ಹೈಫೈ ಅಲ್ಲ ಎಂದು ಆಕೆ ನಗೆಚಟಾಕಿ ಹಾರಿಸಿದ್ದಳು. ಆಗ ಅಪ್ಪ ಅದರ ಹಿಂದಿನ ಕಾರಣವನ್ನು ವಿವರಿಸಿದ್ದರು. ಇತರೆ ಪತ್ರಿಕೆಗಳ ಹಾಗೆ ಪ್ರಜಾವಾಣಿ/ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಪ್ರಿಂಟಿಂಗ್ ಬೇರೆಡೆಯಾಗದೆ ಅದೇ ಕಟ್ಟಡದಲ್ಲಾಗುತ್ತದೆ, ಹಾಗಾಗಿ ಸುರಕ್ಷತೆಯ ಬಗ್ಗೆ ಸದಾ ಎಚ್ಚರ ವಹಿಸಬೇಕಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದರು. ವರ್ಷಗಳು ಕಳೆದ ಹಾಗೆ ಅಲ್ಲಿನ ಭದ್ರತೆ ಮತ್ತಷ್ಟು ಹೆಚ್ಚಾಗಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕಳೆದ ಸಲ ಭಾರತಕ್ಕೆ ಬಂದಾಗಲೂ ಪ್ರಜಾವಾಣಿಯ ಕಟ್ಟಡಕ್ಕೆ ಹೋಗಿದ್ದೆ, ಅಲ್ಲಿ ಕೆಲಸ ಮಾಡುತ್ತಿರುವ ಗೆಳೆಯ ತಾನೇ ಕೆಳಗೆ ಬಂದು ಮಾತನಾಡಿಸಿಕೊಂಡು ಹೋಗಿದ್ದ. 

 

ಯಾವುದೇ ದೇಶವಿರಲಿ, ಒಂದು ಸಂಸ್ಥೆಯಲ್ಲಿ ಗೇಟ್ ಪಾಸ್ ವ್ಯವಸ್ಥೆ ಜಾರಿಯಲ್ಲಿದ್ದರೆ ಅಲ್ಲಿನ ಆವರಣದಲ್ಲಿ ಅನಧಿಕೃತ ಚಲನೆಯನ್ನು ನಿರ್ಬಂಧಿಸುವುದು ಮಾತ್ರವಲ್ಲದೆ, ಉದ್ಯೋಗಿಗಳ ಚಲನೆಯ ಸಮಯವನ್ನೂ ದಾಖಲಿಸುತ್ತಿದ್ದಾರೆ ಎಂದರ್ಥ. ಒಟ್ಟಿನಲ್ಲಿ, ಯಾರನ್ನಾದರೂ ಭೇಟಿ ಮಾಡಬೇಕಾದರೆ ಅಥವಾ ಒಂದು ಕಚೇರಿಗೆ ಹೋಗಬೇಕಾದರೆ ಅಲ್ಲಿ ಕೆಲಸ ಮಾಡುವ ಗೆಳೆಯರು, ಪರಿಚಯಸ್ಥರಿದ್ದರೆ ಸಾಲದು, ಕಡ್ಡಾಯವಾಗಿ ಪ್ರವೇಶ ಪರವಾನಗಿ ಇರಲೇಬೇಕು.


(Source: TV9 Kannada)

Qatar Mail: ಪ್ರವೇಶ ಪರವಾನಗಿ ಮುಗಿದಲ್ಲಿ ಜೈಲಿನಲ್ಲಿ ಉಪಚಾರ ಗ್ಯಾರಂಟಿ

 ಕತಾರ್ ಮೇಲ್ | Qatar Mail : ಆ ದಿನದ ಕೆಲಸ ಮುಗಿಸಿ, ಎಚ್.ಆರ್. ಬಳಿ ಹೋದಾಗ ಆಕೆ ಇನ್ನೂ ಕೋಪದಲ್ಲೇ ಇದ್ದಳು. ನನ್ನಿಂದಾಗಿ ಎಡಿಟರ್ ಆಕೆಯನ್ನು ಆ ದಿನ ಬೇಗ ಎಬ್ಬಿಸಿದ್ದರಿಂದ ಹಿಡಿದು, ಹೇಗೆ ಆಕೆ ತರಾತುರಿಯಲ್ಲಿ ತಯಾರಾಗಿ ಆಫೀಸಿಗೆ ಬರಬೇಕಾಯಿತು ಎನ್ನುವುದರ ಬಗ್ಗೆ ಸುದೀರ್ಘವಾಗಿ ಹೇಳಿ, ಮುಂದಿನ ಮೂರು ತಿಂಗಳ ಪಾಸ್ ಮಂಜೂರು ಮಾಡಿ ಸಂಬಂಧ ಪಟ್ಟ ಆಫೀಸಿಗೆ ಗೊಣಗಿಕೊಂಡು ನನ್ನೆದುರೇ ಈ-ಮೇಲ್ ಮಾಡಿದಳು. ಅಷ್ಟಕ್ಕೂ, ಗೇಟ್ ಪಾಸ್ ವ್ಯಾಲಿಡಿಟಿ ಮುಗಿದ ಮೇಲೂ ನನ್ನನ್ನು ಹೇಗೆ ಗೇಟಿನೊಳಗೆ ಬಿಟ್ಟರು, ಮುಖ್ಯ ದ್ವಾರದಲ್ಲಿರುವ ಸೆಕ್ಯೂರಿಟಿ ನನ್ನ ಪರವಾನಗಿಯನ್ನು ತಪಾಸಣೆ ಮಾಡಲಿಲ್ಲವೇ ಎಂದು ಆಕೆ ಕೇಳಿದಳು. ನನ್ನ ಗಂಡನೂ ಪಕ್ಕದ ಟಿವಿ ಚಾನೆಲಿನಲ್ಲಿ ಕೆಲಸ ಮಾಡುತ್ತಿರುದನ್ನು ನೆನಪಿಸಿ, ಕಾರಿನ ಮೇಲೆ ಅಂಟಿಸಿರುವ ಮೀಡಿಯಾ ಗೇಟ್ ಪಾಸ್ ಸ್ಟಿಕರ್ ನೋಡಿ ನಮ್ಮನ್ನು ಗೇಟಿನೊಳಗೆ ಬಿಟ್ಟ ವಿಚಾರ ತಿಳಿಸಿದಾಗ ತಲೆಯಾಡಿಸಿ ನಕ್ಕಳು.    

ಇಲ್ಲಿ ಒಂದು ಕಚೇರಿಯನ್ನು ಪ್ರವೇಶಿಸಬೇಕಾದರೆ ಎಂಟ್ರಿ ಪರ್ಮಿಟ್, ಗೇಟ್ ಪಾಸ್, ಅಪಾಯಿಂಟ್ಮೆಂಟ್ ಬಹಳ ಮುಖ್ಯ. ಪ್ರವೇಶ ಪರವಾನಗಿಯಿಲ್ಲದೆ ಸೆಕ್ಯೂರಿಟಿ ನಮ್ಮನ್ನು ಒಳಗೆ ಬಿಡುವುದಿಲ್ಲ. ಕಚೇರಿಗೆ ಲ್ಯಾಪ್ ಟಾಪ್ ತೆಗೆದುಕೊಂಡು ಹೋಗಬೇಕಾಗಿದ್ದಲ್ಲಿ ಅದಕ್ಕೂ ಬೇರೆ ಪರ್ಮಿಟ್ ಬೇಕು. ಇನ್ನು ಆಸ್ಪತ್ರೆಗಳ ಅಪಾಯಿಂಟ್ಮೆಂಟ್ ಬಗ್ಗೆ ಹೇಳುವುದೇ ಬೇಡ. ಜನರಲ್ ಫಿಸಿಷಿಯನ್, ನಮ್ಮ ಭಾಗ್ಯವಿದ್ದರೆ, ಒಂದೆರಡು ತಿಂಗಳು, ಇನ್ನು ತಜ್ಞ ವೈದ್ಯರು, ಸ್ಪೆಷಲ್ ವಿಭಾಗಗಳಾದ, ಕಣ್ಣು, ಮೂಗು, ದಂತ, ಸ್ತ್ರೀರೋಗತಜ್ಞರ ಅಪಾಯಿಂಟ್ಮೆಂಟ್ ಬೇಕೆಂದರೆ ಕಡಿಮೆಯೆಂದರೂ ಏಳೆಂಟು ತಿಂಗಳು ಕಾಯಲೇಬೇಕು!    


ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ಛಾಯಾಗ್ರಾಹಕಿ (Chaithra Arjunpuri) 


*


(ಪತ್ರ 6, ಭಾಗ 2)


ಈ ಗೇಟ್ ಪಾಸ್ ಎಷ್ಟು ಮುಖ್ಯ, ಇದರಿಂದ ಎಷ್ಟೆಲ್ಲಾ ತೊಂದರೆ, ಪಜೀತಿಗಳಾಗಿಬಿಡುತ್ತವೆ ಎನ್ನುವುದಕ್ಕೆ ಮತ್ತೊಂದು ಘಟನೆಯನ್ನು ಹೇಳುತ್ತೇನೆ. ಕತಾರಿನಲ್ಲಿ ತೈಲ ಮತ್ತು ಅದರ ಸಂಬಂಧಿತ ಉತ್ಪನ್ನಗಳ ಕಾರ್ಖಾನೆಗಳನ್ನು, ಸ್ಥಳಗಳನ್ನು ಚಿತ್ರೀಕರಣ ಮಾಡುವುದು ಅಪರಾಧ. ಅದಕ್ಕೆ ಬೇಕಾದ ಸೂಕ್ತ ಪರವಾನಗಿಯನ್ನು ಸರ್ಕಾರದಿಂದ ಛಾಯಾಗ್ರಾಹಕರು ಮೊದಲೇ ಪಡೆದು, ಆಯಾ ಕಂಪನಿಗಳಿಗೆ ಒದಗಿಸಬೇಕಾಗುತ್ತದೆ. ಪರವಾನಗಿಯಲ್ಲಿ ಛಾಯಾಗ್ರಾಹಕನ ಹೆಸರು, ಆತನ ವೃತ್ತಿ, ಕೆಲಸ ಮಾಡುತ್ತಿರುವ ಕಂಪನಿಯ ಹೆಸರು, ದಿನಾಂಕ ಮತ್ತು ಸಮಯವನ್ನು ನಮೂದಿಸಲಾಗಿರುತ್ತದೆ. ಹಾಗಾಗಿ ಹೆಸರಿರುವ ವ್ಯಕ್ತಿ, ನಮೂದಿಸಲಾಗಿರುವ ದಿನ ಮತ್ತು ಸಮಯಕ್ಕೆ ಹಾಜರಾಗದಿದ್ದರೆ ಪರವಾನಗಿ ರದ್ದಾಗುತ್ತದೆ.


ನನ್ನ ಪತಿ ಕೆಲಸ ಮಾಡುತ್ತಿದ್ದ ಹಳೆಯ ಕಂಪೆನಿಯ ಸಹೋದ್ಯೋಗಿ ರಿಚರ್ಡ್ (ಹೆಸರು ಬದಲಾಯಿಸದಲಾಗಿದೆ) ಒಮ್ಮೆ ಗುರುವಾರ ಚಿತ್ರೀಕರಣಕ್ಕೆಂದು ಹೋದವನು ಸಂಜೆಯಾದರೂ ಮರಳಿ ಆಫೀಸಿಗೆ ಬರಲಿಲ್ಲ. ಜರ್ಮನ್ ಪ್ರಜೆಯಾದ ಆತನ ಮದ್ಯ ವ್ಯಸನದ ಗುಟ್ಟು ಕಂಪನಿಯ ಎಲ್ಲರಿಗೂ ತಿಳಿದಿದ್ದುದ್ದರಿಂದ ಯಾರೂ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ಪ್ರಾಯಶಃ ಚಿತ್ರೀಕರಣ ಮುಗಿಸಿ ನೇರವಾಗಿ ಮನೆಗೆ ಹೋಗಿ, ಗುಂಡು ಹೊಡೆದು ಮಲಗಿರಬೇಕೆಂದು ಎಲ್ಲರೂ ಸುಮ್ಮನಾದರು. ವಾರಾಂತ್ಯ ಮುಗಿದು ಭಾನುವಾರ ಬಂದರೂ ಆಸಾಮಿ ಪತ್ತೆಯಿಲ್ಲ. ಮೊಬೈಲಿಗೆ ಕಾರ್ ಮಾಡಿದರೆ ಅದೂ ಬಂದ್. ಹುಷಾರು ತಪ್ಪಿ, ಅಥವಾ ಕುಡಿತ ಹೆಚ್ಚಾಗಿ ಮನೆಯಲ್ಲಿ ಏನಾದರೂ ಹೆಚ್ಚು ಕಡಿಮೆಯಾಯಿತೇನೋ ಎಂದು ಅವನ ಅಪಾರ್ಟ್ಮೆಂಟಿನಲ್ಲಿ ವಿಚಾರಿಸಿದರೆ ಆತ ಗುರುವಾರ ಬೆಳಗ್ಗೆ ಕೆಲಸಕ್ಕೆಂದು ಮನೆ ಬಿಟ್ಟವನು ಮರಳಿ ಬಂದೇ ಇರಲಿಲ್ಲ.


ಆತ ಹೋಗಿದ್ದದ್ದು ತೈಲೋತ್ಪನ್ನ ಕಂಪನಿಯೊಂದರ ಚಿತ್ರೀಕರಣಕ್ಕೆಂದು. ಅಲ್ಲೆಲ್ಲಾದರೂ ಕುಡಿದು, ಮರಳುಗಾಡಿನಲ್ಲಿ ಏನಾದರೂ ಹೆಚ್ಚು ಕಡಿಮೆಯಾಯಿತೇನೋ ಎನ್ನುವ ದಿಗಿಲು ಆಫೀಸಿನಲ್ಲಿ ಎಲ್ಲರಿಗೂ. ಎಲ್ಲಾ ಕಡೆ ಹುಡುಕಿ, ವಿಚಾರಿಸಿ ಹತಾಶರಾದ ಸಹೋದ್ಯೋಗಿಗಳು ಕೊನೆಗೆ ರಿಚರ್ಡ್ ಕಾಣೆಯಾದ ಬಗ್ಗೆ ದೂರು ಕೊಡಲು ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದರು. ವಿಷಯ ಕೇಳಿದ ಪೊಲೀಸರು ಒಂದೆರಡು ಕರೆಗಳನ್ನು ಮಾಡಿದ ಮೇಲೆ ರಿಚರ್ಡ್ ಜೈಲಿನಲ್ಲಿರುವ ವಿಚಾರ ತಿಳಿಸಿದರು. ಆತನ ಬಳಿಯಿದ್ದ ಪ್ರವೇಶ ಪರವಾನಗಿ ಬುಧವಾರ ಮುಗಿದಿದ್ದದ್ದು ಆತನ ಗಮನಕ್ಕೆ ಬಂದಿರಲಿಲ್ಲ. 


(Source: TV9 Kannada)