Friday 10 June 2022

Qatar Mail: ಅರಬ್ ರಾಷ್ಟ್ರಗಳಲ್ಲಿ ದೇವರನಾಡಿನ ದೇವತೆಯರು

Qatar Mail : ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗಕ್ಕೆಂದು ಅತೀ ಹೆಚ್ಚು ಸಂಖ್ಯೆಯ ಭಾರತೀಯರನ್ನು ಪ್ರತಿ ವರ್ಷ ಕಳುಹಿಸಿಕೊಡುತ್ತಿರುವ ರಾಜ್ಯ ಎನ್ನುವ ಹೆಗ್ಗಳಿಕೆಯನ್ನು ಕೇರಳ ಈಗಲೂ ಉಳಿಸಿಕೊಂಡಿದೆ, ಪ್ರಾಯಶಃ ಮುಂದೆಯೂ ಉಳಿಸಿಕೊಂಡಿರುತ್ತದೆ. ತಮ್ಮ ರಾಜ್ಯದಲ್ಲಿ ನೌಕರಿ ದೊರಕದೆ ಲಕ್ಷಾಂತರ ಮಂದಿ ಗಲ್ಫ್ ರಾಷ್ಟ್ರಗಳತ್ತ ಅನಾದಿ ಕಾಲದಿಂದಲೂ ಬರುತ್ತಿದ್ದಾರೆ. ಕೇರಳ ರಾಜ್ಯ ಗಲ್ಫ್ ರಾಷ್ಟ್ರಗಳ ಮೇಲೆ ಎಷ್ಟು ಅವಲಂಬಿತವಾಗಿದೆಯೆಂಬುದು ಸಾಮಾನ್ಯರ ಊಹೆಗೆ ನಿಲುಕುವಂಥದ್ದಲ್ಲ. ಒಂದು ವೇಳೆ ತೈಲ ರಾಷ್ಟ್ರಗಳತ್ತ ವಲಸೆ ಸಾಧ್ಯವಾಗದೆ ಹೋಗಿದ್ದಲ್ಲಿ ಕೇರಳದ ಸ್ಥಿತಿ ಏನಾಗಿರುತ್ತಿತ್ತೊ ಊಹಿಸಲು ಸಾಧ್ಯವಿಲ್ಲ. 2020 ಒಂದು ವರದಿಯ ಪ್ರಕಾರ, 2.12 ಮಿಲಿಯನ್ ಕೇರಳ ವಲಸಿಗರು, ಅಂದರೆ ರಾಜ್ಯದ ಜನಸಂಖ್ಯೆಯ ಸರಿಸುಮಾರು ಶೇಆರಕ್ಕಿಂತ ಸ್ವಲ್ಪ ಹೆಚ್ಚು ಮಂದಿ, ಆದರೆ ಅದರ ಶೇ. 17-18 ಉದ್ಯೋಗಿಗಳು, ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಒಟ್ಟು ವಲಸಿಗರಲ್ಲಿ ಶೇ. 89.4ರಷ್ಟು ಮಂದಿ ಇರುವುದು ಅರೇಬಿಯನ್ ಪೆನಿನ್ಸುಲಾದಲ್ಲಿ ಗಲ್ಫ್ ದೇಶಗಳೆಂದು ಕರೆಯಲ್ಪಡುವ ಆರು ದೇಶಗಳಲ್ಲಿಬಹ್ರೇನ್, ಕುವೈತ್, ಒಮಾನ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್. ಚೈತ್ರಾ ಅರ್ಜುನಪುರಿ, ಪತ್ರಕರ್ತೆ


(ಪತ್ರ 12)

ಇನ್ನು ಅಂರಾರಾಷ್ಟ್ರೀಯ ರವಾನೆಗಳನ್ನು ಗಮನಿಸಿದರೆ ಕೇರಳದ ತಲಾ ಆದಾಯವು ಅಖಿಲ ಭಾರತದ ತಲಾ ಆದಾಯವನ್ನು ಮೀರಿಸುತ್ತದೆ. ಶತಮಾನದ (2000-2001) ಅಂತ್ಯದಲ್ಲಿ ಕೇರಳದ ತಲಾ ಆದಾಯವು ಕ್ರಮವಾಗಿ 447 ಮತ್ತು 539 ಅಮೇರಿಕನ್ ಡಾಲರ್ ಆಗಿತ್ತು ಎಂದು ನಿವ್ವಳ ರಾಜ್ಯ ದೇಶೀಯ ಉತ್ಪನ್ನ (NSDP) ಮತ್ತು ಮಾರ್ಪಡಿಸಿದ ರಾಜ್ಯ ಆದಾಯ (MSI) ತಿಳಿಸಿದ್ದವು. ಎರಡು ದಶಕಗಳ ನಂತರ (2019–2020), ಆದಾಯ ಕ್ರಮವಾಗಿ 3,194 ಮತ್ತು 3,620 ಅಮೇರಿಕನ್ ಡಾಲರ್ ಆಗಿದ್ದವು. ಎರಡೂ ಕಾಲಘಟ್ಟಗಳಲ್ಲಿ ಅಖಿಲ ಭಾರತದ ತಲಾ ನಿವ್ವಳ ದೇಶೀಯ ಉತ್ಪನ್ನ (NDP) ಅನುಕ್ರಮವಾಗಿ 416 ಮತ್ತು 1,906 ಅಮೇರಿಕನ್ ಡಾಲರ್ ಮಾತ್ರವಾಗಿದ್ದವು.


ಕೇರಳವನ್ನು ಒಂದು ದೇಶವೆಂದು ಪರಿಗಣಿಸಬಹುದಾದರೆ, ಅದರ ಆರ್ಥಿಕ ಸ್ಥಿತಿಮಧ್ಯಮ-ಆದಾಯದ ದೇಶ” ($3,996 ರಿಂದ $12,375) ಎನ್ನುವ ವ್ಯಾಖ್ಯಾನಕ್ಕೆ ಹತ್ತಿರವಾಗುತ್ತದೆ, ಎಂದು ಕೆ.ಪಿ. ಕಣ್ಣನ್ ಮತ್ತು ಕೆ.ಎಸ್. ಹರಿಯವರಕೇರಳದ ಗಲ್ಫ್ ಸಂಪರ್ಕ ಮರುಪರಿಶೀಲನೆ: ಅರ್ಧ ಶತಮಾನದ ವಲಸೆ, ರವಾನೆ ಮತ್ತು ಅವುಗಳ ಸ್ಥೂಲ ಆರ್ಥಿಕ ಪರಿಣಾಮ, 1972–2020’ ಎನ್ನುವ ಸಂಶೋಧನೆ ತಿಳಿಸುತ್ತದೆ. ಇದು ದಕ್ಷಿಣ ಏಷ್ಯಾದ ಇತರೆ ರಾಷ್ಟ್ರಗಳೊಡನೆ ಹೋಲಿಸಿದರೆ ದೊಡ್ಡ ಸಾಧನೆಯೆನಿಸಿದರೂ, ಇಂಡೋನೇಷ್ಯಾ ($4,193), ಥೈಲ್ಯಾಂಡ್ ($6,502) ಅಥವಾ ಮಲೇಷ್ಯಾ ($12,478) ದಂತಹ ಕೆಲವು ಆಗ್ನೇಯ ಏಷ್ಯಾದ ದೇಶಗಳ ಆರ್ಥಿಕತೆಗಳಷ್ಟು ಪ್ರಭಾವಶಾಲಿಯಾಗಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ.

ಇನ್ನು ಕೇರಳದಿಂದ ಅರಬ್ ರಾಷ್ಟ್ರಗಳಿಗೆ ವಲಸೆ ಬರುವ ಮಹಿಳೆಯರಲ್ಲಿ ಬಹುತೇಕರು ಅರಸಿಕೊಂಡು ಹೋಗುವುದು ನರ್ಸ್ ಉದ್ಯೋಗವನ್ನು. ರಾಜ್ಯಕ್ಕೆ ಹರಿದು ಬರುವ ವಿದೇಶಿ ಹಣದಲ್ಲಿ ಶೇ. 20ರಷ್ಟು ಮಹಿಳೆಯರ, ಅದರಲ್ಲೂ ನರ್ಸ್ ಗಳ, ವರಮಾನ ಎಂದು ಕೇರಳ ವಲಸೆ ಅಧ್ಯಯನ (KMS) 2020ರಲ್ಲಿ ವರದಿ ಮಾಡಿತ್ತು.


ನರ್ಸ್ ಗಳ ಕೊಡುಗೆ: ವಿಶ್ವದ ಜನಸಂಖ್ಯೆಯ ಆರೋಗ್ಯವನ್ನು ಕಾಪಾಡುವಲ್ಲಿ ಮತ್ತು ರಕ್ಷಿಸುವಲ್ಲಿ ನರ್ಸಿಂಗ್ ಅತ್ಯಂತ ಪ್ರಮುಖ ವೃತ್ತಿಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (who) 2020 ವರದಿಯ ಪ್ರಕಾರ, ಎಲ್ಲಾ ಬಗೆಯ ಆರೋಗ್ಯ ವೃತ್ತಿಪರರಲ್ಲಿ ಶೇ. 59 ನರ್ಸ್ ಗಳಿದ್ದರೆ, ಮತ್ತು ಅವರ ಜಾಗತಿಕ ಸಂಖ್ಯೆ ಪ್ರಸ್ತುತ 28 ಮಿಲಿಯನ್, ಅದರಲ್ಲಿ 19.3 ಮಿಲಿಯನ್ ವೃತ್ತಿಪರ ನರ್ಸ್ ಗಳು, 6 ಮಿಲಿಯನ್ ಸಹಾಯಕ ವೃತ್ತಿಪರ ನರ್ಸ್ ಗಳು ಮತ್ತು ಉಳಿದವರು ವರ್ಗೀಕರಿಸಲಾಗಿಲ್ಲದ ನರ್ಸ್ ಗಳು. ಜಾಗತಿಕ ಶುಶ್ರೂಷೆಯ ಕೊರತೆಯು 2016ರಲ್ಲಿ ಅಂದಾಜಿಸಲಾದ 6.6 ಮಿಲಿಯನ್‌ ನಿಂದ 2018 ರಲ್ಲಿ ಸುಮಾರು 6 ಮಿಲಿಯನ್‌ ಗೆ ಇಳಿದಿದ್ದರೂ, 2030 ವೇಳೆಗೆ ಪ್ರತಿಯೊಬ್ಬ ವ್ಯಕ್ತಿಯ ಅಗತ್ಯಗಳನ್ನು ಪೂರೈಸಲು ವಿಶ್ವಾದ್ಯಂತ 36 ಮಿಲಿಯನ್ ನರ್ಸ್ ಗಳ ಅವಶ್ಯಕತೆ ಇರುತ್ತದೆ ಎನ್ನುವುದು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಚಾರ.


ನಾವು ಮುಂಚೆ ವಾಸಿಸುತ್ತಿದ್ದ ವಿಲ್ಲಾ ಕಾಂಪೌಂಡಿನಲ್ಲಿ ನಾಲ್ಕು ಜನ ಕೇರಳದ ನರ್ಸ್ ಗಳು ತಮ್ಮ ಕುಟುಂಬಗಳೊಂದಿಗೆ ವಾಸವಾಗಿದ್ದರು. ಅವರಲ್ಲಿ ಇಬ್ಬರಿಗೆ ಪುಟ್ಟ ಮಕ್ಕಳಿದ್ದವುಒಂದು ವರ್ಷದ ಹೆಣ್ಣು ಮಗು ಒಬ್ಬಾಕೆಗೆ, ಒಂದೂವರೆ ವರ್ಷದ ಹೆಣ್ಣು ಮಗು ಇನ್ನೊಬ್ಬಾಕೆಗೆ. ಇಬ್ಬರ ಮನೆಯಲ್ಲೂ ಮಕ್ಕಳ ಜವಾಬ್ದಾರಿ, ಮನೆಕೆಲಸದ ಜವಾಬ್ದಾರಿ ಶ್ರೀಲಂಕಾದಿಂದ ಬಂದಿದ್ದ ಮನೆಕೆಲಸದವರದಾಗಿತ್ತು.


ನಾಲ್ವರು ನರ್ಸ್ ಗಳೂ ಮೊದಲು ತಾವು ಕತಾರಿಗೆ ಬಂದು, ನಂತರದಲ್ಲಿ ತಮ್ಮ ಗಂಡಂದಿರನ್ನೂ ಕರೆಸಿಕೊಂಡಿದ್ದರು. ಗಂಡ-ಹೆಂಡತಿ ಇಬ್ಬರೂ ದುಡಿದು ಬೆಂಗಳೂರು, ತಿರುವನಂತಪುರಂ, ಕೊಚ್ಚಿ ಮುಂತಾದ ದೊಡ್ಡ ನಗರಗಳಲ್ಲಿ ಸೈಟು, ಮನೆಗಳನ್ನು ಖರೀದಿಸಿದ್ದರು. ತಮ್ಮ ಸ್ವಂತ ಊರುಗಳಲ್ಲಿಗಲ್ಫ್ ಬಂಗಲೆಗಳನ್ನು ಕಟ್ಟಿಸಿ ತಮ್ಮ ವಯಸ್ಸಾದ ತಂದೆ-ತಾಯಿಯ ಸುಪರ್ದಿಗೆ ಬಿಟ್ಟು ಬಂದಿದ್ದರು. “ಇಲ್ಲಿಗೆ ಬರದಿದ್ದರೆ ನಮಗೆ ಇಷ್ಟೆಲ್ಲಾ ಸಂಪಾದಿಸಲು ಸಾಧ್ಯವಾಗುತ್ತಿರಲಿಲ್ಲ,” ಎಂದಿದ್ದಳು, ಬೆಂಗಳೂರಿನಲ್ಲಿ ಮನೆ ಖರೀದಿಸಿ ಅದನ್ನು ತಮ್ಮವರಿಗೆ ಬಾಡಿಗೆಗೆ ಕೊಟ್ಟಿದ್ದ ನಮ್ಮ ಪಕ್ಕದ ಮನೆಯಲ್ಲಿ ವಾಸವಿದ್ದ ನರ್ಸ್.


ಇವರಲ್ಲಿ ಒಬ್ಬಾಕೆ ಎಂಟು ತಿಂಗಳ ಗರ್ಭಿಣಿ. ಚೊಚ್ಚಲ ಬಸುರಿ, ಹೆರಿಗೆ ರಜೆ ಹಾಕಿ ತಾಯಿಯ ಮನೆಗೆ ಹೋಗಬಾರದೆ ಎನ್ನುವ ನನ್ನ ಪ್ರಶ್ನೆಗೆ, “ಹೆರಿಗೆ ನೋವು ಬರುವವರೆಗೂ ಕೆಲಸಕ್ಕೆ ಹೋಗುತ್ತೇನೆ. ಹೆರಿಗೆಗೆ ನನ್ನ ತಾಯಿ ಇಲ್ಲಿಗೇ ಬರುತ್ತಾರೆ,” ಎಂದಿದ್ದಳು. ರಜೆ ಹಾಕಿದರೆ ಸಂಬಳ ಕಡಿಮೆಯಾಗುತ್ತದೆ ಎನ್ನುವ ಆತಂಕ ಒಂದೆಡೆಯಾದರೆ, “ಪ್ರತಿ ತಿಂಗಳು ವರಮಾನದಲ್ಲಿ ಉಳಿತಾಯ ಮಾಡಿ ಅತ್ತೆಗೆ ಹಣ ಕಳುಹಿಸದಿದ್ದರೆ ಆಕೆಯ ಕೋಪಕ್ಕೆ ತುತ್ತಾಗಬೇಕಾಗುತ್ತದೆ,” ಎನ್ನುತ್ತಾ ಆಕೆ ವಿಷಾದದ ನಗೆ ನಕ್ಕಾಗ ನನಗೆ ಪಿಚ್ಚೆನ್ನಿಸಿತ್ತು.


ಇದೇ ಕಾರಣಕ್ಕೆ ಕೇರಳದಲ್ಲಿ ನಾಯಿ ಕೊಡೆಗಳ ಹಾಗೆ ಎಲ್ಲೆಂದರಲ್ಲಿ ನರ್ಸಿಂಗ್ ಕಾಲೇಜುಗಳು ಮೇಲೇಳುತ್ತಿವೆ. ನರ್ಸಿಂಗ್ ಕೋರ್ಸ್ ನಡೆಸಲು Kerala Nurses and Midwives Council ಅನುಮೋದನೆ ಪಡೆದಿರುವ 115 ಆಸ್ಪತ್ರೆಗಳು ಕೇರಳ ರಾಜ್ಯದಲ್ಲಿವೆ. ಇದಲ್ಲದೆ 12 ಸರ್ಕಾರಿ ನರ್ಸಿಂಗ್ ಕಾಲೇಜುಗಳು ಮತ್ತು 200ಕ್ಕೂ ಮೇಲ್ಪಟ್ಟು ಖಾಸಗಿ ಮತ್ತು ಅನುಮೋದನೆ ಪಡೆಯದ ನರ್ಸಿಂಗ್ ವಿದ್ಯಾಸಂಸ್ಥೆಗಳು ಇವೆ. ಇದು ಸಾಲದೆಂಬಂತೆ, CGFNS (Commission on Graduates of Foreign Nursing Schools), IELTS (International English Language Testing System) and NCLEX (National Council Licensure Examination) ಪರೀಕ್ಷೆಗೆ ನರ್ಸ್ ಗಳನ್ನು ತರಬೇತು ಮಾಡಲು ನೂರಾರು ಖಾಸಗಿ ಸಂಸ್ಥೆಗಳು ಹುಟ್ಟಿಕೊಂಡಿವೆ. ಎಲ್ಲರಿಗೂ ತಿಳಿದಿರುವಂತೆ, ಪ್ರತಿ ವರ್ಷ ದೇಶದಲ್ಲಿ ಅತಿ ಹೆಚ್ಚು ನರ್ಸಿಂಗ್ ವಿದ್ಯಾರ್ಥಿಗಳನ್ನು ಹುಟ್ಟು ಹಾಕುತ್ತಿರುವ ರಾಜ್ಯವೆನ್ನುವ ಹೆಗ್ಗಳಿಕೆ ಕೇರಳಕ್ಕಿದೆ. ಮಾತ್ರವಲ್ಲ, ವಿದೇಶಗಳಿಗೆ ಅತೀ ದೊಡ್ಡ ಸಂಖ್ಯೆಯಲ್ಲಿ ನರ್ಸ್ ಗಳನ್ನು ಕಳುಹಿಸುವ ರಾಜ್ಯವೂ ಕೇರಳವೇ.


ಗಲ್ಫ್ ಎಂದರೆ ಪಕ್ಕದ ಊರು: ನಾನು ಹಿಂದೆ ಚಿಕಿತ್ಸೆಗೆ ಹೋಗುತ್ತಿದ್ದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಲಯಾಳಿ ನರ್ಸೊಬ್ಬಳು ಅಲ್ಲಿ ಕೆಲಸಕ್ಕೆ ಸೇರಿ ಐದು ವರ್ಷಗಳಾಗಿದ್ದವು. ಅದೂ ಇದೂ ಮಾತನಾಡುತ್ತಾ, “ವಿದೇಶಕ್ಕೆ ಹೋದರೆ ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿಗಳಿಂದ ದೂರಾಗಿಬಿಡುತ್ತೇವೆ. ಆದರೆ, ಇಲ್ಲಿ ಅಂಥಾ ವ್ಯತ್ಯಾಸ ಕಾಣುವುದಿಲ್ಲ. ಗಲ್ಫ್ ನಲ್ಲಿರುವಾಗ ನಮಗೆ ಒಂಟಿತನವಾಗಲಿ, ಅಪರಿಚಿತತೆಯಾಗಲಿ ಕಾಡುವುದಿಲ್ಲ. ಭಾರತಕ್ಕೆ ಹತ್ತಿರವಿರುವುದರಿಂದ ಪಕ್ಕದ ಊರಿನಲ್ಲಿರುವಂತೆ ಭಾಸವಾಗುತ್ತದೆ,” ಎಂದು ನರ್ಸ್ ನಗುತ್ತಾ ಹೇಳಿದ್ದಳು.


ನಿಜ, ಇತರೆ ದೇಶಗಳಿಗೆ ಹೋಲಿಸಿದರೆ, ಗಲ್ಫ್ ನಿಂದ ಭಾರತಕ್ಕೆ ಕೇವಲ ನಾಲ್ಕು ಗಂಟೆ ಪ್ರಯಾಣ. ಅಂದರೆ, ಬೆಂಗಳೂರಿನಿಂದ ಮೈಸೂರಿಗೆ ಹೋದ ಹಾಗಾಗುತ್ತದೆ. ಹೀಗಿರುವಾಗ, ಕೇರಳದ ಜನ ಇದನ್ನು ಪಕ್ಕದ ಊರು ಎಂದರೆ ತಪ್ಪೇನಿಲ್ಲ ಬಿಡಿ. ಮೇಲಾಗಿ, ಅರಬ್ ರಾಷ್ಟ್ರಗಳಲ್ಲಿ ಕೆಲಸ ಮಾಡಲು ಪಾಶ್ಚಿಮಾತ್ಯ ದೇಶಗಳಲ್ಲಿ ಅಗತ್ಯವಾಗಿರುವ CGFNS ಅಥವಾ IELTS ಅಥವಾ NCLEX ಪರೀಕ್ಷೆಗಳನ್ನು ಪಾಸು ಮಾಡಬೇಕಾಗಿಲ್ಲ. ಅದಕ್ಕೂ ಮಿಗಿಲಾಗಿ ಗಲ್ಫ್ ನಲ್ಲಿ ದುಡಿದರೆ ತೆರಿಗೆ ಪಾವತಿ ಮಾಡಬೇಕಾಗಿಲ್ಲ, ನೌಕರಿ ಒಪ್ಪಂದ ಪತ್ರದಲ್ಲಿ ಉಲ್ಲೇಖಿಸಲಾದ ಅಷ್ಟೂ ಸಂಬಳ ಅವರ ಖಾತೆಗೆ ಯಾವುದೇ ಕಡಿತವಿಲ್ಲದೆ ಪ್ರತಿ ತಿಂಗಳೂ ಸಂದಾಯವಾಗುತ್ತದೆ. ಸಂಬಳವನ್ನು ಮರಳಿ ಅವರು ಭಾರತದದಲ್ಲಿರುವ ತಮ್ಮ NRI ಅಥವಾ NRE ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದರೂ ತೆರಿಗೆ ಕಡಿತವಾಗುವುದಿಲ್ಲ.


ಮಾತ್ರವಲ್ಲ, ರಾಷ್ಟ್ರಗಳಿಗೆ ನರ್ಸ್ ಆಗಿ ಬರುವವರಿಗೆ ಸೂಕ್ತವಾದ ಉಚಿತ ವಸತಿ, ಕುಟುಂಬವಿದ್ದರೆ ವಸತಿ ಭತ್ಯೆ, ಆಸ್ಪತ್ರೆಯಿಂದ ವಸತಿಗೆ ಮತ್ತು ವಸತಿಯಿಂದ ಆಸ್ಪತ್ರೆಗೆ ಉಚಿತ ಪ್ರಯಾಣ, ಉಚಿತ ಆರೋಗ್ಯ, ಜೀವ ಮತ್ತು ದಂತ ವಿಮೆ ಮಾತ್ರವಲ್ಲದೆ ವರ್ಷಕ್ಕೆ 30-35 ದಿನಗಳ ರಜೆಯ ಜೊತೆಗೆ ಕೇರಳಕ್ಕೆ ಹೋಗಿ ಬರಲು ಉಚಿತ ವಿಮಾನ ಪ್ರಯಾಣದ ಸೌಕರ್ಯವನ್ನೂ ಗಳಿಸುವುದರಿಂದ ಇಲ್ಲಿನ ಯಾವುದಾದರೂ ಆಸ್ಪತ್ರೆಗಳಲ್ಲಿ, ಅದರಲ್ಲೂ ಸರ್ಕಾರಿ ಆಸ್ಪತ್ರೆಗಳಲ್ಲಿ, ನೌಕರಿ ಗಿಟ್ಟಿಸಲು ಹಾತೊರೆಯುತ್ತಾರೆ. ಸೇವೆಯ ವಿಚಾರ ಬಂದಾಗ ಫ್ಲಾರೆನ್ಸ್ ನೈಟಿಂಗೇಲ್ ಅಥವಾ ಮದರ್ ತೆರೇಸಾಗೂ ಇವರು ಕಡಿಮೆ ಇಲ್ಲ. ಕಾರಣ ಏನೇ ಇರಲಿ, ಕೇರಳ ರಾಜ್ಯದ ನರ್ಸ್ ಗಳು ಅರಬ್ ರಾಷ್ಟ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.


ಕಾಸು ಕೊಡು, ಕೆಲಸ ತಗೋ: ವಿಚಿತ್ರವೆಂದರೆ, ವಿದೇಶದಲ್ಲಿ ನೌಕರಿ ಗಿಟ್ಟಿಸುವುದು ಸುಲಭದ ಮಾತಲ್ಲ. ಏಜೆನ್ಸಿಗಳು ಬ್ರಿಟನ್ ಅಥವಾ ಆಸ್ಟ್ರೇಲಿಯಾದಲ್ಲಿ ನರ್ಸ್ ನೌಕರಿ ಕೊಡಿಸಲು ಏನಿಲ್ಲಾವೆಂದರೂ 12,000-16,000 ಡಾಲರ್ ಮೊತ್ತ ಚಾರ್ಜ್ ಮಾಡುತ್ತವೆ. ದೊಡ್ಡ ಮೊತ್ತವನ್ನು ನೀಡಿ ನೌಕರಿ ಪಡೆಯಲು ನರ್ಸ್ ಗಳಾಗಲಿ ಅವರ ಕುಟುಂಬದವರಾಗಲಿ ಹಿಂದೆ ಮುಂದೆ ನೋಡುವುದಿಲ್ಲ. ಬ್ಯಾಂಕ್ ಗಳಿಂದ ಸಾಲ ಪಡೆದೊ, ಇಲ್ಲವೇ ಮನೆ ಜಮೀನು ಅಡವಿಟ್ಟೋ, ಇಲ್ಲವೇ ಒಡವೆಗಳನ್ನು ಮಾರಿಯಾದಾರೂ ಕೆಲಸ ಗಿಟ್ಟಿಸುತ್ತಾರೆ. ಸಾಲ ಪಡೆದ ಮೊತ್ತವನ್ನು ವಿದೇಶದಲ್ಲಿ ಆರೇಳು ತಿಂಗಳುಗಳಲ್ಲಿಯೇ ಸಂಪಾದಿಸಬಹುದು ಎನ್ನುವ ಮರ್ಮ ಅವರಿಗೂ ತಿಳಿದಿದೆ.


ತಾನು ಎಷ್ಟು ಸಂಬಳ ಪಡೆಯುತ್ತಿದ್ದೇನೆ ಎಂದು ಹೇಳಲು ಬಯಸದ ಪಕ್ಕದ ಮನೆಯ ನರ್ಸ್, “ನಾನು ನನ್ನ ಎರಡು ತಿಂಗಳ ಸಂಬಳವನ್ನು ಏಜೆನ್ಸಿಗೆ ನೀಡಿ ಇಲ್ಲಿಗೆ ಬಂದಿದ್ದೇನೆ. ನನ್ನ ಗಂಡ ನನ್ನನ್ನು ಇಲ್ಲಿಗೆ ಕಳುಹಿಸಲು ತೆಗೆದುಕೊಂಡಿದ್ದ ಸಾಲವನ್ನು ಆರೇ ತಿಂಗಳಿನಲ್ಲಿ ತೀರಿಸಿದೆ,” ಎಂದು ಹೆಮ್ಮೆಯಿಂದ ಹೇಳಿದ್ದ ನೆನಪು ಇನ್ನು ಹಸಿಯಾಗಿದೆ.


ಅರಬ್ ರಾಷ್ಟ್ರಕ್ಕೆ ಬಂದ ಮೇಲೆ ಎಲ್ಲವೂ ಸುಖಾಂತ್ಯವಾಯಿತು ಎಂದು ನೆಮ್ಮದಿಯ ನಿಟ್ಟುಸಿರು ಬಿಡುವಹಾಗಿಲ್ಲ. ಪ್ರತಿ ದಿನ, ಪ್ರತಿ ಕ್ಷಣ, ಕಷ್ಟ ಎದುರಿಸುತ್ತಾರೆ, ತಮ್ಮ ಸುಖವನ್ನು ತ್ಯಾಗ ಮಾಡುತ್ತಾರೆ. ತಮ್ಮ ಮೇಲೆ ಅವಲಂಬಿತವಾಗಿರುವ ಕುಟುಂಬದವರ ಸಂತೋಷಕ್ಕೆ, ನೆಮ್ಮದಿಗೆ, ಹಗಲಿರುಳೂ ದುಡಿದು ಪ್ರತಿ ಕಾಸನ್ನೂ ಉಳಿತಾಯ ಮಾಡುತ್ತಾರೆ. ಮನೆಯವರು ಬಣ್ಣ ಬಣ್ಣದ ಬಟ್ಟೆಗಳನ್ನು ಧರಿಸಿ ಸಂತಸ ಪಡಲಿ ಎಂದುಕೊಳ್ಳುತ್ತಾ ಇರುವ ನಾಲ್ಕು ಜೊತೆ ಬಟ್ಟೆಗಳಲ್ಲೇ ವರ್ಷ ದೂಡುತ್ತಾರೆ.


ಬದಲಾಗುವ ಅದೃಷ್ಟ: ಪ್ರತಿ ವರ್ಷ ಕೇರಳಕ್ಕೆ 2.1 ಮಿಲಿಯನ್ (ಇದರಲ್ಲಿ ಶೇ. 90ರಷ್ಟು ವಲಸೆ ಹೋಗಿರುವುದು ಅರಬ್ ರಾಷ್ಟ್ರಗಳಿಗೆ ಎನ್ನುವುದನ್ನು ಮರೆಯುವುದು ಬೇಡ) ಅನಿವಾಸಿ ಮಲಯಾಳಿಗಳಿಂದ ಏನಿಲ್ಲವೆಂದರೂ 550 ಮಿಲಿಯನ್ ಡಾಲರ್ ಹಣ ಹರಿದು ಬರುತ್ತದೆ. ವಿದೇಶದಿಂದ ಹರಿಯುವ ಭಾರೀ ಮೊತ್ತ ರಾಜ್ಯದ ಹಣೆಬರಹವನ್ನೇ ಬದಲಾಯಿಸಿದೆಹಳ್ಳಿಗಳಲ್ಲಿ ಗುಡಿಸಲುಗಳು ಮಾಯವಾಗಿ ಕಾಂಕ್ರೀಟ್ ಕಟ್ಟಡಗಳು ಮೇಲೆದ್ದಿವೆ, ಭತ್ತದ ಗದ್ದೆಗಳು ಕಣ್ಮರೆಯಾಗಿ ಗಗನಚುಂಬಿ ಕಟ್ಟಡಗಳೂ, ಪಾರ್ಕುಗಳು ಸ್ವಾಗತಿಸುತ್ತವೆ.


ಕೇರಳದ ಜನರನ್ನು ಗಲ್ಫ್ ರಾಷ್ಟ್ರಕ್ಕೇ ಏಕೆ ಹೋಗಬೇಕು ಎಂದು ಕೇಳಿ ನೋಡಿ: “ಅಲ್ಲಿ ನಮಗೆ ಒಂದಲ್ಲಾ ಒಂದು ಕೆಲಸ ದೊರಕುತ್ತದೆ, ಬೇರೆ ದೇಶಗಳ ಹಾಗಲ್ಲ. ಅಲ್ಲಿ ಸಂಪಾದನೆ ಮಾಡಿ ಒಳ್ಳೆಯ ಮನೆ ಕಟ್ಟಬೇಕು, ಮಕ್ಕಳನ್ನು ಓದಿಸಬೇಕು, ಮದುವೆ ಮಾಡಬೇಕು, ಕಾರಿನಲ್ಲಿ ಓಡಾಡಬೇಕು…” ಎಂದು ಮಾರುದ್ದದ ಪಟ್ಟಿ ನೀಡುತ್ತಾರೆ. ಅಚ್ಚರಿಯೆಂದರೆ, ಪಟ್ಟಿಯಲ್ಲಿನ ಎಲ್ಲ ವಿಷಯಗಳು ಈಡೇರಿದರೂ ಅವರು ಭಾರತಕ್ಕೆ ಮರಳಲು ಇಚ್ಚಿಸುವುದಿಲ್ಲ. ತಮ್ಮ ಮಕ್ಕಳನ್ನು, ಮೊಮ್ಮಕ್ಕಳನ್ನೂ ಗಲ್ಫ್ ಗೆ ಕಳುಹಿಸುವ ಯೋಜನೆಗಳನ್ನು ಹಾಕಿಕೊಂಡಿರುತ್ತಾರೆ.


ಗಲ್ಫ್ ವಧು, ವರ ಬೇಕಾಗಿದ್ದಾರೆ: ಮಕ್ಕಳಿಗೆ ಗಂಡು ಅಥವಾ ಹೆಣ್ಣು ಹುಡುಕುವಾಗ ಆತ ಅಥವಾ ಆಕೆ ಗಲ್ಫ್ ನಲ್ಲಿ ನೌಕರಿಯಲ್ಲಿರಬೇಕೆಂದು ಹಂಬಲಿಸುತ್ತಾರೆ. ಉದಾಹರಣೆಗೆ, ಆನ್ಲೈನ್ ಮದುವೆಯ ಪೋರ್ಟಲ್ ಗಳಲ್ಲಿ ಮತ್ತು ದಿನಪತ್ರಿಕೆಗಳ ಜಾಹೀರಾತುಗಳನ್ನೇ ನೋಡಿ: “ಸೌದಿಯಲ್ಲಿ ಕೆಲಸ ಮಾಡುತ್ತಿರುವ ಸುಂದರ ನರ್ಸ್ ಗೆ, ದೇವರ ಭಯವಿರುವ, ಸೌದಿಯಲ್ಲಿ ಅಥವಾ ಯಾವುದೇ ಗಲ್ಫ್ ರಾಜ್ಯದಲ್ಲಿ ನೌಕರಿ ಮಾಡುತ್ತಿರುವ ಯುವಕ ಬೇಕಾಗಿದ್ದಾನೆ”; “ಮೇಲ್ಮಟ್ಟದ ಮಾಧ್ಯಮ ವರ್ಗದ ಕುಟುಂಬದ, ಗೋಧಿ ಮೈಬಣ್ಣ, ಸಾಂಪ್ರದಾಯಿಕ ಮತ್ತು ಆಧುನಿಕ ಮೌಲ್ಯಗಳನ್ನು ಹೊಂದಿರುವ, ಮುಕ್ತ ಮನಸ್ಸಿನ, ವಿದ್ಯಾವಂತೆಗೆ ದುಬೈನಲ್ಲಿ ಉದ್ಯೋಗವಿರುವ, ಕುಟುಂಬದ ಮೌಲ್ಯಗಳನ್ನು ಅರಿತಿರುವ, ಮದ್ಯ ಸೇವನೆ ಮಾಡದ ಮಲಯಾಳಿ ಹುಡುಗ ಬೇಕಾಗಿದ್ದಾನೆ”; “ಒಮಾನಿನಲ್ಲಿ ಸಿವಿಲ್ ಇಂಜಿನಿಯರ್, ವಿದ್ಯಾಭ್ಯಾಸ ದುಬೈನಲ್ಲಿಗಲ್ಫ್ ನಲ್ಲಿ ಉದ್ಯೋಗ ಮಾಡುತ್ತಿರುವ ಸರಳ, ಸಾಂಪ್ರದಾಯಿಕ, ವಿದ್ಯಾವಂತೆ ಬೇಕಾಗಿದ್ದಾಳೆ”; “ಸರಳ ಮತ್ತು ಸುಶೀಲ ನರ್ಸ್ ಗೆ ದುಬೈನಲ್ಲಿ ನೆಲೆಸಿರುವ ಅನುರೂಪ ಯುವಕ ಬೇಕಾಗಿದ್ದಾನೆ”!


ತಮಾಷೆಯೆಂದರೆ, ಯುವಕರು ವಧು ಬೇಕಾಗಿದ್ದಾಳೆ ಎಂದು ನೀಡುವ ಪತ್ರಿಕಾ ಜಾಹೀರಾತುಗಳಲ್ಲಿ ತಮ್ಮನ್ನು ತಾವು, “ಸುಂದರ, ಎತ್ತರ ನಿಲುವಿನ, ಕುಡಿತದ ಅಭ್ಯಾಸವಿಲ್ಲದ, ವಿದೇಶದಲ್ಲಿ ಊದ್ಯೋಗಸ್ಥನಾದ, ದೇವರನ್ನು ಬಲವಾಗಿ ನಂಬುವ ಮತ್ತು ದುಬೈನಲ್ಲಿ ನೌಕರಿ ಮಾಡುತ್ತಿರುವಎಂದು ವರ್ಣಿಸಿಕೊಂಡಿರುತ್ತಾರೆ. ಮದ್ಯವನ್ನು ಮುಟ್ಟೂ ನೋಡುವುದಿಲ್ಲವೆಂದು ಜಾಹೀರಾತು ನೀಡುವ ಮಂದಿಯ ರಾಜ್ಯ ಭಾರತದಲ್ಲಿ ಅತೀ ಹೆಚ್ಚು ಮದ್ಯ ಮಾರಾಟವಾಗುವ ರಾಜ್ಯ ಎನ್ನುವ ಕುಖ್ಯಾತಿಯನ್ನೂ ಪಡೆದಿದೆ. ಇಲ್ಲಿನ ತಲಾವಾರು ಮದ್ಯ ಸೇವನೆ ವರ್ಷವೊಂದಕ್ಕೆ ಎಂಟು ಲೀಟರಿಗೂ ಹೆಚ್ಚು, ಅಂದರೆ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಿಗಿಂತಲೂ ಹೆಚ್ಚು. ಕೇರಳ ರಾಜ್ಯದಲ್ಲಿ ಮದ್ಯ ಮಾರಾಟವನ್ನು ಸರ್ಕಾರವೇ ವಹಿಸಿಕೊಂಡಿದೆ. ಕೇರಳ ರಾಜ್ಯ ಮದ್ಯ ಮಾರಾಟ ನಿಗಮ (Kerala State Beverages Corporation – KSBC) ನಡೆಸುತ್ತಿರುವ 337 ಮದ್ಯದ ಅಂಗಡಿಗಳು ವಾರದ ಏಳೂ ದಿನಗಳು ತೆರೆದಿರುತ್ತವೆ. ಪ್ರತಿ ಅಂಗಡಿಯೂ ಏನಿಲ್ಲವೆಂದರೂ ವರ್ಷಕ್ಕೆ 80,000 ಗ್ರಾಹಕರನ್ನು ಕಾಣುತ್ತದೆ. ಮಾಧ್ಯಮ ಮಾರಾಟ ಎಷ್ಟು ಪ್ರೊಫೆಷನಲ್ ಆಗಿ ನಡೆಯುತ್ತದೆಂದರೆ, ಮೊಬೈಲಿನ ಮೂಲಕ ಗ್ರಾಹಕರು ಹೆಲ್ಪ್ ಲೈನುಗಳಿಗೆ ತಮ್ಮ ದೂರುಗಳನ್ನು ಕಳುಹಿಸಬಹುದು!


ವರದಕ್ಷಿಣೆಯಲ್ಲ, ಅಳಿಯನಿಗೆ ಉಡುಗೊರೆ: ಇವೆಲ್ಲದಕ್ಕೂ ಮಿಗಿಲಾಗಿ, ಮಧ್ಯಪ್ರಾಚ್ಯ ದೇಶಗಳಲ್ಲಿ ಕೆಲಸ ಮಾಡುವುದರಿಂದ ಕೇರಳದ ಜನರು ವರದಕ್ಷಿಣೆಗೆ ಹಣವನ್ನು ಹೊಂದಿಸಬಲ್ಲರು. ಕೇರಳದಲ್ಲಿ ಮದುವೆ ಎಂದರೆ ವಧುವಿನ ಮೈಮೇಲೆ ಕೆಜಿಗಟ್ಟಲೆ ಚಿನ್ನವಿರಬೇಕು. ವರ್ಷಗಳು ಕಳೆದಂತೆಲ್ಲ ವರ ಮತ್ತವನ ಕುಟುಂಬದವರ ನಿರೀಕ್ಷೆ ಹೆಚ್ಚತ್ತಲೇ ಹೋಗುತ್ತದೆ ಎಂದು ನನ್ನ ಮಲಯಾಳಿ ನರ್ಸ್ ಗೆಳತಿಯೊಬ್ಬಳು ತನ್ನ ಮದುವೆಯ ಸಮಯದಲ್ಲಿ ಹೇಳಿದ್ದನ್ನು ಈಗಲೂ ನೆನೆಸಿಕೊಳ್ಳುತ್ತಿರುತ್ತೇನೆ. ಮದುವೆಗೆ ಮುನ್ನ ಎರಡು ವರ್ಷ ಸೌದಿಯಲ್ಲಿ ನರ್ಸ್ ಆಗಿ ದುಡಿದು ತನ್ನ ಮದುವೆಗೆ ಒಡವೆ ಖರೀದಿಸಲು ತಂದೆಗೆ ನೆರವಾಗಿದ್ದದ್ದು ನಮ್ಮ ಗೆಳೆಯರ ಬಳಗದಲ್ಲೆಲ್ಲಾ ತಿಳಿದ ವಿಚಾರವಾಗಿತ್ತು. ಬಳಿಕ ಆಕೆ ಕೇರಳದಲ್ಲೂ ನೆಲಸಲಿಲ್ಲ, ಮದುವೆಯಾದ ಎರಡೇ ತಿಂಗಳಿಗೆ ಮರಳಿ ಸೌದಿ ಅರೇಬಿಯಾಕ್ಕೆ ಮರಳಿದ್ದಳು. ಹೊಸದಾಗಿ ಅವಳ ಹೆಗಲಿಗೇರಿದ್ದ ಗಂಡನ ಮನೆಯವರ ಜವಾಬ್ದಾರಿಗೆ ಮತ್ತೆ ಗಲ್ಫ್ ಹಣವೇ ಬೇಕಾಗಿತ್ತು.


ಒಂದು ವೇಳೆ ಗಂಡು ವರದಕ್ಷಿಣೆ ಕೇಳದಿದ್ದರೂ ಹೆಣ್ಣಿನ ಮನೆಯವರು ಕೊಟ್ಟೇ ಕೊಡುತ್ತಾರೆ. ಮಗಳು ಸುಖವಾಗಿರಲಿ ಎನ್ನುವ ಸುಪ್ತ ಆಸೆ ಒಂದೆಡೆಯಾದರೆ, ಮಗಳಿಗೆ ಅತ್ತೆ ಮಾವ ಕಿರುಕುಳ ನೀಡಿದರೆ ಎನ್ನುವ ಭಯ, ಆತಂಕ ಇನ್ನೊಂದೆಡೆ. ಕೇರಳದಲ್ಲಿ ವರದಕ್ಷಿಣೆ ಎನ್ನುವುದು ಒಂದು ರೀತಿಯಲ್ಲಿ ಸ್ಟೇಟಸ್ ಸಿಂಬಲ್. ಹೆಚ್ಚು ಕೊಡುವುದು, ಹೆಚ್ಚು ಪಡೆಯುವುದು ಅವರವರ ಅಂತಸ್ತನ್ನು ತೋರಿಸುತ್ತದೆ. ಅವರು ಅದನ್ನು ವರದಕ್ಷಿಣೆ ಎನ್ನುವುದಿಲ್ಲ, ಬದಲಾಗಿ ಮಗಳಿಗೆ ಮತ್ತು ಅಳಿಯನಿಗೆ ನೀಡುವ ಉಡುಗೊರೆ ಎಂದು ಬಿಡುತ್ತಾರೆ.


ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು: ನರ್ಸಿಂಗ್ ನೀವು ಆಯ್ಕೆ ಮಾಡಿಕೊಳ್ಳುವ ವೃತ್ತಿಯಲ್ಲ, ಅದೇ ನಿಮ್ಮನ್ನು ಆಯ್ಕೆ ಮಾಡಿಕೊಳ್ಳುತ್ತದೆ ಎನ್ನಲಾಗುತ್ತದೆ. ನರ್ಸ್ ಗಳು ಆರೋಗ್ಯ ವ್ಯವಸ್ಥೆಯ ಬೆನ್ನೆಲುಬು. ಕೋವಿಡ್ ಮಹಾಮಾರಿ ಬಂದೆರಗಿದ ಮೇಲೆ ಅದರ ವಿರುದ್ಧದ ಸಮರದಲ್ಲಿ ಮುಂಚೂಣಿಯಲ್ಲಿದ್ದವರು ಇವರೇ. ಕೋವಿಡ್-19 ಸಾಂಕ್ರಾಮಿಕ ರೋಗ ಬಂದ ಮೇಲೆ ಕೆಲಸ ಮಾಡಿ ಬಳಲಿ ಬೆಂಡಾಗಿ, ವರ್ಷದೊಳಗೆ ನೌಕರಿತೊರೆದು ಬಿಡುವಉದ್ದೇಶನ್ನಿಟ್ಟುಕೊಂಡಿರುವ ನರ್ಸ್ ಗಳ ಸಂಖ್ಯೆ 20-30% ಕ್ಕೆ ದ್ವಿಗುಣಗೊಂಡಿದೆ ಎನ್ನುವ ಅಂಶವೊಂದನ್ನು 130 ರಾಷ್ಟ್ರೀಯ ಸಂಘಗಳಲ್ಲಿ 27 ಮಿಲಿಯನ್ ನರ್ಸ್ ಗಳನ್ನು ಪ್ರತಿನಿಧಿಸುವ ಜಿನೀವಾ ಮೂಲದ ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ನರ್ಸಸ್ ಸಿ... ಹೊವಾರ್ಡ್ ಕ್ಯಾಟನ್ ಕಳೆದ ಡಿಸೆಂಬರ್ ನಲ್ಲಿ ತಿಳಿಸಿದ್ದರು.


ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ ಕೋವಿಡ್-19 ನಿಂದ ಕನಿಷ್ಠ 115,000 ನರ್ಸ್ ಗಳು ಸಾವನ್ನಪ್ಪಿದ್ದಾರೆ. ಸಾಂಕ್ರಾಮಿಕ ರೋಗಕ್ಕೆ ಮುಂಚೆಯೇ ಜಾಗತಿಕ ಮಟ್ಟದಲ್ಲಿ 6 ಮಿಲಿಯನ್ ನರ್ಸ್‌ ಗಳ ಕೊರತೆ ಇತ್ತು ಮತ್ತು ಮುಂದಿನ ಕೆಲವೇ ವರ್ಷಗಳಲ್ಲಿ ಸುಮಾರು 4.75 ಮಿಲಿಯನ್ ನರ್ಸ್ಗಳು ನಿವೃತ್ತರಾಗುವವರಿದ್ದಾರೆ. ಇದು ರೋಗಿಗಳ ಆರೈಕೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎನ್ನುವುದು ಕಟು ಸತ್ಯ.


(Source: TV9 Kannada)

No comments:

Post a Comment