Thursday 4 November 2021

ಟ್ಯಾಗೋರ್ ಕಾದಂಬರಿಗಳ ರೆಬೆಲ್ ನಾಯಕಿಯರು: ಲೈಂಗಿಕತೆಯ ತುಮುಲದಲ್ಲಿರುವ ವಿಧವೆ ಬಿನೋದಿನಿ

ಟಾಗೋರರ ನಾಯಕಿಯರು ಚಲನಚಿತ್ರಗಳಲ್ಲಿ ತೋರಿಸುವಂತೆ ಸೈಡ್ ಲೈನಿನಲ್ಲಿ ಬರುವುದಿಲ್ಲ. ಅವಳೇ ನಾಯಕ ಹಾಗೂ ನಾಯಕಿ. ಅವಳು ತನ್ನ ರಕ್ಷಣೆಗೆ ನಾಯಕನ ಆಗಮನಕ್ಕಾಗಿ ಕಾಯುವುದಿಲ್ಲ- ತಾನೇ ಹೋರಾಡುತ್ತಾಳೆ. ಅನುರಾಗ್ ಬಸು ನಿರ್ದೇಶಿಸಿರುವ ನೆಟ್ ಫ್ಲಿಕ್ಸ್ ಸರಣಿ 'ಸ್ಟೋರೀಸ್ ಬೈ ರಬೀಂದ್ರನಾಥ್ ಟ್ಯಾಗೋರ್' ಟಾಗೋರರ ಆಶಯವನ್ನು ದೃಶ್ಯರೂಪದಲ್ಲಿ ಪ್ರೇಕ್ಷಕನ ಮುಂದೆ ತೆರೆದಿಡುತ್ತದೆ.

ಮಂಡ್ಯ ಜಿಲ್ಲೆ ಮದ್ದೂರು ಮೂಲದ ಚೈತ್ರಾ ಅರ್ಜುನಪುರಿ ಸದ್ಯ ದೋಹಾ, ಕತಾರ್, ನಿವಾಸಿ. ವಿಜಯ್ ಟೈಮ್ಸ್, ಟೈಮ್ಸ್ ಆಫ್ ಇಂಡಿಯಾ, ಡೆಕ್ಕನ್ ಕ್ರಾನಿಕಲ್ ದಿನಪತ್ರಿಕೆಗಳು, ಮತ್ತು ಕತಾರಿನ ಅಲ್ ಜಜೀರಾ ಟಿವಿ ಚಾನೆಲ್ ನಲ್ಲಿ ಪತ್ರಕರ್ತೆಯಾಗಿ ಕಾರ್ಯ ನಿರ್ವಹಿಸಿರುವ ಅನುಭವ ಬೆನ್ನಿಗಿದೆ. ನೈಟ್ ಫೋಟೋಗ್ರಫಿ ಇವರ ಹವ್ಯಾಸ, ಗೀಳು. ಸಿಂಪಲ್ ಸಂಗತಿಗಳು ಇವರಿಗೆ ಖುಷಿ ಕೊಡುತ್ತವೆ.ಇವರ ಚಿತ್ರಗಳು ನ್ಯಾಷನಲ್ ಜಿಯೋಗ್ರಾಫಿಕ್ ಮತ್ತಿತರ ಜಾಲತಾಣಗಳಲ್ಲಿ ಪ್ರಕಟಿತವಾಗಿವೆ. ಪುಸ್ತಕ ವಿಮರ್ಶೆ, ಕಥೆ, ಲೇಖನ ಮತ್ತು ಪ್ರವಾಸ ಕಥನ ಬರೆಯುವ ಹವ್ಯಾಸವಿದೆ. 'ಚೈತ್ರಗಾನ' ಕವನ ಸಂಕಲನ, 'ಪುಸ್ತಕ ಪ್ರದಕ್ಷಿಣೆ' ಮತ್ತು 'ಓದುವ ವೈಭವ' ವಿಮರ್ಶಾ ಸಂಕಲನಗಳು ಪ್ರಕಟಿತ ಪುಸ್ತಕಗಳು.


-


ಕೊರೊನಾ ಬಂದ ಮೇಲೆ ಜನರೆಲ್ಲಾ ನೆಟ್‌ ಫ್ಲಿಕ್ಸ್‌ ಕಡೆಗೆ ವಾಲಿದ್ದು ಈಗ ಹಳೆಯ ಸಂಗತಿ. ದಿನಗಳೆದಂತೆ ಇದರಲ್ಲಿ ಪ್ರಸಾರವಾಗುವ ಚಲಚಿತ್ರಗಳ ಪಟ್ಟಿ ಬೆಳೆಯುತ್ತಿದ್ದರೂ, ಅದರಲ್ಲಿನ ಸರಣಿ ಕಾರ್ಯಕ್ರಮಗಳು ತಮ್ಮ ಆಕರ್ಷಣೆ ಕಳೆದುಕೊಂಡಿಲ್ಲ. ಇವುಗಳಲ್ಲಿ ಪ್ರತಿಯೊಂದೂ ನಾಲ್ಕೈದು ಕಂತುಗಳಾಗಿ, ಅದರೊಳಗೆ ಹಲವಾರು ಸಂಚಿಕೆಗಳನ್ನೊಳಗೊಂಡು ಪ್ರೇಕ್ಷಕರ ಗಮನವನ್ನು ನಿರಂತರವಾಗಿ ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿವೆ. ಸರಣಿಗಳಲ್ಲಿ ಬರುವ ಕಥೆಗಳು, ಜರುಗುವ ಘಟನೆಗಳು ಎಲ್ಲೋ ಜನಸಂದಣಿಯಿಂದ ದೂರ, ಸಾಮಾನ್ಯರಲ್ಲಿ ಸಾಮಾನ್ಯರನ್ನು ನಾಯಕ ಅಥವಾ ನಾಯಕಿಯಾಗಿ ಮಾಡಿರುವುದರಿಂದಲೇ ಮನಸಿಗೆ ಬಹಳ ಆಪ್ತವೆನಿಸುತ್ತವೆ


ಹೆಣ್ಣು ಇಲ್ಲಿ ಬರಿ ಪೋಷಕ ಪಾತ್ರವಾಗಿಲ್ಲ

ನೆಟ್‌ ಫ್ಲಿಕ್ಸ್‌ ಸಾಕಷ್ಟು ಸರಣಿಗಳಲ್ಲಿ ಸ್ತ್ರೀವಾದಿ ಪ್ರಜ್ಞೆ ಎದ್ದು ಕಾಣುವುದು ಇಲ್ಲಿ ಗಮನಿಸಲೇ ಬೇಕಾದ ಪ್ರಮುಖ ಅಂಶ. ನಮ್ಮ ದೈನಂದಿನ ಟಿವಿ ಧಾರಾವಾಹಿಗಳ ಹಾಗೆ ಅಥವಾ ಚಲನಚಿತ್ರಗಳ ಹಾಗೆ ಹೆಣ್ಣು ಇಲ್ಲಿ ನಾಯಕನ ಪಾತ್ರದ ಪೋಷಕಧಾರಿಯಲ್ಲ. ಇಲ್ಲಿ ಅವಳೇ ನಾಯಕ ಹಾಗೂ ನಾಯಕಿ. ಬಿಕ್ಕಟ್ಟಿನ ಸಮಯದಲ್ಲಿ ತನ್ನ ರಕ್ಷಣೆಗೆ ಆಕೆ ನಾಯಕನ ಅಥವಾ ಯಾವುದೇ ಪುರುಷ ಪಾತ್ರಧಾರಿಯ ಆಗಮನಕ್ಕಾಗಿ ಕಾಯುವುದಿಲ್ಲ - ತಾನೇ ಹೋರಾಡುತ್ತಾಳೆ, ತಾನೇ ಸಮಸ್ಯೆಯನ್ನು ಪರಿಹರಿಸಿಕೊಳ್ಳುತ್ತಾಳೆ. ಬಹುಶಃ ಇದೇ ಸ್ತ್ರೀವಾದಿ ಒಲವು ರವೀಂದ್ರನಾಥ್ ಟ್ಯಾಗೋರ್ ಅವರ ಕಥೆಗಳನ್ನು ಮತ್ತೊಮ್ಮೆ ಪ್ರೇಕ್ಷಕರ ಮುಂದೆ ತರುವಂತೆ ನೆಟ್ ಫ್ಲಿಕ್ಸ್ ಅನ್ನು ಪ್ರೇರೇಪಿಸಿರಬಹುದು


ಪಿತೃಪ್ರಭುತ್ವದ ವಿರುದ್ಧ ಬಂಡಾಯ

2015 ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾದ ಟ್ಯಾಗೋರರ ಕಥೆಗಳನ್ನು ಆಧರಿಸಿದ 'ಸ್ಟೋರೀಸ್ ಬೈ ರಬೀಂದ್ರನಾಥ್ ಟ್ಯಾಗೋರ್' ಸರಣಿಯ ಮೊದಲ ಸೀಸನ್ ನಲ್ಲಿ ಟ್ಯಾಗೋರ್ ಅವರ ಅತ್ಯುತ್ತಮ 20 ಕಥೆಗಳಿಂದ ಆಯ್ಕೆ ಮಾಡಲಾದ 26 ಎಪಿಸೋಡ್‌ಗಳು ಪ್ರೇಕ್ಷಕರಿಗೆ ಈಗ ನೆಟ್ ಫ್ಲಿಕ್ಸ್ ನಲ್ಲಿ ರಸದೌತಣವನ್ನೇ ನೀಡುತ್ತಿವೆ. ನಿರ್ದೇಶಕ ಅನುರಾಗ್ ಬಸು ಸರಣಿಗೆ ಬಳಸಿಕೊಂಡಿರುವ ಎಲ್ಲಾ ಕಥೆಗಳೂ ತಮ್ಮದೇ ರೀತಿಯಲ್ಲಿ ಸ್ತ್ರೀವಾದಿ ಎಳೆ ಹೊಂದಿದ್ದು ಒಂದಲ್ಲಾ ಒಂದು ರೀತಿಯಲ್ಲಿ ಎಲ್ಲಾ ಎಪಿಸೋಡ್ ಗಳೂ ಮಹಿಳೆಯರು ದಿನಗಳಲ್ಲಿ ಹೇಗೆ ಅಸಹಾಯಕರಾಗಿದ್ದರು, ವರದಕ್ಷಿಣೆ ಆಧಾರಿತ ಪಿತೃಪ್ರಭುತ್ವದ ವಿರುದ್ಧ ಹೇಗೆ ತಮ್ಮದೇ ಶೈಲಿಯಲ್ಲಿ ಬಂಡಾಯವೆದ್ದಿದ್ದರು ಎನ್ನುವುದನ್ನು ತೋರಿಸುತ್ತವೆ. ಪುರುಷ ಪ್ರಧಾನ ಸಮಾಜದ ಹಿನ್ನೆಲೆಯಲ್ಲಿ ಚಿತ್ರಿಸಿದ್ದರೂ ಟ್ಯಾಗೋರ್‌ ಮಹಿಳೆಯರು ವಿಭಿನ್ನವಾಗಿ ನಿಲ್ಲುತ್ತಾರೆ. ಇಲ್ಲಿ ಅವರ ಮುಂದೆ ಪುರುಷ ಪಾತ್ರಗಳು ಬಹಳ ದುರ್ಬಲವಾಗಿ ಕಂಡರೆ ಅಚ್ಚರಿಯೇನಲ್ಲ.


ಸರಣಿಯಲ್ಲಿನ ಕಥೆಗಳು

ತನ್ನ ಮೈದುನನನ್ನೇ ಪ್ರೀತಿಸುವ ಒಬ್ಬ ಏಕಾಂಗಿ ಗೃಹಿಣಿಯಿಂದ ಹಿಡಿದು ತನ್ನ ಲೈಂಗಿಕತೆಯನ್ನು ಅನ್ವೇಷಿಸಲು ಬಯಸುವ ಒಬ್ಬ ವಿಧವೆಯವರೆಗೆ ಟ್ಯಾಗೋರ್ ಬರೆದಿರುವ ಪ್ರತಿಯೊಂದು ಮಹಿಳಾ ಪಾತ್ರವೂ ನಿರಾತಂಕವಾಗಿ ಮುನ್ನುಗ್ಗುತ್ತವೆ. ಪಾತ್ರಗಳನ್ನು ಅಷ್ಟೇ ಸೊಗಸಾಗಿ ನಿರ್ದೇಶಕ ಪರದೆಯ ಮೇಲೆ ತಂದಿದ್ದಾರೆ. ಸರಣಿ ಟ್ಯಾಗೋರರ 20 ಕಥೆಗಳನ್ನು ಆಧರಿಸಿದ 26 ಕಂತುಗಳನ್ನು ಒಳಗೊಂಡಿದೆ: ಚೋಖೆರ್ ಬಾಲಿ (1903) - ಗ್ರೇನ್ ಆಫ್ ಸ್ಯಾಂಡ್; ಅತಿಥಿ (1895) - ದಿ ಗೆಸ್ಟ್; ಮಾನ್ ಭಂಜನ್ (1895) - ಫ್ಯೂರಿ ಅಪೀಸ್ಡ್; ಡಿಟೆಕ್ಟೀವ್ (1898), ಕಾಬೂಲಿವಾಲಾ (1892); ಷಷ್ಠಿ (1893) - ಪನಿಷ್ಮೆಂಟ್; ನಾಸ್ತಾನಿರ್ (1901) - ದಿ ಬ್ರೋಕನ್ ನೆಸ್ಟ್; ಖೋಕಬಾಬುರ್ ಪ್ರತ್ಯಬರ್ತನ್ (1891) - ದಿ ರಿಟರ್ನ್ ಆಫ್ ಖೋಕಬಾಬು; ಸಮಾಪ್ತಿ (1893) - ದಿ ಕನ್ಕ್ಲೂಷನ್; ಛುಟ್ಟಿ (1892) - ದಿ ಹೋಮ್ ಕಮಿಂಗ್; ತ್ಯಾಗ್ (1892) - ದಿ ರಿನನ್ಸಿಯೇಷನ್; ಸಂಪತ್ತಿ ಸಮರ್ಪಣ್ (1891) - ದಿ ಟ್ರಸ್ಟ್ ಪ್ರಾಪರ್ಟಿ; ದುಯಿ ಬೊನ್ (1933) - ಟು ಸಿಸ್ಟರ್ಸ್; ಸ್ತ್ರೀರ್ ಪತ್ರ (1914) - ವೈಫ್ಸ್ ಲೆಟರ್; ಅಪರಿಚಿತ (1916) - ದಿ ಅನ್ನೋನ್ ವುಮನ್; ಕಂಕಾಲ್ (1892) - ದಿ ಸ್ಕೆಲಿಟನ್; ಮುಸಲ್ಮಾನರ್ ಗೋಲ್ಪೊ (1941) - ದಿ ಸ್ಟೋರಿ ಆಫ್ ಮುಸ್ಲಿಂ ವುಮನ್; ಶೇಷ್ ರೋಖ್ಖ (1926-1929) - ಸೇವ್ಡ್ ಅಟ್ ಲಾಸ್ಟ್; ಮೊನಿಹಾರ (1989) - ದಿ ಲಾಸ್ಟ್ ಜಿವೆಲ್ಸ್; ದಾಲಿಯಾ (1892) - ದಲಿಯಾ.



ಸಂಚಿಕೆ 1- ಲೈಂಗಿಕತೆಯ ತುಮುಲದಲ್ಲಿರುವ ವಿಧವೆ ಬಿನೋದಿನಿ 

ಚೋಖೆರ್ ಬಾಲಿ - ಗ್ರೇನ್ ಆಫ್ ಸ್ಯಾಂಡ್: ರವೀಂದ್ರನಾಥ ಟ್ಯಾಗೋರರ ಬಂಗಾಳಿ ಕಾದಂಬರಿ ಚೋಖೇರ್ ಬಾಲಿ ಆಧಾರಿತ ಮೊದಲ ಕಥೆಯಿಂದ ಸರಣಿ ಪ್ರಾರಂಭವಾಗುತ್ತದೆ. ಚೋಖ್ ಎಂದರೆ ಕಣ್ಣು, ಬಾಲಿಯೆಂದರೆ ಮರಳಿನ ಕಣ. ಚೋಖೇರ್ ಬಾಲಿಯೆಂದರೆ ಕಣ್ಣಿನಲ್ಲಿ ಸೇರಿಕೊಂಡು ಬಹಳ ನೋವನ್ನು ಕೊಡುವ ಮರಳಿನ ಕಣ. ಸಮಾಜದ ಕಟ್ಟುಪಾಡುಗಳನ್ನು ಗಾಳಿಗೆ ತೋರಿ, ಅದರ ವಿರುದ್ಧ ಸೆಟೆದು ನಿಲ್ಲುವ ಯುವ ವಿಧವೆ ಬಿನೋದಿನಿಯ ಜೀವನದ ಸುತ್ತ ಕಥೆ ಸುತ್ತುತ್ತದೆ


ಕಾಲದ ಮಹಿಳೆಯರಂತೆ ಬಿನೋದಿನಿ ತನಗೊದಗಿದ ವೈಧವ್ಯವನ್ನು ಹಣೆಬರಹವೆಂದು ಮೌನವಾಗಿ ಸ್ವೀಕರಿಸುವುದಿಲ್ಲ, ತನ್ನ ಕನಸುಗಳನ್ನು ಕಾಪಾಡಿಕೊಳ್ಳಲು, ತನ್ನ ಹಕ್ಕುಗಳಿಗಾಗಿ ಹೋರಾಡುತ್ತಾಳೆ. ಒಂಟಿಯಾದ ವಿಧವೆಯ ಪಾತ್ರಕ್ಕೆ ಹೊಂದಿಕೊಳ್ಳಲು ಹಿಂಜರಿಯುತ್ತಲೇ ತನ್ನ ಸಂವೇದನಾಶೀಲ ನೋಟ ಮತ್ತು ಬಲವಾದ ಇಚ್ಛಾಶಕ್ತಿಯ ಸ್ವಭಾವದಿಂದಾಗಿ ಆಕೆ ಎಲ್ಲರ ಗಮನ ಸೆಳೆಯುತ್ತಾಳೆ ಮಾತ್ರವಲ್ಲ, ತನ್ನ ಲೈಂಗಿಕ ಮತ್ತು ಭಾವನಾತ್ಮಕ ಬಯಕೆಗಳಿಗೆ ದಾರಿ ಕಂಡುಕೊಳ್ಳುವ ಪ್ರಯತ್ನ ಪಡುತ್ತಾಳೆ


ತಾನು ವಿದ್ಯಾವಂತೆ ಹಾಗೂ ಬುದ್ಧಿವಂತೆ, ಹಾಗಾಗಿ ಇತರರ ಹಾಗೆ ಸಮಾಜದ ನಿರ್ಲಕ್ಷ್ಯವನ್ನು ಸುಲಭವಾಗಿ ಸಹಿಸಿಕೊಳ್ಳಲು ಸಾಧ್ಯವಿಲ್ಲವೆನ್ನುವ ಬಿನೋದಿನಿ ಕಥೆಯ ಕೊನೆಯಲ್ಲಿ, ಮಹಿಳಾ ಆಶ್ರಯದಲ್ಲಿ ವಾಸಿಸಲು ಪ್ರಾರಂಭಿಸಿ ಅಲ್ಲಿರುವ ಇತರೆ ವಿಧವೆಯರ ಪರಿಸ್ಥಿತಿಯನ್ನು ಸುಧಾರಿಸಲು, ಅವರ ಜೀವನದಲ್ಲಿ ಬದಲಾವಣೆ ತರಲು ತನ್ನ ಕೈಲಾದ ಪ್ರಯತ್ನ ಮುಂದುವರೆಸುತ್ತಾಳೆ.


(Source: Kannada Prabha)

No comments:

Post a Comment