Saturday 17 July 2021

Next Door : ಕರಾಗ್ರೇ ವಸತೇ ಮೊಬೈಲ್ ತಲೆದಿಂಬೇ ಲ್ಯಾಪ್ ಟಾಪ್

Gadgets : ‘ಆವಕ್ಕನಿಗೆ ನಮ್ಮನ್ನು ಕಂಡ್ರೆ ಹೊಟ್ಟೆ ಉರಿ ಕಣ್ರೀ. ಅವ್ರ ಮಗನಿಗೆ ಟ್ಯಾಬ್ ತೆಕ್ಕೊಡೋಕೆ ಯೋಗ್ಯತೆ ಇಲ್ಲಾಂದ್ರೆ ತೆಪ್ಪಗಿರಬೇಕು, ನಮ್ಮ ವಿಚಾರಕ್ಕೆ ಯಾಕೆ ಬರ್ಬೇಕು? ಇನ್ನೊಂದ್ಸಲ ಆವಕ್ಕನ್ನ ನಮ್ಮನೆಗೇನಾದ್ರೂ ಕರೆದ್ರೆ ನಾ ಸುಮ್ನಿರಲ್ಲ ನೋಡಿಆಕೆ ತನ್ನ ಗಂಡನನ್ನು ಗದರುತ್ತಿದ್ದದ್ದು ಕೇಳಿ ಗರ ಬಡಿದವಳ ಹಾಗೆ ಹಾಲಿಗೆ ಬಂದು ಕುಳಿತುಕೊಂಡೆಚೈತ್ರಾ ಅರ್ಜುನಪುರಿ

ವಾಟ್ಸಪ್ಪು, ಟ್ವಿಟರು, ಫೇಸ್ ಬುಕ್ಕು ಮತ್ತೀಗ ಕ್ಲಬ್ ಹೌಸಿನಲ್ಲೂ ಇಲ್ಲವಾ? ಉತ್ತರ ಇಲ್ಲವೆಂದಾದಲ್ಲಿ ಆನ್ ಲೈನ್ ಸಂಸ್ಕೃತಿಯಲ್ಲಿ ನಾಗರಿಕ ಸಮಾಜ ಥಟ್ಟನೆ ನಮ್ಮನ್ನು ಒಂದು ಹಳೇ ಪಳಿಯುಳಿಕೆಯಂತೆ ಮೂಲೆಯಲ್ಲಿ ನಿಲ್ಲಿಸಿಬಿಡುತ್ತದೆ. ಉಸಿರಾಡಬೇಕೆಂದರೆ ಹರಿಯುವ ನೀರಿನೊಂದಿಗೆ ಹರಿಯಲೇಬೇಕು ಎಂಬ ತತ್ವದೊಂದಿಗೆ ನಮ್ಮ ನಮ್ಮ ವಯೋಮಾನ, ಆಸಕ್ತಿ, ಅನಿವಾರ್ಯಕ್ಕೆ ತಕ್ಕಂತೆ ನಮ್ಮ ಕಣ್ಣುಗಳನ್ನು ಬೆಳಕಿನಪರದೆಗಳಿಗೆ ಅಂಟಿಸುತ್ತ ಕಣ್ಣುಗಳನ್ನು ಅಗಲ ಮಾಡಿಕೊಳ್ಳುತ್ತ ಸಾಗುತ್ತಿದ್ದೇವೆ. ಗತಿಶೀಲ ಜಗತ್ತಿಗೆ ಕೊರೊನಾ ವೈರಾಣು ಮತ್ತಷ್ಟು ಚುರುಕು ನೀಡಿದ್ದೇ ಬೆಳಗಾಗುವುದರೊಳಗೆ ಕ್ಲಾಸುಗಳು, ಆಸ್ಪತ್ರೆಗಳು, ಅಂಗಡಿಗಳು, ಸಂತೆಗಳು-ಸಂತರುಗಳು, ಓಣಿಗಳು-ಕಟ್ಟೆಗಳು, ಗುಂಪುಗಳು, ಪರವಿರೋಧಗಳು, ಅಭಿವ್ಯಕ್ತಿಗಳು, ಸ್ವಾತಂತ್ರ್ಯ-ಸಂಸ್ಕೃತಿಗಳು, ಪರಂಪರೆ-ಪತಾಕೆಗಳು, ಗಾಳಿಪಟ-ಬಾಲಂಗೋಚಿಗಳ ಮೂಲಕ ಇಡೀ ಊರಿಗೆ ಊರನ್ನೇ ಜಾಲತಾಣಗಳ ಕೊಂಡಿಗೆ ಸಿಕ್ಕಿಸಿ ಕುಳಿತುಬಿಟ್ಟಿದ್ದೇವೆ.  


ಒಂದರ್ಥದಲ್ಲಿ ಅನಿವಾರ್ಯ ಬೇರೊಂದು ರೀತಿಯ ಪ್ರಯೋಗ, ಅವಿಷ್ಕಾರ, ಕ್ರಾಂತಿಗಳಿಗೆ ಸಂದರ್ಭಾನುಸಾರ ಕಾರಣವಾಯಿತು. ಆದರೆ ಆಳದಲ್ಲಿ? ಹಳ್ಳಿಗಳಿಗೂ, ನಗರ-ಮಹಾನಗರಗಳಿಗೂ ಅವುಗಳದ್ದೇ ಆದ ಸ್ವಭಾವ-ಸಂಸ್ಕೃತಿಗಳಿವೆ. ಅಲ್ಲೆಲ್ಲ ಜೀವಿಸುತ್ತಿರುವವರು ನಾವುನಾವುಗಳೇ. ತಂತ್ರಜ್ಞಾನ ಮತ್ತು ನಾಗರಿಕತೆಯ ಚೌಕಟ್ಟಿನಡಿ ನಮ್ಮನಮ್ಮ ಆಸೆ, ಆಶಯ, ನಿರ್ಧಾರಗಳನ್ನು ಬಂಧಿಸಿಡುತ್ತ, ಮಾನವ ಸಂಬಂಧಗಳನ್ನು ನಿಸ್ತಂತುಗೊಳಿಸುತ್ತ ಬರುತ್ತಿದ್ದೇವೆಯೇ? ಯಾವೆಲ್ಲ ಸಂದರ್ಭ, ಹಂತಗಳಲ್ಲಿ ಸಂಬಂಧಗಳು ಹೆಚ್ಚು ಆಪ್ತವಾಗಬೇಕಿತ್ತೋ ಅಲ್ಲೆಲ್ಲ ವ್ಯಾವಹಾರಿಕತೆಯ ಪರಿಧಿ ಆವರಿಸಿ ಭಾವಶೂನ್ಯರಾಗುತ್ತಿದ್ದೇವೆಯೇ? ಪರಸ್ಪರ ಸಹಕಾರ ತತ್ವ ಮರೆತ ಪರಿಣಾಮವಾಗಿ ಸಾಮುದಾಯಿಕ ಸ್ಪರ್ಶ, ಸೌಂದರ್ಯ, ಪ್ರಜ್ಞೆಯ ಬಿಸುಪನ್ನು ಕಳೆದುಕೊಳ್ಳುತ್ತ ಸಾಗುತ್ತಿದ್ದೇವೆಯೇ? ಇದೆಲ್ಲವೂ ನಮ್ಮ ಮುಂದಿನ ಪೀಳಿಗೆ ಅಥವಾ ಮಾನವವಿಕಾಸದ ಮೇಲೆ ಏನೆಲ್ಲ ಪರಿಣಾಮ ಬೀರಬಹುದು ಅದಕ್ಕೆ ನಾವು ಯಾವ ರೀತಿ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ?


ಕತಾರಿನಲ್ಲಿ ವಾಸಿಸುತ್ತಿರುವ, ಮಂಡ್ಯ ಮೂಲದ ಚೈತ್ರಾ ಅರ್ಜುನಪುರಿ ಲೇಖಕಿ, ಪತ್ರಕರ್ತೆ. ಫೋಟೋಗ್ರಫಿ ಇವರ ಹವ್ಯಾಸ. ಸರಣಿಯ ವಿಷಯಕ್ಕೆ ಸಂಬಂಧಿಸಿ ತಮ್ಮ ಅನುಭವ ಮತ್ತು ವಿಚಾರಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.  


*


ಕೊರೊನಾ ವಕ್ಕರಿಸುವ ಮುನ್ನ ಗೆಳೆಯನೊಬ್ಬ ಮನೆಗೆ ಊಟಕ್ಕೆ ಆಹ್ವಾನಿಸಿದ್ದ. ಇಬ್ಬರು ಪುಟ್ಟ ಹುಡುಗರಿದ್ದಾರೆ, ಅವರೊಡನೆ ಆಟವಾಡಬಹುದು ಎಂದು ಮಗನಿಗೆ ಖುಷಿಯಾಯಿತು. ಪತಿರಾಯ ರಾತ್ರಿ ಏಳು ಗಂಟೆಗೆ ಗೆಳೆಯನ ಮನೆ ಮುಂದೆ ನಮ್ಮಿಬ್ಬರನ್ನೂ ಇಳಿಸಿ, ತನ್ನ ಗೆಳೆಯನೊಡನೆ ಹೋದ. ನನ್ನ ಗೆಳೆಯನ ಮನೆಯೊಳಗೆ ಹೋದಾಗ ಅವನ ಇಬ್ಬರೂ ಮಕ್ಕಳು ಆಟವಾಡುತ್ತಿದ್ದರು; ಒಬ್ಬ ಫೋನಿನಲ್ಲಿ, ಮತ್ತೊಬ್ಬ ಟ್ಯಾಬಿನಲ್ಲಿ. ನನ್ನ ಮಗ  ಅವರಿಬ್ಬರನ್ನೂ ಆಟವಾಡಲು ಕರೆದ, ಆದರೆ ಇಬ್ಬರೂ ಸ್ಕ್ರೀನ್ ಬಿಟ್ಟು ಹೊರಗೆ ಬರಲು ಸಿದ್ದರಿಲ್ಲ.


ಆರರಲ್ಲಿ ಓದುತ್ತಿರುವ ಹಿರಿಯ ಮಗ ತನ್ನ ಗೆಳೆಯರೊಂದಿಗೆ ಆನ್ ಲೈನ್ ಗೇಮ್ ಆಡುತ್ತಿದ್ದಾನೆ, ಮೂರರಲ್ಲಿ ಓದುತ್ತಿರುವ ಚಿಕ್ಕವನು ತನ್ನ ಗೆಳೆಯರೊಂದಿಗೆ ಎಂದು ಗೆಳೆಯನ ಹೆಂಡತಿ ಹೇಳಿದಾಗ ನಾನು ನಕ್ಕು ತಲೆಯಾಡಿಸಿದೆ. ಗೆಳೆಯನ ಹೆಂಡತಿ ಎರಡು ಮೂರು ಸಲ ಹುಡುಗರಿಗೆ ನನ್ನ ಮಗನೊಂದಿಗೆ ಆಟವಾಡಲು ಹೇಳಿ, ಅವರು ಆಕೆಯ ಮಾತಿಗೆ ಸೊಪ್ಪು ಹಾಕದೇ ಹೋದಾಗ, ತಾನೂ ಫೋನ್ ಹಿಡಿದು ನನ್ನ ಜೊತೆ ಮಾತನಾಡಲು ಕುಳಿತಳು.


ಕರೆದು ಕರೆದು ಸುಸ್ತಾದ ನನ್ನ ಮಗ ಕೊನೆಗೆ ಕೈಗೆ ಸಿಕ್ಕ ನಾಲ್ಕೈದು ಗೊಂಬೆಗಳನ್ನು ನೆಲದ ಮೇಲೆ ಹಾಕಿಕೊಂಡು ಒಬ್ಬನೇ ಆಟವಾಡತೊಡಗಿದ. ಆಗಾಗ ತಾನು ಆಡುತ್ತಿರುವ ಗೊಂಬೆಗಳ ಬಗ್ಗೆ ಹೇಳಲು ನನ್ನ ಮಗ ನಮ್ಮ ಬಳಿಗೆ ಓಡಿ ಬರುತ್ತಿದ್ದ. ಮಕ್ಕಳಿಬ್ಬರೂ ತಮ್ಮ ಪಾಡಿಗೆ ಫೋನಿನಲ್ಲಿ ಆಟವಾಡುತ್ತಾರೆ, ದೊಡ್ಡವರಿಗೆ ಡಿಸ್ಟರ್ಬ್ ಮಾಡುವುದಿಲ್ಲವೆನ್ನುತ್ತಾ ಗೆಳೆಯನ ಹೆಂಡತಿ ನಡುನಡುವೆ ಪ್ರಶಂಸಿಸುತ್ತಿದ್ದಳು.


ಒಂದು ಗಂಟೆಯ ಬಳಿಕ ಗೆಳೆಯನ ಮಡದಿ ಊಟಕ್ಕೆ ಏನು ಆರ್ಡರ್ ಮಾಡುವುದು ಎಂದು ನನ್ನನ್ನು ಕೇಳಿದಳು, ನಿಮ್ಮಿಷ್ಟ ಎಂದು ಸುಮ್ಮನಾದೆ. ತನ್ನ ಮಕ್ಕಳ ಉದ್ದನೆಯ ಲಿಸ್ಟ್ ನೋಟ್ ಮಾಡಿಕೊಂಡು, ಆನ್ ಲೈನ್ ಬುಕ್ ಮಾಡಿದಳು. ಮುಕ್ಕಾಲು ಗಂಟೆಯಲ್ಲಿ ಊಟ ಮನೆಗೆ ಬಂದಿತು. ಊಟಕ್ಕೆ ಕುಳಿತಾಗಳು ಆಕೆಯ ಮಕ್ಕಳ ಕೈಯಲ್ಲಿದ್ದ ಫೋನು ಕೆಳಗಿಳಿಯಲೇ ಇಲ್ಲ. ನನ್ನ ಮಗ ಅವರಿಬ್ಬರಿಗೆ, ‘ಯೂ ಶುಡ್ ಗಿವ್ ಸಮ್ ರೆಸ್ಟ್ ಟು ಯುವರ್ ಐಸ್, ಎಲ್ಸ್ ದೇ ವಿಲ್ ಗೆಟ್ ಡ್ಯಾಮೇಜ್ಡ್,’ ಎಂದು ರಾಗವೆಳೆದ. ಹುಡುಗರಿಬ್ಬರೂ ಅವನ ಮಾತಿಗೆ ನಕ್ಕು, ನಾವು ಅಲ್ಲಿಂದ ಹೊರಡುವವರೆಗೂ ಸಾಲನ್ನು ಹೇಳಿಕೊಂಡು ನನ್ನ ಮಗನನ್ನು ಗೇಲಿ ಮಾಡಲು ಶುರುಮಾಡಿದರು.


ನನ್ನ ಗಂಡ ಗೆಳೆಯನೊಡನೆ ಮರಳಿದಾಗ, ಮಗ ತನ್ನ ದೂರನ್ನೊಪ್ಪಿಸಿದ. ‘ಡ್ಯಾಡಿ, ಬೋಥ್ ಬ್ರದರ್ಸ್ ಡಿಡ್ ನಾಟ್ ಕಮ್ ಟು ಪ್ಲೇ ವಿಥ್ ಮೀ.’ ಗೆಳೆಯ ತನ್ನ ಮಕ್ಕಳಿಬ್ಬರನ್ನೂ ಫೋನ್ ಎತ್ತಿಡುವಂತೆ ಗದರಿದಾಗ ರಾತ್ರಿ ಹನ್ನೆರಡೂವರೆ!


ಗಂಡನಾಗಲಿ, ನಾನಾಗಲಿ ಗೆಳೆಯನ ಮಕ್ಕಳಿಬ್ಬರ ಸ್ಕ್ರೀನ್ ವ್ಯಸನದ ಬಗ್ಗೆ ಏನೂ ಮಾತನಾಡಲು ಹೋಗಲಿಲ್ಲ. ಅದರ ಬಗ್ಗೆ ಹೇಳಿದರೂ ಅವರಿಂದ ಬರುವ ನಿರೀಕ್ಷಿತ ಉತ್ತರ: ‘ನಾವಿಬ್ಬರೂ ಕೆಲಸಕ್ಕೆ ಹೋಗುತ್ತೇವೆ, ಮಕ್ಕಳಿಗೆ ಸಮಯ ಕಳೆಯಬೇಕಲ್ಲ, ಈಗಿನ ಕಾಲದ ಹುಡುಗರು, ಏನೂ ಮಾಡೋಕಾಗೋಲ್ಲ ಬಿಡಿ, ಇಲ್ಲಿ ಭಾರತದ ಹಾಗೆ ನೆರೆಹೊರೆಯವರೋ, ಸಂಬಂಧಿಗಳೋ ಇಲ್ಲ, ಪಾಪ ಅವರೇನು ಮಾಡುತ್ತಾರೆ, ನಾವೂ ಹೇಳುತ್ತೇವೆ, ನಮ್ಮ ಮಾತೇ ಕೇಳುವುದಿಲ್ಲಇತ್ಯಾದಿ, ಇತ್ಯಾದಿ.


ನೀನಾದರೂ ಸೂಕ್ಷ್ಮವಾಗಿ ಅವನ ಹೆಂಡತಿಗೆ ಹೇಳಿ ನೋಡಬೇಕಿತ್ತು,’ ಅಳುಕುತ್ತಲೇ ಗಂಡ ನನಗೆ ಹೇಳಿದಾಗ, ‘ಆಂಟಿ ಆಲ್ಸೋ ಟೋಲ್ಡ್ ದೆಮ್ ಟು ಟೈಮ್ಸ್, ಡ್ಯಾಡಿ,’ ಎಂದು ಮಗರಾಯ ದೂರೊಪ್ಪಿಸಿದ. ‘ಅವರಮ್ಮ ಹೇಳಿದ್ದನ್ನೇ ಕೇಳದ ಮಕ್ಕಳು ನನ್ನ ಮಾತು ಕೇಳುತ್ತಿದ್ದರೇ?’ ಎಂದು ಹೇಳಿ ಸುಮ್ಮನಾದೆ.


ನಾನು ಗೆಳೆಯನ ಮನೆಯಲ್ಲಿ ಏನೂ ಹೇಳದೇ ಇರಲು ಭಾರತಕ್ಕೆ ಹೋದಾಗ ಆಗಿದ್ದ ಕಹಿ ನೆನಪೂ ಕಾರಣವಾಗಿತ್ತು. ಪ್ರತಿ ಸಲ ನಾವು ಭಾರತಕ್ಕೆ ಬಂದಾಗ ಕೆಲವು ಗೆಳೆಯರ ಮತ್ತು ಸಂಬಂಧಿಗಳ ಮನೆಗೆ ಭೇಟಿ ಕೊಡುವುದು ಮಾಮೂಲಿ. ಒಮ್ಮೆ ದೂರದ ಸಂಬಂಧಿಯೊಬ್ಬರ ಮನೆಗೆ ಹೋಗಿದ್ದೆ. ಎರಡು ವರ್ಷದ ಸಂಬಂಧಿಯ ಮಗು ಟ್ಯಾಬಿನಲ್ಲಿ ರೈಮ್ಸ್ ನೋಡುತ್ತಾ ಮಂಚದ ಮೇಲೆ ಕುಳಿತಿತ್ತು. ಸಂಬಂಧಿಕರಿಗೆ ಚಿಕ್ಕ ಮಕ್ಕಳಿಗೆ ಹೀಗೆಲ್ಲಾ ಫೋನ್, ಟ್ಯಾಬ್ ಕೊಡಬೇಡಿ ಕಣ್ಣು ಹಾಳಾಗುತ್ತವೆ, ಮಕ್ಕಳಿಗೆ ಈಗಲೇ ಸ್ಕ್ರೀನ್ ವ್ಯಸನ ಬೇಡವೆಂದು ಒಂದು ಮಾತು ಹೇಳಿದೆ. ನನ್ನ ಮಾತಿಗೆ ಗಂಡ ಹೆಂಡತಿ ಇಬ್ಬರೂ ನಕ್ಕರು.


ಜ್ಯೂಸ್ ತರಲು ಅಡುಗೆ ಮನೆಗೆ ಹೋದ ಸಂಬಂಧಿಯ ಹೆಂಡತಿ ತನ್ನ ಗಂಡನನ್ನು ಕರೆದಳು. ನಾನೂ ನೀರು ಕುಡಿಯಲೆಂದು ಅಡುಗೆಮನೆ ಕಡೆಗೆ ಹೋದೆ. ‘ಆವಕ್ಕನಿಗೆ ನಮ್ಮನ್ನು ಕಂಡ್ರೆ ಹೊಟ್ಟೆ ಉರಿ ಕಣ್ರೀ. ಅವ್ರ ಮಗನಿಗೆ ಟ್ಯಾಬ್ ತೆಕ್ಕೊಡೋಕೆ ಯೋಗ್ಯತೆ ಇಲ್ಲಾಂದ್ರೆ ತೆಪ್ಪಗಿರಬೇಕು, ನಮ್ಮ ವಿಚಾರಕ್ಕೆ ಯಾಕೆ ಬರ್ಬೇಕು? ಇನ್ನೊಂದ್ಸಲ ಆವಕ್ಕನ್ನ ನಮ್ಮನೆಗೇನಾದ್ರೂ ನೀವು ಕರೆದ್ರೆ ನಾ ಸುಮ್ನಿರಲ್ಲ ನೋಡಿ,’ ಎನ್ನುತ್ತಾ ತನ್ನ ಗಂಡನನ್ನು ಗದರುತ್ತಿದ್ದದ್ದು ಕೇಳಿ ಗರ ಬಡಿದವಳ ಹಾಗೆ ಅಡುಗೆಮನೆ ಬಾಗಿಲಿನಿಂದಲೇ ಮರಳಿ ಬಂದು ಹಾಲಿನಲ್ಲಿ ಕುಳಿತುಕೊಂಡೆ. ಜ್ಯೂಸ್ ತಂದ ಸಂಬಂಧಿಗೆ ಅರ್ಜೆಂಟ್ ಕೆಲಸವೊಂದು ನೆನಪಾಯಿತೆಂದು ಸಬೂಬು ಹೇಳಿ ಅಲ್ಲಿಂದ ಕ್ಷಣವೇ ಹೊರಟುಬಿಟ್ಟೆ.


ನನ್ನ ಮಗ ಹುಟ್ಟಿದಾಗ ಐಪ್ಯಾಡ್ ಹಿಡಿದು ಪತ್ರಿಕೆಗಳಿಗೆ ಬರೆಯುತ್ತಿದ್ದೆ. ತಂತ್ರಜ್ಞಾನದ ಜ್ಞಾನದ ಬಗ್ಗೆ ಆಗ ಸಾಕಷ್ಟು ಖುಷಿ ಮತ್ತು ಹೆಮ್ಮೆ ಇತ್ತು. ಆದರೆ ಈಗ ಅದರ ಚಕ್ರವ್ಯೂಹದಿಂದ ಹೊರಬರಲಾಗದೆ ಒದ್ದಾಡುತ್ತಿರುವ ಹಲವರಲ್ಲಿ ನಾನೂ ಒಬ್ಬಳು ಎಂದು ಹೇಳಿಕೊಳ್ಳಲು ವಿಷಾದಿಸುತ್ತೇನೆ. ಮಾನವ ಸಂವಹನ ಹೆಚ್ಚಿಸಲು ಹುಟ್ಟಿಕೊಂಡ ತಂತ್ರಜ್ಞಾನ, ಸಾಮಾಜಿಕ ಮಾಧ್ಯಮ ಮತ್ತು ಜಾಲತಾಣಗಳು ಸಂವಹನವನ್ನು ಕಡಿಮೆ ಮಾಡಿವೆ ಎನ್ನುವುದು ಕಟು ಸತ್ಯ. ಇವು ಮಾನವನ ಬೆಳವಣಿಗೆಯನ್ನು ಉತ್ತೇಜಿಸುವ ಬದಲು ನಿಗ್ರಹಿಸುತ್ತಲೇ ಸಾಗಿವೆ. ಆಧುನಿಕತೆ, ತಂತ್ರಜ್ಞಾನ ಮುಂದುವರೆದಂತೆ ನಾವು ವೈಯಕ್ತಿಕ, ಕೌಟುಂಬಿಕ ಹಾಗೂ ಸಾಮಾಜಿಕ ಬೆಳವಣಿಗೆಯಲ್ಲಿ ಹಿಮ್ಮೆಟ್ಟಿದ್ದೇವೆ.


ಫೋನ್ ಮೊದಲನೆಯ ಹೆಂಡತಿಕತಾರಿಗೆ ಬರುವ ಮುನ್ನ ಜಾಹಿರಾತು ನಿರ್ಮಾಣದ ಕಂಪನಿಯೊಂದರಲ್ಲಿ ನೌಕರಿ ಮಾಡುತ್ತಿದ್ದ ಗಂಡನ ಎರಡು ಫೋನುಗಳು ಹಗಲು ಇರುಳೆನ್ನದೆ ರಿಂಗಣಿಸುತ್ತಿದ್ದವು. ಹೋಟೆಲಿಗೆ ಊಟಕ್ಕೆ ಹೋದರೆ, ಒಂದು ಕೈಯಲ್ಲಿ ಫೋನು, ಮತ್ತೊಂದರಲ್ಲಿ ಊಟವಾಗುತ್ತಿತ್ತು. ಇನ್ನು ದಾರಿಯಲ್ಲಿ ಹೋಗುವಾಗ ಐದು ಕಿಲೋಮೀಟರ್ ದೂರ ಕ್ರಮಿಸಲು ಒಂದು ಗಂಟೆ ಹಿಡಿಯುತ್ತಿತ್ತು. ಎರಡೆರಡು ನಿಮಿಷಕ್ಕೂ ಫೋನ್ ರಿಂಗಾಗಿ ಬೈಕನ್ನು ರಸ್ತೆ ಬದಿ ನಿಲ್ಲಿಸಿ ಮಾತನಾಡುವುದೇ ಆಗುತ್ತಿತ್ತು. ಅವನ ಅಭ್ಯಾಸದಿಂದ ಕಿರಿಕಿರಿಯಾದರೂ ಮೌನವಾಗಿ ಅವನ ಕೆಲಸದ ಒತ್ತಡವನ್ನು ಒಪ್ಪಿಕೊಳ್ಳದೆ ಬೇರೆ ದಾರಿಯಿರಲಿಲ್ಲ. ‘ಫೋನು ನಿನ್ನ ಮೊದಲನೆಯ ಹೆಂಡತಿ, ನಾನು ಎರಡನೆಯವಳುಎಂದು ನಾನು, ಮತ್ತವನ ಗೆಳೆಯರು ಅವನನ್ನು ಸದಾ ರೇಗಿಸುತ್ತಿದ್ದೆವು. ಪರಿಸ್ಥಿತಿ ಈಗೇನೂ ಬದಲಾಗಿಲ್ಲ, ಫೋನು ಮತ್ತು ಲ್ಯಾಪ್ಟಾಪುಗಳ ನಡುವಲ್ಲಿ ನಮ್ಮ ಜೀವನ ಮೌನವಾಗಿ ಸಾಗುತ್ತಿದೆ.


ಗಂಡ ಸದಾ ಫೋನಿನಲ್ಲಿ ಮಗ್ನ ಎನ್ನುವುದು ನನ್ನ ದೂರಾದರೆ, ನನ್ನ ಫೋನು ಸದಾಸೈಲೆಂಟ್ ಮೋಡ್ಎನ್ನುವುದು ಅವರ ಮತ್ತು ನನ್ನ ಗೆಳತಿಯರ ದೂರು. ಅವರು ಕರೆ ಮಾಡಿದಾಗ ನಾನು ಫೋನು ತೆಗೆಯುವುದಿಲ್ಲ, ಅವರ ಮಿಸ್ಡ್ ಕಾಲ್ ನೋಡಿ ನಾನು ಕರೆ ಮಾಡಿದರೆ ಅವರು ಮತ್ತೆಲ್ಲೋ ಬ್ಯುಸಿ. ಹಾಗಾಗಿ ಗೆಳತಿಯರೆಲ್ಲಾ ಮಿಸ್ಡ್ ಕಾಲ್ ಕೊಟ್ಟು ಅವಳು ನೋಡಿದಾಗ ಕರೆ ಮಾಡುತ್ತಾಳೆ ಎಂದುಕೊಂಡು ಸುಮ್ಮನಾಗುತ್ತಾರೆ. ನನ್ನೊಂದಿಗೆ ಮಾತನಾಡಬೇಕು ಅನ್ನಿಸಿದಾಗೆಲ್ಲ ಗಂಡ ಕರೆ ಮಾಡುವುದು ಲ್ಯಾಂಡ್ ಲೈನಿಗೆ.


ನಮ್ಮಲ್ಲಿ ಬಹಳಷ್ಟು ಮಂದಿ ಸಂಪರ್ಕ ವ್ಯವಸ್ಥೆಗಳ ವ್ಯಸನಿಗಳಾಗಿಬಿಟ್ಟಿದ್ದೇವೆ. ನಾವು ತಯಾರಿಸಿದ ವಸ್ತುಗಳ ಮೋಹದಲ್ಲಿ ಬೀಳುತ್ತಿದ್ದೇವೆ. ವ್ಯಸನಿಗಳಾಗುತ್ತಿದ್ದೇವೆ. ಕೆಲವೊಮ್ಮೆ ಕೆಲಸ ಮಾಡುವ ನಮ್ಮ ಸಾಮರ್ಥ್ಯ ತಂತ್ರಜ್ಞಾನದ ಲಭ್ಯತೆ ಮತ್ತು ಅದು ಲಭ್ಯವಿರುವ ಸ್ಥಳದ ಮೇಲೆ ಅವಲಂಬಿಸಿರುತ್ತದೆ. ಸಮಯ ಮತ್ತು ಸ್ಥಳದ ಕಟ್ಟುಪಾಡುಗಳನ್ನು ನಾವು ಎಷ್ಟು ಆಂತರಿಕಗೊಳಿಸಿಕೊಂಡಿದ್ದೇವೆಂದರೆ ಆವುಗಳಿಂದ ಹೇಗೆ ದೂರವಿರಬೇಕೆಂಬುದನ್ನೇ ತಿಳಿದುಕೊಳ್ಳಲು ಹೋಗಿಲ್ಲ. ಹಾಗಾಗಿಯೇ ಅಸಮತೋಲನದೊಳಗೆ ಸಮತೋಲನದಲ್ಲಿರಲು ಪ್ರಯತ್ನ ಪಟ್ಟಾಗಲೆಲ್ಲಾ ನಮ್ಮ ದೇಹದ ಯಾವುದೋ ಒಂದು ಅವಿಭಾಜ್ಯ ಅಂಗ ಕತ್ತರಿಸಿಹೋದ ಹಾಗೆ ವಿಲವಿಲನೆ ಒದ್ದಾಡಿಬಿಡುತ್ತೇವೆ, ಮರಳಿ ಸ್ಕ್ರೀನ್ ನೋಡುವವರೆಗೂ ಮನಸ್ಸಿನಲ್ಲಿ ಅತೃಪ್ತಿ ಕಾಡುತ್ತಿರುತ್ತದೆ.


ಆನ್‌ಲೈನ್‌ನಲ್ಲಿ ಹಾಯ್, ಹಲೋ ಹೇಳುವುದು ಮುಖತಃ ಭೇಟಿ ಮಾಡುವದಕ್ಕೆ, ಸಾಮಾಜಿಕತೆ ಕಾಪಾಡಿಕೊಳ್ಳುವುದಕ್ಕೆ ಸಮರ್ಥ ಪರ್ಯಾಯ ಎಂದು ನಾವು ತಿಳಿದುಕೊಂಡುಬಿಟ್ಟಿದೇವೆ. ತಂತ್ರಜ್ಞಾನ ನಮಗೇ ತಿಳಿಯದಂತೆ ನಮ್ಮ ಮನಸ್ಸನ್ನು ಅಪಹರಿಸಿರುವುದು ಮನವರಿಕೆಯೇ ಆಗುವುದಿಲ್ಲ. ಗೂಗಲ್ ಮಾಜಿ ವಿನ್ಯಾಸ ನೀತಿಶಾಸ್ತ್ರಜ್ಞ ಟ್ರಿಸ್ಟಾನ್ ಹ್ಯಾರಿಸ್ ತಮ್ಮ ಒಂದು ಪ್ರಬಂಧದಲ್ಲಿ ಹೇಳುವ ಹಾಗೆ, ‘ತಂತ್ರಜ್ಞಾನ ನಮ್ಮ ಮನಸ್ಸನ್ನು ಅಪಹರಿಸುತ್ತಿರುವುದು ಮಾತ್ರವಲ್ಲ, ನಮ್ಮ ಆಯ್ಕೆಗಳನ್ನೂ ನಿಯಮಿತಗೊಳಿಸುತ್ತಿದೆ. ಉದಾಹರಣೆಗೆ, ಒಂದು ವಸ್ತ್ರದ ಮಳಿಗೆಗಾಗಿ ಗೂಗಲ್ ಮಾಡಿದರೆ, ಫಲಿತಾಂಶಗಳ ಪುಟಗಳಲ್ಲಿ ನಮಗೆ ಮೇಲ್ಭಾಗದಲ್ಲಿ ದೊರಕುವುದು ಜಾಹಿರಾತು ನೀಡಿರುವ ಪಟ್ಟಿಯೊಂದಿಗಿನ ಸೀಮಿತ ಆಯ್ಕೆಗಳಷ್ಟೇ. ಹುಡುಕಾಟದ ಫಲಿತಾಂಶಗಳ ಎರಡನೇ ಪುಟಕ್ಕೆ ನಾವು ಹೋಗುವುದು ಬಹಳವೇ ವಿರಳ’.


ಆಧುನಿಕ ತಂತ್ರಜ್ಞಾನ ಒಂದಿಡೀ ತಲೆಮಾರಿನ ಮಕ್ಕಳನ್ನು ಅಕ್ಷರಶಃ ಪರದೆಗಳ ವ್ಯಸನಿಗಳನ್ನಾಗಿ ಮಾಡಿಬಿಟ್ಟಿದೆ. ಇದು ಆಧುನಿಕ ಚಟ ಎನ್ನುತ್ತಲೋ, ಮಕ್ಕಳ ಸಮಾಜವಿರೋಧಿ ನಡವಳಿಕೆಗಳನ್ನು ಪೋಷಕರ ಸಮಸ್ಯೆ ಎನ್ನುತ್ತಲೋ ಮೂಗು ಮುರಿಯುತ್ತೇವೆ. ಆದರೆ ಬದಲಾವಣೆ ಕಿರಿಯ ಪೀಳಿಗೆಯನ್ನು ಮಾತ್ರವಲ್ಲದೆ ನಮ್ಮನ್ನೂ, ಮಿಲೇನಿಯಲ್ಸ್ ಮತ್ತು ವಯಸ್ಕರನ್ನೂ, ಬಾಧಿಸುತ್ತಿದೆ.


ಕೆಲವು ಸಲ ಫೇಸ್ ಬುಕ್, ಇನ್ಸ್ಟಾಗ್ರಾಮ್ ಡಿಆಕ್ಟಿವೇಟ್ ಮಾಡಿ ಅವುಗಳಿಂದ ವಾರಗಟ್ಟಲೆ ದೂರವುಳಿಯುವ ನಾನು ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮ ಪರಿಣಿತೆ ದಾನಾ ಬಾಯ್ಡ್ ಹೇಳುವಟೆಕ್ನೋ-ಫ್ರೆಟ್ಫುಲ್ ಪೇರೆಂಟ್ಇರಬಹುದೆನ್ನುವ ಗುಮಾನಿ ಕಾಡುತ್ತದೆ. ಅದಕ್ಕೆ ಕಾರಣ ನಾನಾರಿಸಿಕೊಂಡಿರುವ ವೃತ್ತಿ ಮತ್ತು ಅಭಿರುಚಿಗಳೂ ಕಾರಣವಿರಬಹುದು. ಸಾರ್ವಜನಿಕವಾಗಿ ಪತ್ರಿಕೋದ್ಯಮ ಮತ್ತು ಛಾಯಾಗ್ರಹಣವೇ ನನ್ನ ಬದುಕಾಗಿದ್ದರೂ, ಖಾಸಗಿಯಾಗಿ ನಾನು ಈಗಲೂ ಬರವಣಿಗೆಯನ್ನೇ ಅಪ್ಪಿಕೊಂಡಿದ್ದೇನೆ. ಒಬ್ಬ ಬರಹಗಾರ್ತಿಯಾಗಿ ಆಗಾಗ ನನಗೆ ಏಕಾಂತತೆಯ ಅವಶ್ಯಕತೆಯಿರುತ್ತದೆ, ಅಥವಾ ನಾನೇ ಏಕಾಂತತೆಯನ್ನು ಬಯಸುತ್ತೇನೆ. ಬಹುಶಃ ಏಕಾಂತತೆ ದಕ್ಕದಿದ್ದರೆ ನನಗೆ ಬರೆಯಲು ಸಾಧ್ಯವಾಗುತ್ತಿತ್ತೋ ಇಲ್ಲವೋ ಗೊತ್ತಿಲ್ಲ. ಬರವಣಿಗೆಗೆ ಬೇಕಾದ ಹೊಸ ವಿಚಾರಗಳು ಹೊಳೆಯುವುದು ಅದೇ ಶಾಂತ ಏಕಾಂತತೆಯಲ್ಲಿ. ಸಮಯದಲ್ಲಿ ತಂತ್ರಜ್ಞಾನದ ಅವಶ್ಯಕತೆಯಾಗಲಿ ಅದರ ಒಳನುಸುಳುವಿಕೆಯಾಗಲಿ ಬೇಕಿರವುದಿಲ್ಲ. ಏಕಾಂತತೆಯ ಹುಡುಕಾಟದಲ್ಲಿ ಹಲವು ಬಾರಿ ಸಾಮಾಜಿಕ ಜಾಲತಾಣಗಳಿಂದ ಸದ್ದೇ ಇಲ್ಲದೆ ದೂರವುಳಿದುಬಿಡುತ್ತೇನೆ.


ಏಕಾಂತತೆವನ್ನು ಜನರು ಒಪ್ಪಿ, ಅಪ್ಪಿಕೊಂಡರೆ ತಂತ್ರಜ್ಞಾನದ ಮಾಯಾಜಾಲದಿಂದ ಹೊರಬರಲು ಕೆಲ ಮಟ್ಟಿಗಾದರೂ ಸಾಧ್ಯವಾಗಬಹುದು ಎನ್ನಿಸುತ್ತದೆ. ಫೋನುಗಳನ್ನು ಬದಿಗಿರಿಸಿ ಮಕ್ಕಳೊಂದಿಗೆ ಆಟವಾಡಲು ದಿನಕ್ಕಿಷ್ಟು ಸಮಯ ಎಂದು ಮೀಸಲಾಗಿಟ್ಟರೂ ಎಷ್ಟೋ ಬದಲಾವಣೆಯಾಗುತ್ತದೆ.


ತಳವಿಲ್ಲದ ಮಾಹಿತಿಯ ಬಾವಿತಂತ್ರಜ್ಞಾನ ಉದ್ಯಮವು ನಮ್ಮನ್ನು ವ್ಯಸನಿಗಳಾಗಿಯೇ ಇರಲು ಬಳಸಿಕೊಂಡಿರುವ ತಂತ್ರತಳವಿಲ್ಲದ ಮಾಹಿತಿಯ ಬಾವಿಯನ್ನು ನಮ್ಮ ಮುಂದೊಡ್ಡಿರುವುದು. ಮೊಗೆದಷ್ಟು, ಕುಡಿದಷ್ಟು ಮಾಹಿತಿ ನಮಗೆ ಆದರೆ ಮಾಹಿತಿಯಿಂದ ದಣಿವಾರುವುದಿಲ್ಲ, ನಾವು ಮೊಗೆಯುವುದನ್ನೂ ನಿಲ್ಲಿಸುವುದಿಲ್ಲ. ಇದಕ್ಕೆ ಒಳ್ಳೆಯ ನಿದರ್ಶನ ನೆಟ್‌ಫ್ಲಿಕ್ಸ್: ಒಂದು ಪ್ರದರ್ಶನ ಮುಗಿದ ನಂತರ ಮುಂದಿನ ಕಂತು ಸ್ವಯಂಚಾಲಿತವಾಗಿ ಮುಂದುವರೆಯಲು ತೊಡಗುತ್ತದೆ, ಒಂದರ ನಂತರ ಇನ್ನೊಂದು, ಇನ್ನೊಂದರ ನಂತರ ಮತ್ತೊಂದು. 20 ಭಾಗಗಳ ಒಂದು ಸೀಸನ್ ಮುಗಿಯುವ ವೇಳೆಗೆ, ಮತ್ತೊಂದು 20-25 ಭಾಗಗಳು ಸ್ವಯಂಚಾಲಿತವಾಗಿ ಮುಂದುವರೆಯಲು ತೊಡಗುತ್ತವೆ. ರಾತ್ರಿ ಕಳೆದು, ಬೆಳಗಾಗುತ್ತದೆ, ಇಡೀ ರಾತ್ರಿ ಟಿವಿಗೆ ಕಣ್ಣು ಹಾಕಿಕೊಂಡು ಕೂತರೂ ತೃಪ್ತಿಯಿರುವುದಿಲ್ಲ. ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್, ಸ್ನ್ಯಾಪ್ ಚ್ಯಾಟ್, ಸಹ ಇದೇ ವಿಧಾನ ಅನುಸರಿಸುತ್ತವೆಸುದ್ದಿ ಫೀಡ್‌ಗಳನ್ನು ನವೀಕರಿಸಿದಾಗ, ಪ್ರತಿ ಪೋಸ್ಟ್ ಮುಂದಿನದಕ್ಕೆ ಸಾಗುತ್ತಾ ನಮ್ಮನ್ನು ಮತ್ತಷ್ಟು ಸಮಯ ಅಲ್ಲಿಯೇ ಬಂಧಿಸಿಟ್ಟುಕೊಳ್ಳುತ್ತವೆ.


ತಂತ್ರಜ್ಞಾನಕ್ಕೆ ನಾವು ನಮ್ಮನ್ನು ಎಷ್ಟು ಸಲೀಸಾಗಿ ನಮ್ಮನ್ನು ಹೊಂದಿಸಿಕೊಂಡಿದ್ದೇವೆಂದರೆ, ಸಾಮಾಜಿಕ ಜಾಲತಾಣಗಳಲ್ಲಿಪೋಸ್ಟ್ ಮಾಡಲಾಗಿದೆ’, ‘ಲೈಕ್ ಮಾಡಲಾಗಿದೆ’, ಅಥವಾಡಿಲೀಟ್ ಮಾಡಲಾಗಿದೆಇಷ್ಟೇ ಆಗಿದೆ ನಮ್ಮ ಜೀವನ. ಇದರ ನಡುವಲ್ಲಿ ಮಾನವೀಯತೆ ಕಳೆದುಕೊಳ್ಳುತ್ತಿದ್ದೇವೆಯೇ ಅಥವಾ ಆಗಲೇ ಕಳೆದುಕೊಂಡಾಗಿದೆಯೋ ಅದರ ಬಗ್ಗೆ ಯೋಚಿಸಲೂ ಯಾರ ಬಳಿ ಪುರುಸೊತ್ತಿಲ್ಲ.


ಸಾಮಾಜಿಕ ಜಾಲತಾಣಗಳು ನಮ್ಮಲ್ಲಿ ಅನೇಕರನ್ನು ಅತೃಪ್ತಿ, ಅಸೂಯೆ ಮತ್ತು ವಿರೋಧಾಭಾಸಕ್ಕೆ ಎಡೆಮಾಡಿ ಸಮಾಜವಿರೋಧಿಗಳನ್ನಾಗಿ ಮಾಡುತ್ತಿರಬಹುದು ಎಂದು ಕೆಲವು ಸಂಶೋಧನೆಗಳೂ ತೋರಿಸುತ್ತಿವೆ. ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಷನ್ ನಡೆಸಿದ ಒಂದು ಶೈಕ್ಷಣಿಕ ಅಧ್ಯಯನದ ಪ್ರಕಾರ, ‘ಜನರು ಮಾಹಿತಿಯನ್ನು ಪಡೆಯುತ್ತಾ ವ್ಯರ್ಥವಾಗಿ ಹೆಚ್ಚಿನ ಸಮಯವನ್ನು ಫೇಸ್ಬುಕ್ಕಿನಲ್ಲಿ ಕಳೆದಾಗ ಅವರ ಮನಸ್ಸಿನಲ್ಲಿ ಕೆಟ್ಟ ಭಾವನೆಗಳು ತುಂಬಿಕೊಳ್ಳುತ್ತವೆ. ಫೇಸ್‌ಬುಕ್‌ನಲ್ಲಿ ನಾವು ಕಳೆಯುವ ಕೇವಲ ಹತ್ತು ನಿಮಿಷಗಳು ಖಿನ್ನತೆಗೆ ದೂಡುತ್ತವೆ. ಇನ್ನು ಅದರಲ್ಲಿರುವ ಬಹುಸಂಖ್ಯೆಯ ಪೋಸ್ಟ್‌ಗಳನ್ನು ಮತ್ತು ಲಿಂಕ್ ಗಳನ್ನು ಓದಿ ಅವುಗಳಿಗೆ ಲೈಕ್ ಮತ್ತು ಕಾಮೆಂಟ್ ಮಾಡುವುದು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.’


ಬಹುಶಃ ನಾವು ನೆಟ್ಫ್ಲಿಕ್ಸ್ ಪ್ಲೇ ಮಾಡುವ ಬದಲು, ಫೇಸ್ಬುಕ್, ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಮಿನಲ್ಲಿ ಫೋಟೋ ಹಂಚಿಕೊಳ್ಳುವ ಬದಲು, ಮೆಸೆಂಜರ್ ಮತ್ತು ವಾಟ್ಸಾಪಿನಲ್ಲಿ ಮೆಸೇಜ್ ಕಳುಹಿಸುವ ಬದಲು, ನಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೆ ಕರೆ ಮಾಡಿ ಮಾತನಾಡಿದರೆ ಅಥವಾ ಅವರನ್ನು ಭೇಟಿಯಾಗಲು ದಿನ ಮತ್ತು ಸ್ಥಳ ಗೊತ್ತು ಮಾಡಿ ಅವರೊಂದಿಗೆ ಸಮಯ ಕಳೆದರೆ ಚಕ್ರವ್ಯೂಹದಿಂದ ಹೊರ ಬರುವ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನ ಮಾಡಿದ ಹಾಗಾಗಬಹುದೇನೋ!


(Source: TV9 Kannada)

No comments:

Post a Comment