ಕತಾರ್ ಮೇಲ್ | Qatar Mail : ಈ ವರ್ಷ ಏಪ್ರಿಲ್ ೧೪ಕ್ಕೆ ತಮಿಳರ ಚಿತ್ತಿರೈ ಪುತ್ತಂಡು ಅಥವಾ ಪುದುವರುಶಂ ಮತ್ತು ಸಿಖ್ಖರ ವೈಸಾಖಿ ಹಾಗೂ ಏಪ್ರಿಲ್ ೧೫ಕ್ಕೆ ಮಲಯಾಳಿಗಳ ವಿಶು ಹಬ್ಬಗಳು ಬಂದಿವೆ. ಕಳೆದೆರಡು ವರ್ಷಗಳಲ್ಲಿ ಪ್ರಾಯಶಃ ಮೊದಲ ಬಾರಿಗೆ ಈ ಹಬ್ಬಗಳನ್ನು ಮೂರೂ ರಾಜ್ಯಗಳ ಜನತೆ, ಜಗತ್ತಿನ ಯಾವ ಮೂಲೆಯಲ್ಲಿದ್ದರೂ, ಸದ್ದು ಗದ್ದಲಗಳಿಲ್ಲದೆ ಸರಳವಾಗಿ ತಮ್ಮ ಮನೆಗಳಲ್ಲಿಯೇ ಆಚರಿಸಿಕೊಂಡಿದ್ದರು, ಥ್ಯಾಂಕ್ಸ್ ಟು ಕರೋನ ವೈರಸ್ ನ ರಣಕಹಳೆ. ಕತಾರ್ ನಲ್ಲಿ ಕರೋನ ವೈರಾಣು ಹರಡುವುದನ್ನು ನಿಯಂತ್ರಿಸಲು ಸ್ವಯಂ ನಿಯಂತ್ರಣ ಹೇರಿಕೊಂಡು, ಅನಗತ್ಯವಾಗಿ ಮನೆಯಿಂದ ಹೊರಬರದೆ, ಸ್ವಯಂ ನಿರ್ಬಂಧನೆಗೊಳಗಾಗಿದ್ದ ನಾವು ಗೃಹ ಬಂಧನದಲ್ಲಿದ್ದುಕೊಂಡೇ ರಂಗು, ಇಂಗು, ತೆಂಗು ಇಲ್ಲದೆ ಹೋಳಿ, ಯುಗಾದಿ, ಶ್ರೀ ರಾಮನವಮಿ, ಹನುಮ ಜಯಂತಿ ಮಾತ್ರವಲ್ಲದೆ, ಕನಿಕೊನ್ನ ಹೂವಿಲ್ಲದೆ, ಗೆಳೆಯರ ಕೇಕೆ-ಚಪ್ಪಾಳೆಗಳಿಲ್ಲದೆ ವಿಶುವನ್ನೂ ಸರಳವಾಗಿ ಆಚರಿಸಿದ್ದೆವು. ಕರ್ನಾಟಕದ ಮಗಳಾಗಿ ಚೈತ್ರ ಮಾಸದ ಮೊದಲ ದಿನದಂದು ಯುಗಾದಿ ಆಚರಿಸಿದರೆ, ಮರು ತಿಂಗಳು ವೈಶಾಖ ಮಾಸದ ಮೊದಲ ದಿನದಂದು ವಿಶು ಎಂಬ ಹೊಸ ವರ್ಷವನ್ನು ಕೇರಳದ ಸೊಸೆಯಾಗಿ ಆಚರಿಸಲು ಪ್ರಾರಂಭಿಸಿ ಒಂದೂವರೆ ದಶಕದ ಮೇಲಾಗಿದೆ.
ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ಛಾಯಾಗ್ರಾಹಕಿ (Chaitra Arjunpuri)
*
(ಪತ್ರ 8, ಭಾಗ 1)
ವಿಶು ಮಲಯಾಳಿಗಳಿಗೆ ಹೊಸ ವರ್ಷದ ಆರಂಭವನ್ನು ತಿಳಿಸುವ ಸುಗ್ಗಿಯ ಹಬ್ಬ. ವಿಶ್ವದಲ್ಲಿ ಎಲ್ಲೇ ಇರಲಿ, ವಿಶು ಹಬ್ಬವನ್ನು ಆಚರಿಸುವ ಮೂಲಕ ಮಲಯಾಳಿಗಳು ಕೇರಳದಲ್ಲಿ ವಸಂತ ಕಾಲವನ್ನು ಬರಮಾಡಿಕೊಳ್ಳುತ್ತಾರೆ. ಅವರು ವಾಸವಿರುವ ಸ್ಥಳ ಎಲ್ಲೇ ಇರಲಿ, ಹೇಗೇ ಇರಲಿ ಆದಷ್ಟು ತಮ್ಮ ನಾಡಿನ ಆಚರಣೆಯ ಸೊಗಡನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಸುಗ್ಗಿ ಮಾಸ ಬರುತ್ತಿದ್ದ ಹಾಗೆಯೇ, ಕೇರಳದ ಬೀದಿಗಳು, ಅಂಗಡಿ ಮುಂಗಟ್ಟುಗಳು, ಪ್ರತಿಯೊಂದು ಮನೆಯೂ ಕನಿಕೊನ್ನ (Cassia fistula) ಹೂವುಗಳಿಂದ ಅಲಂಕೃತವಾಗಿ ನವ ವಧುವಿನಂತೆ ಹಬ್ಬಕ್ಕೆ ಸಜ್ಜಾಗುತ್ತವೆ.
‘ವಿಶು’ ಎಂದರೆ ಸಂಸ್ಕೃತದಲ್ಲಿ ‘ಸಮಾನ’ ಎಂದರ್ಥ. ತನ್ನೊಂದಿಗೆ ಸುಗ್ಗಿ ಸಮೃದ್ಧಿಯ ಭರವಸೆಯನ್ನು ಹೊತ್ತು ತರುವ ವಿಶು ಧಾರ್ಮಿಕತೆಯ ಜೊತೆ ಜೊತೆಗೆ ವೈಜ್ಞಾನಿಕ ಮಹತ್ವವನ್ನೂ ಹೊಂದಿದೆ. ಇದು ಹಗಲು ಮತ್ತು ರಾತ್ರಿಯ ಸಮಾನ ಅವಧಿಯನ್ನು ಸಂಕೇತಿಸುತ್ತದೆ. ವರ್ಷದ ವಸಂತ ವಿಷುವತ್ತು (spring equinox) ವಿನ ಈ ಅವಧಿಯಲ್ಲಿ ಸೂರ್ಯ ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸಿದರೆ, ರೈತರು ಉಳುಮೆ ಮತ್ತಿತರೆ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸುತ್ತಾರೆ. ಹಾಗಾಗಿ ಪ್ರತಿ ವರ್ಷ ಮೊದಲ ಮಲಯಾಳಂ ಮಾಸದ ಮೊದಲ ದಿನದಂದು, ಸಾಮಾನ್ಯವಾಗಿ ಏಪ್ರಿಲ್ ೧೪ ಅಥವಾ ೧೫ರಂದು ಮಲಯಾಳಿಗಳು ವಿಶು ಎಂದು ಸುಗ್ಗಿ ಹಬ್ಬವನ್ನು ಆಚರಿಸುತ್ತಾರೆ.
ಕನಿಕೊನ್ನ ಹೂವೇ ಏಕೆ?
ವಿಷ್ಣುವಿನ ಅವತಾರವಾದ ಶ್ರೀ ಕೃಷ್ಣನಿಗೆ ಸಂಪೂರ್ಣವಾಗಿ ಮೀಸಲಾಗಿರುವ ವಿಶು ಹಬ್ಬದಲ್ಲಿ ಕನಿಕೊನ್ನ ಹಳದಿ ಹೂವುಗಳದೇ ಸಾಮ್ರಾಜ್ಯ. ಶ್ರೀ ಕೃಷ್ಣ ತನ್ನ ಸೊಂಟದ ಸುತ್ತಲೂ ಈ ಹೂವುಗಳನ್ನು ಆಭರಣಗಳ ಹಾಗೆ ಧರಿಸಿಸುತ್ತಿದ್ದ ಎನ್ನುವ ನಂಬಿಕೆಯಿಂದಾಗಿ 'ವಿಶು ಕಣಿ'ಯ ಅತ್ಯಂತ ಅವಶ್ಯಕ ವಸ್ತುಗಳಲ್ಲಿ ಇದರದು ಅಗ್ರ ಸ್ಥಾನ.
ಕನಿಕೊನ್ನ ಹೂವಿನ ಮೂಲದ ಹಿಂದೆ ಒಂದು ಕುತೂಹಲಕಾರಿ ದಂತಕಥೆಯಿದೆ. ಬಹಳ ಹಿಂದಿನ ಕಾಲದಲ್ಲಿ ಕೇರಳದ ಒಂದು ಪುಟ್ಟ ಹಳ್ಳಿಯಲ್ಲಿ ಶ್ರೀ ಕೃಷ್ಣನ ಒಂದು ಸಣ್ಣ ದೇಗುಲವಿತ್ತು. ಒಂದು ದಿನ ಆಟವಾಡುತ್ತಾ ಪುಟ್ಟ ಬಾಲಕನೊಬ್ಬ ದೇಗುಲದೊಳಗೆ ಹೋಗುತ್ತಾನೆ. ಅದನ್ನರಿಯದ ಪೂಜಾರಿ ಸಾಯಂಕಾಲದ ಪೂಜೆಯ ಬಳಿಕ ದೇವಾಲಯಕ್ಕೆ ಬೀಗ ಹಾಕಿ ಮನೆಗೆ ಹೋಗುತ್ತಾನೆ. ಕತ್ತಲಲ್ಲಿ ಮಗು ಅಳುವುದನ್ನು ಕೇಳಿ ಬಾಲಕನ ರೂಪದಲ್ಲಿ ಪ್ರತ್ಯಕ್ಷವಾದ ಶ್ರೀ ಕೃಷ್ಣ ತನ್ನ ಸೊಂಟದಲ್ಲಿದ್ದ ಚಿನ್ನದ ಉಡುದಾರವನ್ನು ಮಗುವಿಗೆ ಕೊಟ್ಟು ಆಟವಾಡಿಸುತ್ತಾನೆ.
ಮರುದಿನ ದೇಗುಲದ ಬಾಗಿಲು ತೆರೆದ ಪೂಜಾರಿಗೆ ವಿಗ್ರಹದಲ್ಲಿದ್ದ ಚಿನ್ನದ ಉಡುದಾರ ಕಾಣೆಯಾಗಿರುವುದು ತಿಳಿಯುತ್ತದೆ. ಸುದ್ದಿ ಹಳ್ಳಿಯಲ್ಲಿ ಹರಡಿ, ಜನರೆಲ್ಲಾ ಉಡುದಾರ ಹುಡುಕಲು ದೇಗುಲದಲ್ಲಿ ಜಮಾಯಿಸುತ್ತಾರೆ. ಸ್ವಲ್ಪ ಸಮಯದ ಬಳಿಕ, ಅನತಿ ದೂರದಲ್ಲಿ ಪುಟ್ಟ ಹುಡುಗ ದೇವರ ಉಡುದಾರದೊಂದಿಗೆ ಆಟವಾಡುತ್ತಿರುವುದು ಕಾಣುತ್ತದೆ. ಹಳ್ಳಿ ಜನರೆಲ್ಲಾ ತನ್ನತ್ತ ಬರುತ್ತಿರುವುದನ್ನು ಕಂಡು ಹೆದರಿದ ಬಾಲಕ ಕೈಲಿದ್ದ ಚಿನ್ನದ ಉಡುದಾರವನ್ನು ಪಕ್ಕದಲ್ಲಿದ್ದ ಮರದತ್ತ ಎಸೆಯುತ್ತಾನೆ. ಮರದ ಕೊಂಬೆಗೆ ಸಿಲುಕಿಕೊಂಡ ಉಡುದಾರ ಒಮ್ಮೆಲೇ ಚಿನ್ನದ ಹಳದಿ ಹೂವುಗಳಾಗಿ ಅರಳುತ್ತದೆ. ಅಂದಿನಿಂದ ಈ ಹಳದಿ ಹೂವುಗಳನ್ನು ವಿಶು ಕನಿಕೊನ್ನ ಎಂದು ಕರೆಯಲಾಗುತ್ತದೆ.
ವಿಶು ಹಬ್ಬಕ್ಕೆ ಸಂಬಂಧಿಸಿದಂತೆ ಹಲವಾರು ಕಥೆಗಳಿವೆ. ಶ್ರೀ ಕೃಷ್ಣನು ನರಕಾಸುರನನ್ನು ಕೊಂದ ದಿನ ಎಂದು ಒಂದು ನಂಬಿಕೆಯಾದರೆ, ರಾಮ ರಾವಣನನ್ನು ಕೊಂದ ದಿನ ಇದು ಎನ್ನುವ ಮತ್ತೊಂದು ನಂಬಿಕೆಯಿದೆ.
ವಿಶು 'ಕಣಿ'
ಬೆಳಿಗ್ಗೆ ವಿಶು ಕಣಿಯನ್ನು ನೋಡುವುದರೊಂದಿಗೆ ಈ ಹಬ್ಬದ ದಿನ ಪ್ರಾರಂಭವಾಗುತ್ತದೆ. ವಿಶು ದಿನದ ಬೆಳಿಗ್ಗೆ ತಮ್ಮ ಕಣ್ಣುಗಳನ್ನು ತೆರೆದಾಗ ಏನನ್ನು ನೋಡುತ್ತೇವೆ ಎನ್ನುವುದರ ಮೇಲೆ ಇಡೀ ವರ್ಷದ ತಮ್ಮ ಅದೃಷ್ಟ ಅವಲಂಬಿಸಿರುತ್ತದೆ ಎನ್ನುವುದು ಮಲಯಾಳಿಗಳ ದೃಢವಾದ ನಂಬಿಕೆ.
ಶ್ರೀ ಕೃಷ್ಣನ ವಿಗ್ರಹ ಅಥವಾ ಚಿತ್ರದ ಮುಂದೆ ದೇವರ ಕೋಣೆಯಲ್ಲಿ 'ಉರುಳಿ' ಎನ್ನುವ ಪಂಚ ಲೋಹದ ದೊಡ್ಡ ವೃತ್ತಾಕಾರದ ಬೋಗುಣಿಯಲ್ಲಿ ಕನಿಕೊನ್ನ ಹೂವುಗಳು, ಅಕ್ಕಿ, ಅಡಕೆ-ವೀಳ್ಯದೆಲೆ, ತೆಂಗಿನಕಾಯಿ, ಹಳದಿ ಮಂಗಳೂರು ಸೌತೆಕಾಯಿ, ಹಲಸಿನ ಹಣ್ಣು, ಮಾವಿನಕಾಯಿ, ಹಳದಿ ನಿಂಬೆ ಹಣ್ಣು, ವಾಲ್ಕನ್ನಡಿ ಅಥವಾ ಆರನ್ಮುಲ ಕನ್ನಡಿ ಎಂದು ಕರೆಯಲ್ಪಡುವ ಲೋಹದ ಕನ್ನಡಿ, ಚಿನ್ನದ ಜರಿ ಅಂಚಿರುವ ಸಾಂಪ್ರದಾಯಿಕ ಕೇರಳ ಕಸವು ಸೀರೆ ಅಥವಾ ಪಂಚೆ, ಒಡವೆಗಳು, ಕರೆನ್ಸಿ ನೋಟು-ನಾಣ್ಯಗಳು, ಹಿಂದೂಗಳ ಪವಿತ್ರ ಪುಸ್ತಕಗಳಾದ ರಾಮಾಯಣ ಅಥವಾ ಭಗವದ್ಗೀತೆಯನ್ನು ಇರಿಸುತ್ತಾರೆ. ಪಕ್ಕದಲ್ಲಿ ‘ನಿಲವಿಲಕು’ ಎನ್ನುವ ಒಂಟಿ ಎಣ್ಣೆ ದೀಪವನ್ನೂ ಹೊತ್ತಿಸುತ್ತಾರೆ.
ಸಾಮಾನ್ಯವಾಗಿ ಕುಟುಂಬದ ಹಿರಿಯ ಮಹಿಳೆ ವಿಶು ದಿನದ ಹಿಂದಿನ ರಾತ್ರಿ ವಿಶು ಕಣಿಯನ್ನು ಸಿದ್ಧಪಡಿಸುತ್ತಾಳೆ. ನಮ್ಮ ಮನೆಯಲ್ಲಿ ನಾನು ಹಬ್ಬದ ದಿನಕ್ಕಾಗಿ ತರಕಾರಿಗಳನ್ನೆಲ್ಲಾ ರಾತ್ರಿ ಕೊಯ್ದು ಮಲಗಿದ ಮೇಲೆ ನನ್ನ ಗಂಡ ವಿಶು ಕಣಿಯನ್ನು ಸಿದ್ಧಪಡಿಸುತ್ತಾನೆ. ಹಬ್ಬದ ದಿನ ಬ್ರಾಹ್ಮೀ ಮುಹೂರ್ತದಲ್ಲಿ (ಮುಂಜಾನೆ ೪ ರಿಂದ ೬ ಗಂಟೆಯೊಳಗೆ) ನಾಲ್ಕು ಗಂಟೆಗೆ ಮೇಲೆದ್ದು, ದೇವರ ವಿಶು ಕಣಿಯ ಪಕ್ಕದಲ್ಲಿರಿಸಿರುವ ದೀಪ ಹಚ್ಚಿ ಶ್ರೀ ಕೃಷ್ಣನ ದರ್ಶನ ಮಾಡಿ ನಮ್ಮನ್ನು ಎಬ್ಬಿಸಲು ಬರುತ್ತಾನೆ.
ಮೊದಲು ನನ್ನನ್ನು, ಎಬ್ಬಿಸಿ, ನನ್ನ ಕಣ್ಣುಗಳನ್ನು ತನ್ನ ಕೈಗಳಿಂದ ಮುಚ್ಚಿ, ದೇವರ ಕೋಣೆಗೆ ಕರೆದುಕೊಂಡು ಹೋಗುತ್ತಾನೆ. ವಿಶು ಕಣಿಯ ಮುಂದೆ ನಿಲ್ಲಿಸಿ ನನ್ನ ಕಣ್ಣುಗಳನ್ನು ಮುಚ್ಚಿದ ತನ್ನ ಅಂಗೈ ತೆಗೆಯುತ್ತಾನೆ. ನಾನು ಕಣ್ಣು ತೆರೆದು ದೀಪದ ಬೆಳಕಿನಲ್ಲಿ ವಿಶು ಕಣಿ ಮತ್ತು ದೇವರ ಚಿತ್ರವನ್ನು ನೋಡುತ್ತೇನೆ. ಆ ಸಮಯದಲ್ಲಿ ಮೊದಲು ಕಣ್ಣಿಗೆ ಬಿದ್ದ ವಿಶು ಕಣಿಯಲ್ಲಿರುವ ಮಂಗಳಕಾರಿ ವಸ್ತು ವರ್ಷವಿಡೀ ನಮಗೆ ಶುಭವನ್ನುಂಟು ಮಾಡುತ್ತದೆ ಎನ್ನುವುದು ನಂಬಿಕೆ. ಅದಾದ ಬಳಿಕ ಕುಟುಂಬದ ಹಿರಿಯನಾಗಿ ನನಗೆ ‘ವಿಶು ಕೈನೀಟಂ’ - ಹಣ - ಕೊಟ್ಟು ಮುಂಬರುವ ವರ್ಷದಲ್ಲಿ ಸಂಪತ್ತು ಮತ್ತು ಸಮೃದ್ಧಿ ದೊರಕಲಿ ಎಂದು ಆಶೀರ್ವದಿಸುತ್ತಾನೆ. ಆಮೇಲೆ ನನ್ನ ಮಗನನ್ನು ಎಬ್ಬಿಸಿ, ಅವನಿಗೂ ವಿಶು ಕಣಿ ತೋರಿಸಿ ವಿಶು ಕೈನೀಟಂ ನೀಡುತ್ತಾನೆ.
(Source: TV9 Kannada)
No comments:
Post a Comment