ಕತಾರ್ ಮೇಲ್ | Qatar Mail : ದುರಾದೃಷ್ಟಕ್ಕೆ, ಅತಿಕ್ರಮಣ ಪ್ರವೇಶ ಮತ್ತು ಪರವಾನಗಿ ಇಲ್ಲದೆ ಚಿತ್ರೀಕರಣದ ಜೊತೆ ಜೊತೆಗೆ ಮದ್ಯ ಸೇವನೆಯ ಅಪರಾಧವೂ ಸೇರಿಕೊಂಡು, ಗುರುವಾರ ಜೈಲು ಸೇರಿದ ರಿಚರ್ಡ್ನನ್ನು ಭಾನುವಾರ ನ್ಯಾಯಾಧೀಶರ ಮುಂದೆ ನಿಲ್ಲಿಸಿ ದಂಡ ತೆರುವವರೆಗೂ ಕಾರಾಗೃಹ ಶಿಕ್ಷೆಗೆ ಗುರಿ ಪಡಿಸಲಾಗಿತ್ತು. ಕೊನೆಗೆ, ಕಂಪನಿಯ ಮಾಲೀಕ ದಂಡ ತೆತ್ತು ರಿಚರ್ಡ್ ನನ್ನು ಜೈಲಿನಿಂದ ಬಿಡಿಸಿದರು. ಅದರ ಬಳಿಕವೂ ಆತ ಇನ್ನೂ ಒಂದೆರಡು ಬಾರಿ ಜೈಲಿನ ಮುಖ ನೋಡುವಂತಾದರೂ ಅದು ಕುಡಿತದ ಕಾರಣಕ್ಕೆ ಮಾತ್ರ, ಆಫೀಸಿನ ವಿಚಾರದಲ್ಲಿ ಅಲ್ಲ. ಎಷ್ಟೇ ಪರಿಚಯವಿರಲಿ, ಇಲ್ಲಿ ಸೆಕ್ಯೂರಿಟಿಗಳು ಗೇಟ್ ಪಾಸ್ ತಪಾಸಣೆ ಮಾಡದೆ ಕಚೇರಿಗಳಿಗೆ ಪ್ರವೇಶಿಸಲು ಬಿಡುವುದಿಲ್ಲ. ಅವರಿಗೆ ಅವರದೇ ಆದ ಸುರಕ್ಷತೆ ಮತ್ತು ಭದ್ರತೆಯ ನಿಯಮಗಳಿರುತ್ತವೆ, ಅವನ್ನು ಅವರು ಮತ್ತು ನಾವು ಪಾಲಿಸಲೇಬೇಕಾಗುತ್ತದೆ. ಈ ನಿಯಮಗಳು ಸರ್ಕಾರಿ ಕಚೇರಿ ಮತ್ತು ಮೀಡಿಯಾ ಆಫೀಸುಗಳಲ್ಲಿ ಬಹಳ ಕಟ್ಟುನಿಟ್ಟಾಗಿರುತ್ತದೆ.
ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ಛಾಯಾಗ್ರಾಹಕಿ (Chaithra Arjunpuri)
*
(ಪತ್ರ 6, ಭಾಗ 3)
ಅಷ್ಟಕ್ಕೂ, ಕಚೇರಿಯೊಂದನ್ನು, ಅದರಲ್ಲೂ ಮೀಡಿಯಾ ಆಫೀಸನ್ನು ಪ್ರವೇಶಿಸಲು, ಅನುಮತಿ, ಗೇಟ್ ಪಾಸ್ ಬೇಕು ಎನ್ನುವುದು ಮೊದಲ ಬಾರಿಗೆ ತಿಳಿದದ್ದು ಬೆಂಗಳೂರಿನಲ್ಲಿ. ನಾನಾಗ ಇನ್ನೂ ಪ್ರೈಮರಿ ಸ್ಕೂಲಿನಲ್ಲಿ ಓದುತ್ತಿದ್ದೆ. ಮಂಡ್ಯದ ಹಳ್ಳಿ ಜನರಾದ ನಮಗೆ ಬೆಂಗಳೂರು ಯಾವ ವಿದೇಶಕ್ಕೂ ಕಡಿಮೆಯೆನಿಸುತ್ತಿರಲಿಲ್ಲ. ವರ್ಷಕ್ಕೊಮ್ಮೆ ಮೌಲ್ಯಮಾಪನಕ್ಕೆಂದು ಅಪ್ಪ ಬೆಂಗಳೂರಿಗೆ ಹೋಗುವಾಗ, ಕೊನೆಯ ದಿನ ನನ್ನನ್ನೂ ಕರೆದುಕೊಂಡು ಹೋಗುತ್ತಿದ್ದರು. ಮೌಲ್ಯಮಾಪನ ಮುಗಿದ ಮೇಲೆ, ಮಧ್ಯಾಹ್ನ ಪ್ರಜಾವಾಣಿ ಕಚೇರಿಗೂ ಹೋಗುತ್ತಿದ್ದೆವು. ಪ್ರಜಾವಾಣಿ ಕಚೇರಿ ನನಗೆ ಬಹಳ ಇಷ್ಟವಾಗುತ್ತಿದ್ದುದ್ದಕ್ಕೆ ಕಾರಣ ಅಲ್ಲಿದ್ದ ಲಿಫ್ಟ್. ನಿಜ ಹೇಳಬೇಕೆಂದರೆ, ನಾನು ಮೊದಲ ಬಾರಿ ಲಿಫ್ಟ್ ನೋಡಿದ್ದು, ಹತ್ತಿದ್ದು ಪ್ರಜಾವಾಣಿಯಲ್ಲೇ! ಮಾತ್ರವಲ್ಲ, ಬೆಂಗಳೂರೆಂದರೆ ಆಗ ನನ್ನ ಪಾಲಿಗೆ ಎಂ.ಜಿ. ರಸ್ತೆಯ ಪ್ರಜಾವಾಣಿ ಮತ್ತು ಇಟ್ಟಿಗೆ ಬಣ್ಣದ ಸೆಂಟ್ರಲ್ ಕಾಲೇಜು. ಆ ದೊಡ್ಡ ಮಾಯಾನಗರಿಯಲ್ಲಿ ಕಳೆದು ಹೋದರೆ, ಎಂ.ಜಿ. ರಸ್ತೆಯ ಪ್ರಜಾವಾಣಿ ಆಫೀಸ್ ತಲುಪಿದರೆ ನಾನು ಮನೆ ತಲುಪಿದ ಹಾಗೆ ಎನ್ನುವಷ್ಟು ಸುರಕ್ಷಿತ ಭಾವನೆ ನನ್ನ ಪುಟ್ಟ ಮನಸ್ಸಿನಲ್ಲಿ ಮನೆಮಾಡಿತ್ತು.
ಎಂ.ಜಿ.ರಸ್ತೆಯಲ್ಲಿರುವ ಆ ಕಟ್ಟಡದ ಕೆಳಗೆ ಕಾಲಿಡುತ್ತಿದ್ದಂತೆಯೇ ಪ್ರಜಾವಾಣಿ ಆಫೀಸಿಗೋ, ಡೆಕ್ಕನ್ ಹೆರಾಲ್ಡ್ ಆಫೀಸಿಗೋ ಎಂದು ವಿಚಾರಿಸಿ, ಯಾರನ್ನು ಭೇಟಿ ಮಾಡಬೇಕು ಎಂದು ಕೇಳುತ್ತಿದ್ದರು. ಅಪ್ಪ ಹೇಳುತ್ತಿದ್ದ ಹೆಸರಿನ ಎಡಿಟರ್ ಅಥವಾ ಡೆಸ್ಕ್ ಎಡಿಟರ್ ಬಂದಿದ್ದರೆ ಅವರಿಗೆ ಕರೆ ಮಾಡಿ, ಇಂಥವರು ಮದ್ದೂರಿನ ಸ್ಟ್ರಿಂಗರ್ ಬಂದಿದ್ದಾರೆ, ಕಳುಹಿಸಬಹುದೇ ಎಂದು ವಿಚಾರಿಸುತ್ತಿದ್ದರು. ಅವರು ಆ ದಿನ ರಜೆಯಲ್ಲಿದ್ದರೆ ಬೇರೆಯವರನ್ನು ಭೇಟಿ ಮಾಡಬೇಕೆ ಎಂದು ವಿಚಾರಿಸಿ ಅವರ ಅನುಮತಿಯನ್ನು ಪಡೆದು, ಸಂದರ್ಶಕರ ಹಾಜರಿ ಪುಸ್ತಕದಲ್ಲಿ, ಹೆಸರು, ದಿನಾಂಕ, ಸಮಯ, ಸಹಿ, ಯಾರನ್ನು ಭೇಟಿ ಮಾಡುತ್ತಿದ್ದೇವೆ, ಭೇಟಿಯ ಕಾರಣವನ್ನು ಬರೆಯಿಸಿಕೊಂಡು ಒಳಗೆ ಹೋಗಲು ಬಿಡುತ್ತಿದ್ದರು. ಪ್ರಿಂಟಿಂಗ್ ಮಷೀನ್ ಗಳನ್ನು ಹಾದು, ಲಿಫ್ಟ್ ಹತ್ತಿ ಮೂರನೇ ಮಹಡಿಯಲ್ಲಿರುವ ಪ್ರಜಾವಾಣಿಯಲ್ಲಿ ಸಂಪಾದಕರನ್ನು ಭೇಟಿ ಮಾಡಿ, ಕೆಲವೊಮ್ಮೆ ಅಲ್ಲಿನ ಮೆಸ್ ನಲ್ಲಿ ಊಟ ಮಾಡಿ ಬರುತ್ತಿದ್ದೆವು. ಬೇರೆ ಪತ್ರಿಕೆಯ ಕಚೇರಿಗಳಲ್ಲಿಲ್ಲದ ಸೆಕ್ಯೂರಿಟಿ ಪ್ರಜಾವಾಣಿ ಕಟ್ಟಡದಲ್ಲಿ ಮಾತ್ರವೇಕೆ ಎನ್ನುವುದು ಆಗ ಅರ್ಥವಾಗುತ್ತಿರಲಿಲ್ಲವಾದರೂ, ಬೇರೆ ಪತ್ರಿಕೆಗಳಿಗಿಂತಲೂ ಅದು ವಿಭಿನ್ನ, ಅಪ್ಪ ಆ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವ ಹೆಮ್ಮೆ ಮಾತ್ರ ಸದಾ ಇರುತ್ತಿತ್ತು.
ಓದು ಮುಗಿಸಿ ಬೆಂಗಳೂರಿಗೆ ಹೋದ ಮೇಲೆ, ನನ್ನ ರೂಮ್ ಮೇಟ್ ಕೆಲಸ ಮಾಡುತ್ತಿದ್ದ ಇಂಡಿಯನ್ ಎಕ್ಸ್‌ಪ್ರೆಸ್/ಕನ್ನಡಪ್ರಭ ಕಚೇರಿಗೆ ಮೊದಲ ಬಾರಿಗೆ ಭೇಟಿ ಕೊಟ್ಟಾಗ ದೊಡ್ಡ ಅಚ್ಚರಿ ಕಾದಿತ್ತು. ಅಲ್ಲಿ ಯಾವುದೇ ಸೆಕ್ಯೂರಿಟಿ ಚೆಕ್ ಆಗಲಿ, ಸಂದರ್ಶಕರ ಹಾಜರಿ ಪುಸ್ತಕವಾಗಲಿ ಇರಲಿಲ್ಲ. ಯಾರು ಬೇಕಾದರೂ ಪತ್ರಿಕೆಯ ಕಚೇರಿಗೆ ಭೇಟಿ ನೀಡಬಹುದಿತ್ತು. ಕಾರಣ ಕೇಳಿದಾಗ ತಾವು ಪ್ರಜಾವಾಣಿಯಷ್ಟು ಹೈಫೈ ಅಲ್ಲ ಎಂದು ಆಕೆ ನಗೆಚಟಾಕಿ ಹಾರಿಸಿದ್ದಳು. ಆಗ ಅಪ್ಪ ಅದರ ಹಿಂದಿನ ಕಾರಣವನ್ನು ವಿವರಿಸಿದ್ದರು. ಇತರೆ ಪತ್ರಿಕೆಗಳ ಹಾಗೆ ಪ್ರಜಾವಾಣಿ/ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಪ್ರಿಂಟಿಂಗ್ ಬೇರೆಡೆಯಾಗದೆ ಅದೇ ಕಟ್ಟಡದಲ್ಲಾಗುತ್ತದೆ, ಹಾಗಾಗಿ ಸುರಕ್ಷತೆಯ ಬಗ್ಗೆ ಸದಾ ಎಚ್ಚರ ವಹಿಸಬೇಕಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದರು. ವರ್ಷಗಳು ಕಳೆದ ಹಾಗೆ ಅಲ್ಲಿನ ಭದ್ರತೆ ಮತ್ತಷ್ಟು ಹೆಚ್ಚಾಗಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕಳೆದ ಸಲ ಭಾರತಕ್ಕೆ ಬಂದಾಗಲೂ ಪ್ರಜಾವಾಣಿಯ ಕಟ್ಟಡಕ್ಕೆ ಹೋಗಿದ್ದೆ, ಅಲ್ಲಿ ಕೆಲಸ ಮಾಡುತ್ತಿರುವ ಗೆಳೆಯ ತಾನೇ ಕೆಳಗೆ ಬಂದು ಮಾತನಾಡಿಸಿಕೊಂಡು ಹೋಗಿದ್ದ.
ಯಾವುದೇ ದೇಶವಿರಲಿ, ಒಂದು ಸಂಸ್ಥೆಯಲ್ಲಿ ಗೇಟ್ ಪಾಸ್ ವ್ಯವಸ್ಥೆ ಜಾರಿಯಲ್ಲಿದ್ದರೆ ಅಲ್ಲಿನ ಆವರಣದಲ್ಲಿ ಅನಧಿಕೃತ ಚಲನೆಯನ್ನು ನಿರ್ಬಂಧಿಸುವುದು ಮಾತ್ರವಲ್ಲದೆ, ಉದ್ಯೋಗಿಗಳ ಚಲನೆಯ ಸಮಯವನ್ನೂ ದಾಖಲಿಸುತ್ತಿದ್ದಾರೆ ಎಂದರ್ಥ. ಒಟ್ಟಿನಲ್ಲಿ, ಯಾರನ್ನಾದರೂ ಭೇಟಿ ಮಾಡಬೇಕಾದರೆ ಅಥವಾ ಒಂದು ಕಚೇರಿಗೆ ಹೋಗಬೇಕಾದರೆ ಅಲ್ಲಿ ಕೆಲಸ ಮಾಡುವ ಗೆಳೆಯರು, ಪರಿಚಯಸ್ಥರಿದ್ದರೆ ಸಾಲದು, ಕಡ್ಡಾಯವಾಗಿ ಪ್ರವೇಶ ಪರವಾನಗಿ ಇರಲೇಬೇಕು.
(Source: TV9 Kannada)
No comments:
Post a Comment