Wednesday 8 September 2021

Meeting Point : ‘ನಿನಗೆ ಮಗಳು ಹುಟ್ಟಿದಾಗ ನನ್ನ ಆತಂಕ ಅರ್ಥ ಆಗುತ್ತೆ’

Fear : ‘ಪ್ರತೀ ಸಲ ಮರಳುಗಾಡಿಗೆ ಹೋದಾಗಲೂ ಭಯ, ಆತಂಕ ಮೂಡುವುದು ದೆವ್ವ, ಭೂತ, ಪ್ರಾಣಿ, ಕೀಟಗಳದ್ದಲ್ಲ, ಬದಲಾಗಿ ಮನುಷ್ಯನೆಂಬ ಪ್ರಾಣಿಯದ್ದೇ. ಯಾವುದಾದರೂ ಅಪರಿಚಿತ ಕಾರು ಬಂದು ನಾವೇಕೆ ಸಮಯದಲ್ಲಿ, ಸ್ಥಳದಲ್ಲಿ ಇದ್ದೇವೆ ಎಂದು, ಹುಡುಗರ ಗುಂಪಿನಲ್ಲಿರುವುದು ನಾನೂಬ್ಬಳೇ ಮಹಿಳೆ ಎನ್ನುವುದನ್ನು ನೆನಪು ಮಾಡಿಕೊಡುವಂತೆ, ಅವರು ನನ್ನನ್ನೇ ದುರುಗುಟ್ಟಿಕೊಂಡು ನೋಡುತ್ತಾ ಪ್ರಶ್ನೆಗಳನ್ನು ಕೇಳುವಾಗ ಪ್ರತಿ ಸಲವೂ ಎದೆ ಬಡಿತ ಜೋರಾಗುತ್ತದೆ.’ ಚೈತ್ರಾ ಅರ್ಜುನಪುರಿ

Meeting Point : ಮೈಸೂರಿನ ಅತ್ಯಾಚಾರ ದುರ್ಘಟನೆಯ ನಂತರ ಹುಡುಗರು ಅಲ್ಲಿಗೆ ಹೋಗಬಾರದಿತ್ತು ಅಥವಾ ಹುಡುಗಿ ಯಾಕೆ ಅಲ್ಲಿಗೆ ಹೋದಳು ಎಂಬ ಪ್ರಶ್ನೆಗಳು ಕೇಳಿಬಂದವು. ಪ್ರಶ್ನೆಗಳು ಈಗಷ್ಟೇ ಅಲ್ಲ ಇದಕ್ಕೆ ಶತಮಾನಕ್ಕೂ ಮೀರಿದ ಇತಿಹಾಸವಿದೆ. ಪಟ್ಟಭದ್ರ ಹಿತಾಸಕ್ತಿಗಳ ಕೈಚಳಕವಿದೆ. ಆದರೆ ಹರೆಯಕ್ಕೆ ಬಂದ ಹುಡುಗ-ಹುಡುಗಿಯರಲ್ಲಿ ಸ್ನೇಹವಿರಬಹು, ಪ್ರೇಮವಿರಬಹುದು ಅದು ಅವರವರ ವಯೋಸಹಜ ಮನೋಸಹಜ ಬಯಕೆಗಳು. ಹಾಗೆಯೇ ಲಿಂಗಸಮಾನತೆಯಲ್ಲಿ ನೋಡಿದಾಗ ಇದಕ್ಕೆ ಮತ್ತೊಂದು ಆಯಾಮವಿದೆ. ಒಟ್ಟಾರೆಯಾಗಿ ಇಬ್ಬರು ವ್ಯಕ್ತಿಗಳ ಭೇಟಿಯನ್ನು ಕೀಳಾಗಿ ನೋಡುವುದು, ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಒಂದೆಡೆಯಾದರೆ, ಜೋಡಿಗಳ ಮೇಲೆ ಕೈ ಮಾಡುವುದು ಮತ್ತು ಪೈಶಾಚಿಕ ಕೃತ್ಯಕ್ಕಿಳಿಯುವುದು ಇನ್ನೊಂದೆಡೆ ತಾಂಡವವಾಡುತ್ತಲೇ ಇದೆ. ಇಂಥ ಕಾರಣಗಳಿಂದಾಗಿ ಇಬ್ಬರು ವ್ಯಕ್ತಿಗಳ ಸಹಜ, ಆಪ್ತಭೇಟಿಗೆ ಅವಕಾಶವಿರಲಾರದಷ್ಟು ಸಾಮಾಜಿಕ ಸ್ಥಿತಿ ಹದಗೆಟ್ಟಿದೆ. ಹಿನ್ನೆಲೆಯಲ್ಲಿ ರೂಪಿಸಿರುವ ಸರಣಿಟಿವಿ9 ಕನ್ನಡ ಡಿಜಿಟಲ್ಮೀಟಿಂಗ್ ಪಾಯಿಂಟ್


ಅಹಿತವಾಗಿದ್ದೆಲ್ಲ ಕ್ಷಣಮಾತ್ರದಲ್ಲಿ ಜರುಗಿಬಿಡುತ್ತದೆ. ಆದರೆ ಹಿತವಾಗಿದ್ದು? ಜೀವಸಹಜವಾದ ಹಾದಿಯಲ್ಲಿ ನಿಲ್ದಾಣಗಳನ್ನು ಕಂಡುಕೊಳ್ಳುವುದು ಜಟಿಲವೆ? ಇಂಥ ಸಂದರ್ಭದಲ್ಲಿ ನಿಮ್ಮೂರಿನ ಮೀಟಿಂಗ್ ಪಾಯಿಂಟ್ ಗಳನ್ನೊಮ್ಮೆ ಹಿಂದಿರುಗಿ ನೋಡಬಹುದಾ ಎಂದು ವಿವಿಧ ಹಿನ್ನೆಲೆ, ಆಸಕ್ತಿ, ವೃತ್ತಿ, ಪ್ರವೃತ್ತಿಗಳಲ್ಲಿ ಆಸ್ಥೆಯಿಂದ ತೊಡಗಿಕೊಂಡಿರುವವರಿಗೆ ಕೇಳಲಾಗಿ, ತಮ್ಮ ಅನುಭವ-ವಿಚಾರಗಳನ್ನು ಹಂಚಿಕೊಳ್ಳುತ್ತಲಿದ್ಧಾರೆ. ಒಳಧ್ವನಿಗಳನ್ನು ಮುಕ್ತವಾಗಿ ವ್ಯಕ್ತಪಡಿಸಿದಲ್ಲಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಲ್ಲವೆ


ಚೈತ್ರಾ ಅರ್ಜುನಪುರಿ ಮಂಡ್ಯ ಮೂಲದವರು. ಲೇಖಕಿ, ಪತ್ರಕರ್ತೆಯಾಗಿರುವ ಇವರಿಗೆ ನೈಟ್ ಸ್ಕೇಪ್ ಫೋಟೋಗ್ರಫಿ ನೆಚ್ಚಿನ ಹವ್ಯಾಸ. ಸದ್ಯ ಕತಾರಿನಲ್ಲಿ ವಾಸವಾಗಿದ್ದಾರೆಚೈತ್ರಾ ಅವರ ಬರಹ ನಿಮ್ಮ ಓದಿಗೆ :


ಸಾರ್ವಜನಿಕ ಸುರಕ್ಷತೆಗೆ ಭಾರತದಲ್ಲಿ ವಿವಿಧ ಅರ್ಥಗಳಿವೆ, ಅದು ಪುರುಷನಿಗೆ ಬೇರೆಯಾದರೆ ಮಹಿಳೆಗೇ ಬೇರೆ. ಮಾನಸಿಕ ಕಿರುಕುಳ ಒಂದೆಡೆಯಾದರೆ, ಸಾರ್ವಜನಿಕ ಪ್ರದೇಶಗಳಲ್ಲಿ ಆಕೆ ಎದುರಿಸುವುದು ದೈಹಿಕ ಕಿರುಕುಳ, ಹಲ್ಲೆ, ಹಿಂಬಾಲಿಸುವುದು, ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ. ಇವೆಲ್ಲಾ ನಡೆಯುವುದು ಕೇವಲ ಯಾವುದೋ ಒಂದು ನಿರ್ದಿಷ್ಟ ಸ್ಥಳದಲ್ಲಿ ಅಥವಾ ನಿಗದಿತ ಹೊತ್ತಿನಲ್ಲಿ ಮಾತ್ರವಲ್ಲ, ಇವು ಯಾವ ಮಹಿಳೆಗಾದರೂ, ಯಾವಾಗ ಬೇಕಾದರೂ, ಯಾವ ಸ್ಥಳದಲ್ಲಾದರೂ ಆಗಬಹುದು.


ಬೆಂಗಳೂರಿಗೆ ಬಂದು ಎರಡು ವರ್ಷವೂ ಆಗಿರಲಿಲ್ಲ. ಭಾನುವಾರ ಎಂದಿನಂತೆ ಮದ್ದೂರಿನಿಂದ ಹೊರಟು ಮೆಜೆಸ್ಟಿಕ್ ತಲುಪಿದಾಗ ಕತ್ತಲಾಗಿಬಿಟ್ಟಿತ್ತು. ಗಂಟೆ ಸುಮಾರು ಏಳೂವರೆ. ಸೋಮವಾರ ಬೆಳಗ್ಗೆ ಒಂಬತ್ತಕ್ಕೆ ನನ್ನ ಕ್ಲಾಸ್ ಶುರುವಾಗಿಬಿಡುತ್ತಿತ್ತು. ಸೋಮವಾರ ಬಸ್ಸುಗಳಲ್ಲಿ ವಿಪರೀತ ನೂಕು ನುಗ್ಗಾಟವೆಂದು ಸದಾ ಭಾನುವಾರ ಸಂಜೆಯೇ ಬೆಂಗಳೂರಿಗೆ ಮರಳಿಬಿಡುತ್ತಿದ್ದೆ. ಹೆಚ್..ಎಲ್. ಸಿಟಿ ಬಸ್ ಹತ್ತಿ, ಕಿಟಕಿಯ ಬಳಿ ಸೀಟು ಹಿಡಿದು ಎಂದಿನ ಹಾಗೆ ಬ್ಯಾಗಿನಲ್ಲಿದ್ದ ಪುಸ್ತಕವೊಂದನ್ನು ಹೊರತೆಗೆದೆ. ಸಿವಿಲ್ ಸರ್ವಿಸ್ ತಯಾರಿಯಲ್ಲಿದ್ದ ನನಗೆ ಬಸ್ಸಿನಲ್ಲಿ, ಆಟೋದಲ್ಲಿ ಓಡಾಡುವಾಗಲೂ ಕೈಯಲ್ಲಿ ಸದಾ ಪುಸ್ತಕ, ಓದು, ಪರೀಕ್ಷೆಯ ಆತಂಕ ಮನೆ ಮಾಡಿರುತ್ತಿತ್ತು. ಓದಿನಲ್ಲಿ ಮಗ್ನಳಾಗಿದ್ದ ನನ್ನನ್ನು ಬೆಚ್ಚಿ ಬೀಳುವಂತೆ ಮಾಡಿದ್ದು ಹಿಂಬದಿಯಿಂದ ನನ್ನ ಬಲ ತೋಳನ್ನು ಸವರಲು ಪ್ರಾರಂಭಿಸಿದ ಬೆರಳುಗಳು. ಬೈ ಮಿಸ್ಟೇಕ್ ಇರಬಹುದು ಎಂದುಕೊಂಡು ಸುಮ್ಮನಾದವಳಿಗೆ ಮತ್ತದೇ ಬೆರಳುಗಳು ತಾಕಿದಾಗ ಮೈಮೇಲೆ ಕಂಬಳಿಹುಳು ಹರಿದಂತಾಯಿತು. ಹಿಂದಕ್ಕೆ ತಿರುಗಿ ಅಲ್ಲಿ ಕುಳಿತಿದ್ದವನನ್ನು ಕೆಕ್ಕರಿಸಿ ನೋಡಿದೆ. ಅವನು ಏನೂ ಆಗಿಲ್ಲವೆನ್ನುವ ಹಾಗೆ ಸುಮ್ಮನೆ ಕುಳಿತಿದ್ದ.


ಮತ್ತೆ ನಾನು ಪುಸ್ತಕದಲ್ಲಿ ತಲೆ ಹುಡುಗಿಸಿದೆ, ಹಿಂಬದಿಯಿಂದ ಅದೇ ಬೆರಳುಗಳು ಮತ್ತೆ ತಾಕಿದಾಗ, ದಢಾರನೆ ಮೇಲೆದ್ದು ಅವನನ್ನು ನೋಡುತ್ತಾ, “ಮನೇಲಿ ಏನು ನಿಂಗೆ ಅಕ್ಕ, ತಂಗೀರು ಇಲ್ವ? ಅವರಿಲ್ದಿದ್ರೆ ಬೇಡ, ನಿಮ್ಮಮ್ಮ ಇಲ್ವ? ನಿಮ್ಮಮ್ಮನ್ನ ಹೀಗೆ ಯಾವನೋ ಬಂದು ಮುಟ್ಟಿದ್ರೆ ಅವ್ರು ತೆಪ್ಪಗಿರ್ತಾರ? ನೀನು ತೆಪ್ಪಗಿರ್ತೀಯಾ?” ಎಂದು ಒಂದೇ ಉಸಿರಿಗೆ ಅವನನ್ನು ಜೋರು ದನಿಯಲ್ಲಿ ಬಯ್ಯತೊಡಗಿದೆ. ವಿಷಯ ತಿಳಿದ ಕಂಡಕ್ಟರ್ ವ್ಯಕ್ತಿಯ ಕೆನ್ನೆಗೆ ಹೊಡೆದೇ ಬಿಟ್ಟರು. “ಹೆಣ್ಣುಮಕ್ಕಳು ಕತ್ತಲಾದ ಮೇಲೆ ಆಟೋ ಹತ್ತೋಕೆ ಭಯಪಟ್ಟು ಸಿಟಿ ಬಸ್ ಹತ್ತಿದ್ರೆ, ಇಲ್ಲಿ ನಿಮ್ಮಂಥವರು ಬಂದು ನಮಗೆ ಹಿಂಸೆ ಕೊಡ್ತೀರಾ,” ಎನ್ನುತ್ತಾ ಬಸ್ ನಿಲ್ಲಿಸಿ ಅವನನ್ನು ಅಲ್ಲಿಯೇ ಹೊರದಬ್ಬಿದರು. ನಾನು ಅವರಿಗೆ ಥ್ಯಾಂಕ್ಸ್ ಹೇಳಿದೆ, ಆದರೆ ಕಂಡಕ್ಟರ್, “ನನಗ್ಯಾಕೆ ಥ್ಯಾಂಕ್ಸ್ ಹೇಳ್ತೀರಾ, ಮೇಡಂ. ನೋಡಿ ಅಷ್ಟು ಉಗಿದು ಉಪ್ಪಿನಕಾಯಿ ಹಾಕಿದ್ರೂ ನನ್ಮಗ ಮಗ ಒಂದ್ಸಲಾನೂ ಸಾರಿ ಹೇಳ್ಲಿಲ್ಲ. ನಿಮ್ಮ ಹಾಗೆ ಬೇರೆಯವರೂ ಝಾಡಿಸಿದ್ರೆ ಇಂಥವರಿಗೆ ಬುದ್ಧಿ ಬರೋದು,” ಎಂದು ನಕ್ಕರು.


ರೂಮು ತಲುಪಿದ ಮೇಲೆ ನಡೆದ ವಿಚಾರವನ್ನು ಅಮ್ಮನಿಗೆ ತಿಳಿಸಿದೆ. ಬಳಿಕ ಅಮ್ಮ ಅಪ್ಪನಿಗೆ ನನಗೊಂದು ಸ್ಕೂಟಿಯನ್ನು ತೆಗೆದುಕೊಡುವಂತೆ ಒತ್ತಾಯಿಸಿದರು. ಗಾಡಿ ಕೊಡಿಸುವುದಲ್ಲ ಸಮಸ್ಯೆ, ಅದರ ಪೆಟ್ರೋಲಿಗೂ ನಾನೇ ಕಾಸು ಕೊಡಬೇಕಾಗುತ್ತದೆ ಎಂದು ರಾಗವಾಡುತ್ತಲೇ, ಅದೇ ತಾನೇ ಮಾರುಕಟ್ಟೆಗೆ ಬಂದಿದ್ದ ಸ್ಕೂಟಿ ಪೆಪ್ ಕೊಡಿಸಿದರು. ಆಗ ಪೆಟ್ರೋಲ್ ದರ 32-33 ರೂಪಾಯಿ, ಅದಕ್ಕೂ ಸು ಕೇಳಬಾರದೆಂದುಕೊಂಡು ಹೋಮ್ ಸೈನ್ಸ್ ಕಾಲೇಜಿನಲ್ಲಿ ಕೆಲಸಕ್ಕೆ ಇಂಗ್ಲಿಷ್ ಉಪನ್ಯಾಸಕಿಯಾಗಿ ಕೆಲಸಕ್ಕೆ ಸೇರಿಕೊಂಡೆ. ಸರ್ಕಾರ ವರ್ಷಕ್ಕೊಮ್ಮೆ ನೀಡುತ್ತಿದ್ದ (ತಿಂಗಳಿಗೆ 1,200 ರೂಪಾಯಿ) ಸಂಬಳ ಸಾಕಾಗದೇ, ಖಾಸಗಿ ಕನ್ಸಲ್ಟೆನ್ಸಿಯೊಂದರಲ್ಲಿ IELTS, GRE, GMAT, ಮತ್ತು ಸ್ಪೋಕನ್ ಇಂಗ್ಲೀಷ್ ತರಬೇತಿ ಕೊಡಲು ಪ್ರಾರಂಭಿಸಿದೆ. ಅಪ್ಪ ಕೊಡಿಸಿದ್ದ ಸ್ಕೂಟಿಯ ಸಂಪೂರ್ಣ ಮೂವತ್ತು ಸಾವಿರವನ್ನು ಆರು ತಿಂಗಳುಗಳಲ್ಲಿ ಹಿಂತಿರುಗಿಸಿದ ಖುಷಿಯಲ್ಲಿದ್ದ ನನ್ನನ್ನು ಕನ್ಸಲ್ಟೆನ್ಸಿಯ ಮ್ಯಾನೇಜರ್ ಆಗಿದ್ದ ಗೆಳತಿ ತಿರುಪತಿಗೆ ಹೋಗಿ ತಿಮ್ಮಪ್ಪನ ದರ್ಶನ ಮಾಡಿಕೊಂಡು ಬರಲು ಆಹ್ವಾನಿಸಿದಳು.


ಜೊತೆಯಲ್ಲಿ ಹುಡುಗರಿದ್ದರೆ ಸೇಫ್ಟಿ ಎನ್ನುತ್ತಾ ಆಕೆ ತನ್ನ ಕೆಲವು ಗೆಳೆಯರನ್ನು ಕೇಳಿ ಅವರಿಗೆ ಬಿಡುವಿಲ್ಲವೆಂದು ತಿಳಿದಾಗ, ಆಗ ಈಗ ಎಂದುಕೊಂಡು ಎರಡು ಮೂರು ತಿಂಗಳ ನಂತರ ಕನ್ಸಲ್ಟೆನ್ಸಿಯಲ್ಲಿಯೇ ಇದ್ದ ಆಫೀಸ್ ಬಾಯ್ ನನ್ನು ಕರೆದುಕೊಂಡು ಕೊನೆಗೆ ಒಂದು ಮುಂಜಾನೆ ತಿರುಪತಿಯ ಬಸ್ ಹತ್ತಿಯೇ ಬಿಟ್ಟೆವು. ತಿರುಪತಿಗೆ ಅದು ನನ್ನ ಮೊದಲ ಭೇಟಿ. ತಿರುಮಲದಲ್ಲಿ ಗೆಳತಿಗಿದ್ದ ಪರಿಚಯಸ್ಥ ಪ್ರಾಧ್ಯಾಪಕರೊಬ್ಬರು ವಿಶೇಷ ದರ್ಶನಕ್ಕೆ ಟಿಕೇಟುಗಳನ್ನು ತೆಗೆದಿರಿಸಿದ್ದರು.


ಗೋವಿಂದ, ಗೋವಿಂದ ಎಂದು ತಿಮ್ಮಪ್ಪನ ನಾಮಸ್ಮರಣೆ ಮಾಡುತ್ತಾ ಭಕ್ತರ ಸಾಲು ಆಮೆಗತಿಯಲ್ಲಿ ಸಾಗುತ್ತಿತ್ತು. ಅದರ ನಡುವೆ ಹಿಂಬದಿಯಿಂದ ಮೈ ತಾಕಿಸುತ್ತಿರುವ ಅನುಭವ. ತಿರುಗಿ ನೋಡಿದರೆ ನಮ್ಮೊಟ್ಟಿಗೆ ಬಂದಿದ್ದ ಕನ್ಸಲ್ಟೆನ್ಸಿಯ ಹುಡುಗ. ಒಂದೆರಡು ಸಲ ಅವನನ್ನು ಮುಂದಕ್ಕೆ ಬರುವಂತೆ ಹೇಳಿ ಅವನು ಒಪ್ಪದ ಹಾಗೆ ಕಂಡಾಗ, ಗೆಳತಿ ನನ್ನ ಹಿಂಬದಿಗೆ ಬಂದು ನಿಂತಳು. ಪಕ್ಕದಲ್ಲಿ ಬಂದು ಭುಜ ತಾಗಿಸಿಕೊಂಡು ಹುಡುಗ ನಿಂತ ಮೇಲೆ ನನಗೆ ಮೈಯೆಲ್ಲಾ ಉರಿದು ಹೋಯಿತು. ಹೋಗಿದ್ದು ಭಗವಂತನ ದರ್ಶನಕ್ಕೆ, ಅವನ ಸನ್ನಿಧಿಯಲ್ಲಿ ಮನಸ್ಸಿಗೆ ಕಿರಿಕಿರಿ. ಮಂದಿರದೊಳಗೆ ಕಾಲಿರಿಸುವ ಸಮಯದಲ್ಲಿ ಅಚಾನಕ್ ನೂಕು ನುಗ್ಗಲು, ಸಿಡುಕಿನಲ್ಲಿ ತಿಮ್ಮಪ್ಪನಿಗೆ ಕೈ ಮುಗಿದೇನೋ ಇಲ್ಲವೋ ಸರಿಯಾಗಿ ನೆನಪಿಲ್ಲ.


ಬೆಟ್ಟದಿಂದಿಳಿದು, ತಿರುಮಲದಲ್ಲಿ ಊಟ ಮಾಡಲು ಹೋಟೆಲಿಗೆ ಹೋದೆವು. ಅಲ್ಲಿಗೆ ಗೆಳತಿಯ ಪರಿಚಯಸ್ಥ ಪ್ರಾಧ್ಯಾಪಕರು ಬಂದಾಗ ನಡೆದ ಸಂಗತಿಯನ್ನು ಗೆಳತಿ ಅವರಿಗೆ ತಿಳಿಸಿದಳು. ಹುಡುಗನಿಗೆ ಅವರು ತೆಲುಗಿನಲ್ಲಿ ಚೆನ್ನಾಗಿ ಬಯ್ದರು. ಆತ ತನ್ನದೇನೂ ತಪ್ಪಿಲ್ಲವೆಂದು ವಾದಕ್ಕಿಳಿದಾಗ, ಅಷ್ಟೂ ಹೊತ್ತು ತಡೆದುಕೊಂಡಿದ್ದ ತಾಳ್ಮೆಯ ಕಟ್ಟೆ ಒಡೆದುಹೋಯಿತು. ಚೇರಿನಿಂದೆದ್ದು ಎದುರಿಗೆ ಕೂತಿದ್ದ ಅವನ ಕೆನ್ನೆಗೆ ರಪ್ಪನೆ ಬಾರಿಸಿಯೇ ಬಿಟ್ಟೆ. ನನ್ನಿಂದ ರೀತಿಯ ಅಚಾನಕ್ ಪ್ರತಿಕ್ರಿಯೆ ನಿರೀಕ್ಷಿಸದಿದ್ದ ಗೆಳತಿಯೂ ಅರೆಕ್ಷಣ ತಬ್ಬಿಬಾಗಿ ಹೋದಳು. ಅಕ್ಕ ಪಕ್ಕದ ಟೇಬಲಿನಲ್ಲಿದ್ದ ಜನ ನಮ್ಮತ್ತಲೇ ನೋಡುತ್ತಿದ್ದರು. ಹುಡುಗ ಅವಮಾನ ಮತ್ತು ಕೋಪದಲ್ಲಿ ಭುಸುಗುಡುತ್ತಿದ್ದ. ರೀತಿ ಅವಮಾನ ಮಾಡಲು ತನ್ನನ್ನೇಕೆ ಕರೆದುಕೊಂಡು ಬಂದಿರಿ ಎಂದು ಅವನು ಗೆಳತಿಯೊಂದಿಗೆ ವಾದಕ್ಕಿಳಿದಾಗ, ಪ್ರಾಧ್ಯಾಪಕರು ಅವನ ಕೆನ್ನೆಗೆ ಮತ್ತೆರಡು ಹೊಡೆದು, “ಮೇಡಂ ಹೊಡೆದರೆ ಅವಮಾನ, ನಾನು ಹೊಡೆದರೆ ಸರಿಯೇ?“ ಎಂದು ಅವನನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡರು.


ಪರಿಚಯಸ್ಥ, ಅದರಲ್ಲೂ ಮೀಸೆಯೂ ಚಿಗುರದ ಹುಡುಗ ದಿನ ನಡೆದುಕೊಂಡ ರೀತಿ ನನ್ನನ್ನು ಬೆಚ್ಚಿಬೀಳಿಸಿಬಿಟ್ಟಿತ್ತು.


ಅವನ ಕಣ್ಣುಗಳಲ್ಲಿ ತಾನು ಮಾಡಿದ್ದು ತಪ್ಪು ಎನ್ನುವ ಭಾವ ಇನಿತೂ ಇಣುಕಲಿಲ್ಲ. ಬೆಂಗಳೂರಿಗೆ ಮರುಳಿದ ಮೇಲೆ ತನಗಾದ ಅವಮಾನವನ್ನು ಬೇರೆ ರೀತಿಯಲ್ಲಿ ನನ್ನ ಮೇಲೆ ಆತ ತಿರುಗಿಸಿದರೆ ಎನ್ನುವ ಭಯವಿದ್ದರೂ ಅವನಿಗೆ ಅಷ್ಟೇ ವಿಶ್ವಾಸದಲ್ಲಿ ಗುಡುಗಿದ್ದೆ, “ಹಳ್ಳಿ ಹುಡುಗಿ ಬೆಂಗಳೂರಲ್ಲಿ ಒಂಟಿಯಾಗಿದ್ದಾಳೆ ಅಂತ ಏನೇನೋ ತಲೆ ಉಪಯೋಗಿಸ್ಬೇಡ. ಮತ್ತೆ ಯಾವತ್ತಾದ್ರೂ ನನ್ನ ಕಡೆ ನೀನು ಕಣ್ಣು ಹಾಕಿದ್ರೆ ಒಂದು ಫೋನು ಅಷ್ಟೇ, ಮಂಡ್ಯದಿಂದ ಜನ ಬರ್ತಾರೆ. ನೀನೆಲ್ಲಿದ್ರೂ ನಿನಗೊಂದು ಗತಿ ಕಾಣಿಸ್ದೆ ಬಿಡಲ್ಲ ನಮ್ಮೂರೋವ್ರು ತಿಳ್ಕೊ.” ನನ್ನ ಮಾತು ಕೇಳಿ ಹುಡುಗ ನಿಜಕ್ಕೂ ಬೆಚ್ಚಿ ಬಿದ್ದಿದ್ದ. ಬಳಿಕ ನಾನು ಕನ್ಸಲ್ಟೆನ್ಸಿಯಲ್ಲಿ ಎದುರಿಗೆ ಬಂದಾಗಲೆಲ್ಲಾ ಅವನು ತಲೆ ಬಗ್ಗಿಸಿಕೊಂಡು ಹೊರಗೆ ನಡೆದು ಬಿಡುತ್ತಿದ್ದ.


ಹೆಣ್ಣು ಮಕ್ಕಳದೇ ತಪ್ಪು, ಅವರು ಕತ್ತಲಿನಲ್ಲಿ ಅಲ್ಲಿಗೆ ಯಾಕೆ ಹೋದರು, ಇಲ್ಲಿಗೆ ಯಾಕೆ ಬಂದರು ಎನ್ನುವ ಪ್ರಶ್ನೆಗಳಿಗೆ ಮೇಲಿನ ಎರಡು ಘಟನೆಗಳು ಸ್ವಯಂ ವಿವರಣೆ ನೀಡುತ್ತವೆ. ಎರಡೂ ಘಟನೆಗಳು ಜರುಗಿದ್ದು ಸಾರ್ವಜನಿಕ ಸ್ಥಳಗಳಲ್ಲಿಯೇ. ಎರಡೂ ಸಲ ಸಂದರ್ಭಕ್ಕನುಗುಣವಾಗಿ, ನನ್ನದೇ ರೀತಿಯಲ್ಲಿ ಪ್ರತಿಭಟಿಸಿದ್ದೇನೆ. ಹಾಗೆಂದು ನನ್ನ ಸುರಕ್ಷೆತೆಗೆ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ಎಂದೂ ಮರೆತಿಲ್ಲ.


ಪತ್ರಕರ್ತೆಯಾಗಿ ನಾನೇ ಪ್ರತಿ ದಿನ ಅನೇಕ ಅತ್ಯಾಚಾರ ಮತ್ತು ಕೊಲೆ ಕಥೆಗಳನ್ನು ಓದಿ, ಎಡಿಟ್ ಮಾಡಿ, ಪತ್ರಿಕೆಗೆ ಹಾಕುವಾಗ ನನ್ನನ್ನು ಆತಂಕ ಕಾಡದೆ ಇರುತ್ತದೆಯೇ? ಇಂತಹ ಸುದ್ದಿಗಳನ್ನು ನೋಡಿ ಯಾವುದೇ ರೀತಿಯ ದಾಳಿಯನ್ನು, ಯಾವುದೇ ಸಮಯದಲ್ಲಿ ಬೇಕಾದರೂ ನಿರೀಕ್ಷಿಸಬಹುದು ಎಂದು ನನ್ನ ಬುದ್ಧಿ ಸದಾ ಎಚ್ಚರಿಸುತ್ತಿತ್ತು. ಕೈಗೆ ಕಟ್ಟಿದ್ದ ವಾಚನ್ನು ನಾನು ನೋಡುತ್ತಿದ್ದದ್ದು ಹಗಲು ರಾತ್ರಿ ಎನ್ನುವ ಸಮಯ ತಿಳಿಯುವುದಕ್ಕಿಂತಲೂ, ಹೊತ್ತಿಗೆ ಆಫೀಸಿನಿಂದ ಹೊರಟರೆ ಸುರಕ್ಷಿತವಾಗಿ ಮನೆ ತಲುಪಬಹುದು, ಹೊತ್ತನ್ನು ಗಡಿಯಾರದ ಮುಳ್ಳು ದಾಟಿದರೆ ಅಪಾಯ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಲು.


ಮೆದುಳು ಸದಾ ಸಕ್ರಿಯವಾಗಿ ಯಾವ ರಸ್ತೆಯಲ್ಲಿ ಚೆನ್ನಾಗಿ ಬೆಳಕಿರುತ್ತದೆ, ಯಾವ ರಸ್ತೆಯಲ್ಲಿ ಜನರು ರಾತ್ರಿಯಲ್ಲೂ ಓಡಾಡುತ್ತಿರುತ್ತಾರೆ, ಯಾವ ತಿರುವಿನ ಬಳಿಕ ಸಿಗ್ನಲ್ ಇರುತ್ತವೆ ಎನ್ನುವುದನ್ನು ಲೆಕ್ಕ ಹಾಕಿದರೆ, ನಿರ್ಜನ ರಸ್ತೆಯಲ್ಲಿ ಸಿಗ್ನಲ್ ಕೆಂಪಾದರೆ ಮೈಯೆಲ್ಲಾ ಕಣ್ಣಾಗಿ ಸುತ್ತಮುತ್ತಲೂ ಯಾರಾದರೂ ದಾಳಿ ಮಾಡಿದರೆ ಎನ್ನುವ ಆತಂಕದಲ್ಲಿರುವಾಗಲೇ ಸಿಗ್ನಲ್ ಹಸಿರಾಗಿ ಹೋದ ಜೀವ ಬಂದಂತಾಗುತ್ತಿತ್ತು.


ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಕೆಲಸ ಮುಗಿಸಿ ಮನೆ ತಲುಪುವಷ್ಟರಲ್ಲಿ ರಾತ್ರಿ 11.30 ಆಗಿಬಿಡುತ್ತಿತ್ತು. ನಾನು ಬರುವುದು ತಡವಾಗುತ್ತದೆ ಎನ್ನುವುದು ಅರಿತಿದ್ದ ಮನೆ ಮಾಲೀಕ ಮೊದಲ ದಿನವೇ, “ಅಲಸೂರಿನ ಕೆರೆ ಮುಗಿದ ಮೇಲೆ, ಇಂದಿರಾನಗರದ ಒಳಗೆ ಬಾರಮ್ಮ. ನೀವು ಪೇಪರ್ ನವರು, ನಿಮಗೆ ಭಂಡ ಧೈರ್ಯ ಬೇರೆ. ಬಿಡಿಎ ಕಾಂಪ್ಲೆಕ್ಸ್ ರಸ್ತೇಲಿ ರಾತ್ರಿ ಹೊತ್ತು ಜನ ಓಡಾಡಲ್ಲ, ದೆವ್ವ-ಭೂತಗಳ ಕಾಟ, ಅಲ್ಲೇ ಸ್ಮಶಾನ ಬೇರೆ ಇದೆ!” ಎಂದಾಗ, “ಬೆಂಗಳೂರಲ್ಲಿ ದೆವ್ವಗಳಿಗಿಂತ ನಂಗೆ ಜನರದ್ದೇ ಭಯ, ಅಂಕಲ್,” ಎಂದು ನಕ್ಕಿದ್ದೆ.


ಎಂ.ಜಿ. ರಸ್ತೆಯಿಂದ ನನ್ನ ಬಾಡಿಗೆ ಮನೆಯಿದ್ದ ಬೈಯಪ್ಪನಹಳ್ಳಿಗೆ, ಅಲಸೂರು ಕೆರೆ ದಾಟಿ, ಹಳೆ ಮದ್ರಾಸ್ ರಸ್ತೆಯಲ್ಲಿ ಸಿ.ಎಂ.ಹೆಚ್. ರಸ್ತೆಗೆ ಹೋಗಿ ಬಳಸಿಕೊಂಡು ಮನೆ ತಲುಪುತ್ತಿದ್ದೆ. ಪ್ರತಿ ರಾತ್ರಿಯೂ ಮನೆ ತಲುಪಲು ಬೇರೆ ಬೇರೆ ಮಾರ್ಗಗಳು. ಅಲಸೂರು ಕೆರೆಯಿಂದ ನೇರವಾಗಿ ಹಳೆ ಮದ್ರಾಸ್ ರಸ್ತೆಯಲ್ಲಿ ಬೈಯಪ್ಪನಹಳ್ಳಿ ತಲುಪಬಹುದಾಗಿದ್ದರೂ, ಬ್ಯಾಗಿನಲ್ಲಿ ಸದಾ ಪೆಪ್ಪರ್ ಸ್ಪ್ರೇ ಇಟ್ಟುಕೊಂಡು ತಿರುಗಾಡುತ್ತಿದ್ದರೂ, ಕತ್ತಲಿನಲ್ಲಿ ಜನಸಂದಣಿಯಿಲ್ಲದಿರುವ ರಸ್ತೆಗಳಲ್ಲಿ ಗಾಡಿ ಓಡಿಸಲೂ ಮನಸ್ಸು ಅಳುಕುತ್ತಿತ್ತು.


ಮಳೆಯಿದ್ದರೂ, ನೆನೆದುಕೊಂಡೇ ರಾತ್ರಿಗಳಲ್ಲಿ ಮನೆ ತಲುಪುತ್ತಿದ್ದೆನೇ ಹೊರತು, ಮಳೆ ನಿಲ್ಲುವವರೆಗೂ ಕಾದರೆ ಮತ್ತಷ್ಟೂ ಹೊತ್ತಾಗುತ್ತದೆ ಎನ್ನುವ ಆತಂಕ ಸದಾ ಇರುತ್ತಿತ್ತು.ಮಾತ್ರವಲ್ಲದೆ, ಆಫೀಸಿನಿಂದ ಹೊರಡುವಾಗ ಈಗ ಹೊರಟಿದ್ದೇನೆ ಎಂದು ಅಮ್ಮನಿಗೆ ಫೋನ್ ಮಾಡಿದರೆ, ಅರ್ಧ ಗಂಟೆಯೊಳಗೆ ಮನೆ ತಲುಪಿ, ನಾನು ತಲುಪಿದೆ ಎಂದು ಕರೆ ಮಾಡುವವರೆಗೂ ಅಮ್ಮ ಮಲಗುತ್ತಿರಲಿಲ್ಲ. ಅರ್ಧ ಗಂಟೆಯ ಮೇಲೆ ಐದು ನಿಮಿಷ ತಡವಾದರೂ ಅಮ್ಮ ಚಡಪಡಿಸಿಬಿಡುತ್ತಿದ್ದರು, ನಾನು ಫೋನು ತೆಗೆಯುವವವರೆಗೂ ಸತತವಾಗಿ ಕರೆ ಮಾಡುತ್ತಲೇ ಇರುತ್ತಿದ್ದರು. ಮನೆಯ ಮುಂದೆ ಗಾಡಿ ನಿಲ್ಲಿಸಿ, ಕರೆ ಸ್ವೀಕರಿಸಿದ ಮೇಲೆಯೇ ಅವರಿಗೆ ಸಮಾಧಾನವಾಗುತ್ತಿದ್ದದ್ದು.


ದೇಶ ಕಾಲಮಿತಿಯನ್ನು ದಾಟಿ ಲೈಂಗಿಕ ಕಿರುಕುಳ ಮತ್ತು ಬಗೆಯ ದೌರ್ಜನ್ಯಗಳು ಎಷ್ಟು ಸಾಮಾನ್ಯವಾಗಿವೆಯೆಂದರೆ ಯಾರಾದರೂ ಒಬ್ಬ ಹುಡುಗಿಯನ್ನು ಹಿಂಬಾಲಿಸಿದರೆ, ಅಥವಾ ಯಾರಾದರೂ ಒಬ್ಬ ಮಹಿಳೆಯ ಮೈ ಕೈ ಸವರಿದರೆ ಅವುಗಳನ್ನು ಗಂಭೀರ ಸಮಸ್ಯೆಗಳೆಂದು, ಬೇರೆಯವರಿರಲಿ ಸ್ವತಃ ಮಹಿಳೆಯರೇ ಹೇಳುವುದಿಲ್ಲ. ಇಂತಹ ಒಂದೆರಡು ಘಟನೆಗಳನ್ನು ಪರಿಚಿತರೊಡನೆಯೋ, ಇಲ್ಲವೇ ಕುಟುಂಬದವರೊಡನೆಯೇ ಹಂಚಿಕೊಳ್ಳಲು ಹೋದರೆ ಸಿಗುವ ನಿರೀಕ್ಷಿತ ಪ್ರತಿಕ್ರಿಯೆ ಏನು ಗೊತ್ತೇ? ಪುಣ್ಯಕ್ಕೆ ಅದು ಲೈಂಗಿಕ ದೌರ್ಜನ್ಯ ಅಲ್ಲ ಬಿಡು, ಅದೇನು ಅತ್ಯಾಚಾರವಲ್ಲ ಬಿಡುಅಷ್ಟಕ್ಕೂ ಮಹಿಳೆಯ ದೂರು ನಿಲ್ಲದಿದ್ದಲ್ಲಿ ಆಕೆಗೆ ಸಿಕ್ಕೇ ಸಿಗುವ ಪುಕ್ಕಟೆ ಸಲಹೆ, ಹೋಗಲಿ ಬಿಡು, ದಾರಿ ಬೇಡ, ಪಕ್ಕದ ರಸ್ತೆಯಲ್ಲಿ ಹೋಗು, ಬಸ್ ಬೇಡ, ಬೇರೆ ರೂಟಿನ ಬಸ್ ಹಿಡಿ, ನಿನ್ನ ದಿನಚರಿಯನ್ನೇ ಬದಲಾಯಿಸಿಕೊ, ಇತ್ಯಾದಿ.


ಡೆಕ್ಕನ್ ಕ್ರಾನಿಕಲ್ ಪತ್ರಿಕೆಗೆ ಸೇರಿದ ಮೇಲೆ ನಾನು ವಾಸವಿದ್ದ ಮನೆ ಆಫೀಸಿನಿಂದ ಕೇವಲ ಎರಡು ರಸ್ತೆ ಹಿಂಬದಿಯಿದ್ದರೂ ಜವಾಬ್ದಾರಿಗಳು ಹೆಚ್ಚಾಗಿ ಮನೆ ತಲುಪುವಷ್ಟರಲ್ಲಿ ರಾತ್ರಿ 1.30-2 ಆಗಿಬಿಡುತ್ತಿತ್ತು. ಆಗಲೂ ಮನೆ ತಲುಪಿ ಫೋನ್ ಮಾಡುವವರೆಗೂ ಅಮ್ಮ ಮಲಗುತ್ತಿರಲಿಲ್ಲ. ಆಫೀಸಿನ ಹಿಂಬದಿಯೇ ಮನೆಯಿದೆ, ಮಲಗಿ ಎಂದು ಎಷ್ಟು ಸಲ ಹೇಳಿದರೂ ಅಮ್ಮ ಹೇಳುತ್ತಿದ್ದದ್ದು ಒಂದೇ ಮಾತು, “ನಿನಗೆ ಮಗಳು ಹುಟ್ಟಿದಾಗ ನನ್ನ ಆತಂಕ ನಿನ್ಗೆ ಅರ್ಥ ಆಗುತ್ತೆ.” ಹಾಗೆಂದು ಪತ್ರಿಕೋದ್ಯಮ ಯಾಕೆ ಬೇಕು, ಮರಳಿ ಉಪನ್ಯಾಸಕಿಯಾಗಿಯೇ ಮುಂದುವರಿಯೆಂದು ಅಪ್ಪ-ಅಮ್ಮ ಯಾವತ್ತೂ ಹೇಳಲಿಲ್ಲ. ನಾನು ಸುರಕ್ಷಿತವಾಗಿ ಪ್ರತಿ ರಾತ್ರಿ ಮನೆ ತಲುಪುವವರೆಗೂ ಇಬ್ಬರಿಗೂ ಆತಂಕವಿದ್ದರೂ, ನಾನು ಮೆಚ್ಚಿ ಆಯ್ಕೆ ಮಾಡಿಕೊಂಡಿದ್ದ ನೈಟ್ ಶಿಫ್ಟ್ ಇರುವ ವೃತ್ತಿಯ ಬಗ್ಗೆ ಇಬ್ಬರೂ ಬೇಸರಿಸಿಕೊಳಲಿಲ್ಲ.


ಕತಾರಿಗೆ ಬಂದ ಮೇಲೆ ನಾನು ನೈಟ್ ಸ್ಕೇಪ್ ಫೋಟೋಗ್ರಫಿ ಎಂದು ಅಮಾವಾಸ್ಯೆ ರಾತ್ರಿಗಳಲ್ಲಿ ಮರಳುಗಾಡಿಗೆ ಹೋಗುವುದು ನೋಡಿದ್ದರೆ ಬಹುಶಃ ಅಪ್ಪ-ಅಮ್ಮ ಇಬ್ಬರೂ ನಿದ್ರೆ ಮಾಡುತ್ತಿರಲಿಲ್ಲವೇನೋ ಎಂದು ಸಾಕಷ್ಟು ಸಲ ಅನ್ನಿಸಿದ್ದಿದೆ. ನಾವು ಹೆಣ್ಣುಮಕ್ಕಳಲ್ಲಿ ಸಿಕ್ಸ್ತ್ ಸೆನ್ಸ್ ಎನ್ನುವುದು ಚೆನ್ನಾಗಿ ಕೆಲಸ ಮಾಡುತ್ತದೆ. ಒಂದು ಜಾಗ, ಅಥವಾ ಒಬ್ಬ ವ್ಯಕ್ತಿ ಸರಿಯಲ್ಲ ಎಂದೆನಿಸಿದರೆ ಅಲ್ಲಿಗೆ ಹೋಗುವುದನ್ನು, ವ್ಯಕ್ತಿಯ ಜೊತೆಯಲ್ಲಿ ಹೋಗುವುದನ್ನು ತಪ್ಪಿಸಿಕೊಳ್ಳುತ್ತೇವೆ.


ಪ್ರತಿ ಸಲ ಮರಳುಗಾಡಿಗೆ ಹೋದಾಗಲೂ ಭಯ, ಆತಂಕ ಮೂಡುವುದು ದೆವ್ವ, ಭೂತ ಅಥವಾ ಕಾಡು ಪ್ರಾಣಿ, ಕೀಟಗಳದ್ದಲ್ಲ, ಬದಲಾಗಿ ಮನುಷ್ಯನೆಂಬ ಪ್ರಾಣಿಯದ್ದೇ. ನಾವು ನಿಂತು ಫೋಟೋ ತೆಗೆಯುತ್ತಿರುವ ಸ್ಥಳಕ್ಕೆ ಯಾವುದಾದರೂ ಅಪರಿಚಿತ ಕಾರು ಬಂದು ನಾವೇಕೆ ಸಮಯದಲ್ಲಿ, ಸ್ಥಳದಲ್ಲಿ ಇದ್ದೇವೆ ಎಂದು, ಹುಡುಗರ ಗುಂಪಿನಲ್ಲಿರುವುದು ನಾನೂಬ್ಬಳೇ ಮಹಿಳೆ ಎನ್ನುವುದನ್ನು ನೆನಪು ಮಾಡಿಕೊಡುವಂತೆ, ಅವರು ನನ್ನನ್ನೇ ದುರುಗುಟ್ಟಿಕೊಂಡು ನೋಡುತ್ತಾ ಪ್ರಶ್ನೆಗಳನ್ನು ಕೇಳುವಾಗ ಪ್ರತಿ ಸಲವೂ ಎದೆ ಬಡಿತ ಜೋರಾಗುತ್ತದೆ.


ಭಾರತ ಮಾತ್ರವಲ್ಲ, ಪಾಶ್ಚಿಮಾತ್ಯ ದೇಶಗಳಲ್ಲಿಯೂ ಮಹಿಳೆಯರು ರಾತ್ರಿ ಹೊತ್ತಿನಲ್ಲಿ ಒಂಟಿಯಾಗಿ ಓಡಾಡಲು ಭಯ ಬೀಳುತ್ತಾರೆ. ವಾಸ್ತವವಾಗಿ, ಯುಕೆಯಲ್ಲಿ ಶೇ. 32ರಷ್ಟು ಹಾಗೂ ಬಲ್ಗೇರಿಯಾದಲ್ಲಿ ಶೇ. 62ರಷ್ಟು ಮಹಿಳೆಯರು ತಮ್ಮದೇ ಸ್ಥಳೀಯ ಪ್ರದೇಶದಲ್ಲಿ ರಾತ್ರಿಯಲ್ಲಿ ಏಕಾಂಗಿಯಾಗಿ ನಡೆದಾಡುವುದು ತುಂಬಾ ಅಸುರಕ್ಷಿತ ಎಂದು ಭಾವಿಸುತ್ತಾರೆ ಎಂದು ಇತ್ತೀಚೆಗಷ್ಟೇ ನಡೆಸಿದ ಯೂರೋಪಿಯನ್ ಸೋಷಿಯಲ್ ಸರ್ವೇಯ ಸಂಶೋಧನೆಯೊಂದರಲ್ಲಿ ಕಂಡು ಬಂದಿದೆ. ಹೆಣ್ಣಿನ ಮೇಲೆ ದಾಳಿ ಮಾಡುವವರಿಗೆ ಆಕೆಯ ಶಿಕ್ಷಣ, ಆದಾಯ, ವಯಸ್ಸು, ಸವಲತ್ತು, ದೇಶ, ಸ್ಥಳ ಯಾವುದೂ ಮುಖ್ಯವಾಗುವುದಿಲ್ಲ. ಅವರ ಕಣ್ಣಿಗೆ ಕಾಣುವುದು ಕೇವಲ ಹೆಣ್ಣು ಅಷ್ಟೇ!


(Source: TV9 Kannada)

No comments:

Post a Comment